ಬೆಂಗಳೂರು: 11 ತಿಂಗಳ ಕಾಲ ತೋಟಗಾರಿಕೆ ಮತ್ತು ರೇಷ್ಮೆ ಇಲಾಖೆಯನ್ನು ಸಮರ್ಥವಾಗಿ ನಿರ್ವಹಿಸಿದ್ದು, ಹೆಸರು ಕೆಡಿಸಿಕೊಳ್ಳುವ ಕೆಲಸ ಮಾಡಿಲ್ಲ. ಖಾತೆ ಬದಲಾವಣೆ ಕುರಿತು ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರ ಬಳಿ ಚರ್ಚೆ ನಡೆಸುತ್ತೇನೆ ಎಂದು ಸಚಿವ ನಾರಾಯಣಗೌಡ ಸ್ಪಷ್ಟಪಡಿಸಿದ್ದಾರೆ.
ಸುಧಾಕರ್ ನಿವಾಸದ ಬಳಿ ಮಾತನಾಡಿದ ಅವರು, ನಮ್ಮ ಅಧಿಕಾರಿಗಳು ಹಗಲು ರಾತ್ರಿ ಎನ್ನದೆ ಕೆಲಸ ಮಾಡಿದ್ದಾರೆ. ಕೊರೊನಾ ಲಾಕ್ ಡೌನ್ ವೇಳೆ ರೇಷ್ಮೆ ಬೆಳೆಗಾರರ ಸಂಕಷ್ಟದ ಸಮಯದಲ್ಲಿ ಅಧಿಕಾರಿಗಳು ಹಗಲು-ರಾತ್ರಿ ಕೆಲಸ ಮಾಡಿ ಕೃಷಿಕರ ನೆರವಿಗೆ ಬಂದಿದ್ದರು. ತರಕಾರಿ ಬೀದಿ ಪಾಲಾಗುತ್ತಿತ್ತು, ಅದನ್ನು ಉಳಿಸಲು ಕಾಶ್ಮೀರದಿಂದ ಕನ್ಯಾಕುಮಾರಿವರೆಗೂ ಸರಬರಾಜು ಮಾಡಿಸಲು ನೆರವು ನೀಡಿದ್ದರು. ಅವರಿಗೆ ಅಭಿನಂದನೆ ಸಲ್ಲಿಸುತ್ತೇನೆ ಎಂದರು.