ಕರ್ನಾಟಕ

karnataka

ETV Bharat / state

ನಾನು ಸಿದ್ದರಾಮಯ್ಯ ಅವರ ಬೆಂಬಲದಿಂದ ಸಿಎಂ ಆಗಿಲ್ಲ.. ಕುಮಾರಸ್ವಾಮಿ ತಿರುಗೇಟು

ಮಾಜಿ ಸಿಎಂ ಸಿದ್ದರಾಮಯ್ಯ, ಕುಮಾರಸ್ವಾಮಿ ಮೇಲೆ ಟ್ವೀಟ್​ ಮೂಲಕ ಆಕ್ರೋಶ ಹೊರಹಾಕಿದ ಬೆನ್ನಲ್ಲೇ, ಕುಮಾರಸ್ವಾಮಿ ಅದಕ್ಕೆ ಪ್ರತ್ಯತ್ತರ ನೀಡಿದ್ದಾರೆ. ನಾನೇನು ಸಿದ್ದರಾಮಯ್ಯ ಅವರ ಬೆಂಬಲದಿಂದ ಸಿಎಂ ಆಗಿಲ್ಲ. ಕಾಂಗ್ರೆಸ್​ನ ಹೈಕಮಾಂಡ್​ ನನ್ನನ್ನು ಕರೆದು ಸಿಎಂ ಮಾಡಿತ್ತು ಎಂದು ಹೆಚ್​ಡಿಕೆ ಹೇಳಿದ್ದಾರೆ.

ನಾನು ಸಿದ್ದರಾಮಯ್ಯ ಅವರ ಬೆಂಬಲದಿಂದ ಸಿಎಂ ಆಗಿಲ್ಲ ಎಂದ ಹೆಚ್​​.ಡಿ.ಕೆ

By

Published : Sep 24, 2019, 5:25 PM IST

ಬೆಂಗಳೂರು:ಮೂಲ ಕಾಂಗ್ರೆಸ್ಸಿಗರನ್ನು ಮೂಲೆ ಗುಂಪು ಮಾಡಿ ಐದು ವರ್ಷ ಅಧಿಕಾರದಲ್ಲಿದ್ದ ಸಿದ್ದರಾಮಯ್ಯನವರು ಮಜಾ ಮಾಡಿರುವುದು ಗೊತ್ತಿದೆ ಎಂದು ಮಾಜಿ ಸಿಎಂ ಹೆಚ್ ಡಿ ಕುಮಾರಸ್ವಾಮಿ ಸಿದ್ದರಾಮಯ್ಯ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಉಪ ಚುನಾವಣೆ ಹಿನ್ನೆಲೆಯಲ್ಲಿ ಜೆಡಿಎಸ್ ಕಚೇರಿ ಜೆಪಿ ಭವನದಲ್ಲಿ ಇಂದು ನಡೆಯುತ್ತಿರುವ ಶಿವಾಜಿನಗರ ಹಾಗೂ ಕೆಆರ್‌ಪುರಂ ವಿಧಾನಸಭಾ ಕ್ಷೇತ್ರಗಳ ಮುಖಂಡರ ಸಭೆಗೂ ಮುನ್ನ ಸುದ್ದಿಗಾರರ ಜೊತೆ ಮಾತನಾಡಿದ ಅವರು, ಕಾಂಗ್ರೆಸ್‌ನಿಂದ ಹೊರಗೆ ಬಂದು ಒಂದು ಹೊಸ ಪಕ್ಷ ಕಟ್ಟಿ ತೋರಿಸಲಿ ಎಂದು ಮತ್ತೆ ಸವಾಲು ಹಾಕಿದ್ದಾರೆ.

ಸಿದ್ದರಾಮಯ್ಯ ಟ್ವೀಟ್‌ಗೆ ಹೆಚ್‌ಡಿಕೆ ಗರಂ:ನಾನು ಮುಖ್ಯಮಂತ್ರಿ ಆಗಿರೋದು ಎಲ್ಲರಿಗೂ ಗೊತ್ತಿದೆ. ನಾನು ಸಿದ್ದರಾಮಯ್ಯ ಅವರ ಬೆಂಬಲದಿಂದ ಸಿಎಂ ಆಗಿಲ್ಲ. ಕಾಂಗ್ರೆಸ್‌ನ ಹೈಕಮಾಂಡ್‌ನಿಂದ ನಾನು ಸಿಎಂ ಆಗಿದ್ದೆ. ದೆಹಲಿ ಮಟ್ಟದ ಕೈ ನಾಯಕರು ನನ್ನನ್ನು ಕರೆದು ಸಿಎಂ ಮಾಡಿದ್ರು. ನಾನು ಸ್ವಂತ ಬಲದಿಂದ ಸಿಎಂ ಆಗಿದ್ದೇನೆ ಎಂದು ಎಲ್ಲಿಯೂ ಹೇಳಿಲ್ಲ. ಏಕಾಂಗಿ ಆಗಿ ಯಾವುದೇ ನಾಯಕನಿಲ್ಲದೇ ಒಮ್ಮೆ 40, ಮತ್ತೊಮ್ಮೆ 39 ಸ್ಥಾನ ಗೆದ್ದಿದ್ದೇನೆ ಎಂದು ತಿರುಗೇಟು ನೀಡಿದರು.

ನಾನು ಸಿದ್ದರಾಮಯ್ಯ ಅವರ ಬೆಂಬಲದಿಂದ ಸಿಎಂ ಆಗಿಲ್ಲ ಎಂದ ಹೆಚ್‌ಡಿಕೆ..

ಕಾಂಗ್ರೆಸ್​ನ ಶಕ್ತಿಯಿಂದ ಸಿದ್ದರಾಮಯ್ಯ ಅವರು ಐದು ವರ್ಷ ಮಜಾ ಮಾಡಿದ್ದಾರೆ. ಅವರು ಹೊರಗಡೆ ಬಂದು ಸ್ವಂತ ಪಕ್ಷ ಕಟ್ಡಿ ತೋರಿಸಲಿ. ಸಿದ್ದರಾಮಯ್ಯ ‌ನೆರಳಲ್ಲಿ ನಾನು ರಾಜಕೀಯ ಮಾಡಿಲ್ಲ. ನಮ್ಮ ಪಕ್ಷದಲ್ಲಿ ಇದ್ದಾಗ ಸಿದ್ದರಾಮಯ್ಯನವರ ಅಳಿಲು ಸೇವೆಯನ್ನು ನಾನು ಮಾಡಿದ್ದೇನೆ. ನನ್ನ ಮನೆ ದುಡ್ಡು ಹಾಕಿದ್ದೇನೆ, ದೇವೇಗೌಡರದ್ದೂ ಸಹ ಅಲ್ಲ. ನಾನು ಸಿನಿಮಾ ರಂಗದಲ್ಲಿದ್ದಾಗ ದುಡ್ಡು ಹಾಕಿ ಬ್ಯಾನರ್, ಪೋಸ್ಟರ್ ಹಾಕಿಸಿ ಜನರನ್ನು ಸೇರಿಸಿದ್ದೆ. ನಾನು ಯಾರನ್ನೂ ಬಳಸಿಕೊಂಡಿಲ್ಲ. ನನ್ನನ್ನು ಅವರೇ ಬಳಸಿಕೊಂಡು ಬಿಸಾಡಿರೋದು. ನನಗೆ ಅಧಿಕಾರ ಕೊಡ್ರಪ್ಪ ಎಂದು ಅವರ ಮನೆಗೆ ನಾನು ಹೋಗಿದ್ನಾ..? ಎಂದು ಪ್ರಶ್ನಿಸಿದರು.

ನನ್ನನ್ನು ಉಪಯೋಗ ಮಾಡಿಕೊಂಡು ಏನೇನು ಮಾಡಿಕೊಂಡಿದ್ದಾರೆ ಅನ್ನೋದು ಗೊತ್ತು. ಅದನ್ನು ಅವರು ಆತ್ಮಾವಲೋಕನ ಮಾಡಿಕೊಳ್ಳಲಿ. ನಾನು ಅಧಿಕಾರಕ್ಕೆ ಬಂದು ನನ್ನ ಶಕ್ತಿಯನ್ನು ಹಾಳು ಮಾಡಿಕೊಂಡೆ. ರೈತರ ಸಾಲ ಮನ್ನಾಕೋಸ್ಕರ ಅಷ್ಟೇ ನಾನು ಸರ್ಕಾರದಲ್ಲಿ ಸಿಎಂ ಆಗಿ ತಾಳ್ಮೆಯಿಂದ ಇದ್ದೆ. ಮುಖ್ಯಮಂತ್ರಿಗಿರಿಯಿಂದ ವೈಯಕ್ತಿಕವಾಗಿ ನಾನು ಸಂಪಾದನೆ ಮಾಡುವಂತದ್ದು ಏನಿಲ್ಲ ಎಂದರು.

ಕಾಂಗ್ರೆಸ್, ಜೆಡಿಎಸ್‌ನವರ ನಾಟಕ ಇಡೀ ರಾಜ್ಯದ ಜನತೆಗೆ ಗೊತ್ತಿದೆ ಎಂಬ ವಿಜಯೇಂದ್ರ ಹೇಳಿಕೆ ವಿಚಾರಕ್ಕೆ ಪ್ರತಿಕ್ರಿಯಿಸಿದ ಅವರು, ವಿಜಯೇಂದ್ರ ಬಗ್ಗೆ ಮಾತನಾಡುವುದಕ್ಕೆ ಅವರೇನು ಮಹಾನಾಯಕನಾ ಎಂದು ಪ್ರಶ್ನಿಸಿದರು. ಉಪ ಚುನಾವಣೆ ಹಿನ್ನೆಲೆಯಲ್ಲಿ ಅಭ್ಯರ್ಥಿಗಳ ಆಯ್ಕೆ ಸಂಬಂಧ ಈಗಾಗಲೇ ಹುಣಸೂರು, ಕೆಆರ್‌ಪೇಟೆ, ಯಶವಂತಪುರ, ಮಹಾಲಕ್ಷ್ಮಿ ಲೇಔಟ್, ಚಿಕ್ಕಬಳ್ಳಾಪುರ ಕ್ಷೇತ್ರಗಳ ಸಭೆ ಮುಗಿದಿದೆ. ಇವತ್ತು ಶಿವಾಜಿನಗರ ಹಾಗೂ ಕೆಆರ್‌ಪುರಂ ಕ್ಷೇತ್ರಗಳ ಸಭೆ ಕರೆಯಲಾಗಿದೆ. ನಾಳೆ ಗೋಕಾಕ್ ಅಥಣಿ ಹಾಗೂ ಕಾಗವಾಡ ಕ್ಷೇತ್ರಗಳ ಸಭೆ ಕರೆಯಲಾಗಿದೆ ಎಂದು ಹೇಳಿದರು.
ಸೆ.26 ರಂದು ಸಂಸದೀಯ ಮಂಡಳಿ ಸಭೆ ಕರೆಯಲಾಗಿದೆ. ಜೆಡಿಎಸ್ ರಾಷ್ಟ್ರೀಯ ಅಧ್ಯಕ್ಷ ಹೆಚ್‌ ಡಿ ದೇವೇಗೌಡರು ಹಾಗೂ ಸಂಸದೀಯ ಮಂಡಳಿ ಸದಸ್ಯರು ಚರ್ಚಿಸಿ ಹದಿನೇಳು ಅಭ್ಯರ್ಥಿಗಳನ್ನು ಅಂತಿಮಗೊಳಿಸಲಾಗುವುದು ಎಂದರು.

ABOUT THE AUTHOR

...view details