ಬೆಂಗಳೂರು:''ಹಿಂದೂ ಧರ್ಮದ ವಿರುದ್ದ ಅವಹೇಳನಕಾರಿಯಾಗಿ ನಾನು ಮಾತನಾಡಿಲ್ಲ. ನಾವೆಲ್ಲಾ ಹಿಂದೂಗಳು'' ಎಂದು ಗೃಹ ಸಚಿವ ಡಾ.ಜಿ.ಪರಮೇಶ್ವರ್ ಸ್ಪಷ್ಟಪಡಿಸಿದ್ದಾರೆ.
ಸದಾಶಿವನಗರ ತಮ್ಮ ನಿವಾಸದ ಬಳಿ ಮಾತನಾಡಿದ ಅವರು, ಹಿಂದೂ ಧರ್ಮ ಬಗ್ಗೆ ವಿವಾದಿತ ಹೇಳಿಕೆ ವಿಚಾರವಾಗಿ ಪ್ರತಿಕ್ರಿಯಿಸಿ, ''ಅದನ್ನು ಬೇರೆ ರೀತಿ ಅರ್ಥೈಸುವ ಕೆಲಸವನ್ನು ನಾನು ಯಾವತ್ತು ಮಾಡಿಲ್ಲ. ನಾವೆಲ್ಲ ಹಿಂದೂಗಳು. ಬೆಳಗ್ಗೆ ಎದ್ದರೆ ಗಣಪತಿಯನ್ನು ನೆನಪು ಮಾಡಿಕೊಳ್ತೀವಿ. ನಾನು ಬೆಳಗ್ಗೆ ಎದ್ದ ಕೂಡಲೇ ಲಕ್ಷ್ಮಿ ಶ್ಲೋಕ ಹೇಳುತ್ತೇನೆ. ಮಲಗೋವಾಗ ಹನುಮಾನ್ ಶ್ಲೋಕ ಹೇಳ್ತೀನಿ ಎಂದು ಎರಡು ಶ್ಲೋಕಗಳನ್ನು ಹೇಳಿ, ಬಿಜೆಪಿ ಅವರಿಗೆ ಈ ಶ್ಲೋಕಗಳು ಬರುವುದಿಲ್ಲ. ಅವರಿಗೆ ಕೇಳಿ ನೋಡಿ, ಇದನ್ನು ಹೇಳ್ತಾರಾ'' ಎಂದು ಸವಾಲು ಹಾಕಿದರು.
''ಧರ್ಮ ಅಧರ್ಮ ಆದಾಗ, ನೀತಿ ಅನೀತಿ ಆದಾಗ ಕೃಷ್ಣ ಮತ್ತೆ ಹುಟ್ಟಿ ಬರುತ್ತೇನೆ ಅಂತ ಹೇಳುತ್ತಾನೆ. ಇದನ್ನೆ ನಾನು ಹೇಳಿದ್ದು, ಯಧಾ ಯಧಾಹೀ ಧರ್ಮಸ್ಯ ಅಂತ. ಹಿಂದೂ ಧರ್ಮ ಯಾವಾಗ ಹುಟ್ಟಿತು ಅಂತ ನಾನು ಪ್ರಶ್ನೆ ಮಾಡಿಲ್ಲ. ನಾನು ಹೇಳಿದ್ದು ಸರ್ವೆಪಲ್ಲಿ ರಾಧಾಕೃಷ್ಣನ್ ಅವರು ಈ ದೇಶದಲ್ಲಿ ಹುಟ್ಟಿದ ಧರ್ಮದ ಬಗ್ಗೆ ಸ್ಟಡಿ ಮಾಡಿದ್ರು. ಅದನ್ನು ನಾನು ಹೇಳಿದ್ದು. ಅವರು ಹೇಳಿದ್ದನ್ನು ನಾನು ಹೇಳಿದ್ದು. ಅವರ ಪ್ರಕಾರ ಜೈನ, ಮುಸ್ಲಿಂ ಧರ್ಮ ಸ್ಥಾಪನೆ ಮಾಡಿದವರು ಇದ್ದರು. ಆದರೆ, ಹಿಂದೂಧರ್ಮಕ್ಕೆ ಇಲ್ಲ ಅಂತ ಹೇಳಿದ್ದರು. ಅಷ್ಟು ಹೇಳಿದ್ದಕ್ಕೆ ಬಿಜೆಪಿ ಅವರು ಬೊಬ್ಬೆ ಹೊಡೆಯುತ್ತಿದ್ದಾರೆ. ಹಿಂದೂ ಧರ್ಮದ ಮೇಲೆ ನಮಗೆ ಇರೋ ಗೌರವ ಅವರಿಗೆ ಇದೆಯಾ'' ಎಂದು ಪ್ರಶ್ನಿಸಿದರು.
ಬಿಜೆಪಿ ಆರೋಪ ತಳ್ಳಿ ಹಾಕಿದ ಜಿ ಪರಮೇಶ್ವರ್:ಬಿಜೆಪಿಯಿಂದ ಡಿಜಿಪಿಗೆ ದೂರು ವಿಚಾರವಾಗಿ ಪ್ರತಿಕ್ರಿಯಿಸುತ್ತಾ, ''ನಾವು ಅನಗತ್ಯವಾಗಿ ಯಾರ ಖಾಸಗಿ ಜೀವನದಲ್ಲಿ ಎಂಟ್ರಿ ಆಗುವುದಿಲ್ಲ. ಯಾರಾದರೂ ದೂರು ಕೊಟ್ರೆ ಪೊಲೀಸ್ ಇಲಾಖೆ ಏನು ಮಾಡಬೇಕು. ದೂರಿನ ಮೇಲೆ ಕ್ರಮ ತೆಗೆದುಕೊಂಡು ಎಫ್ ಐಆರ್ ಮಾಡಿ, ತನಿಖೆ ಮಾಡಬೇಕು. ಚಾರ್ಜ್ ಶೀಟ್ ಹಾಕುವ ಹಂತ ಇದ್ದರೆ ಹಾಕ್ತಾರೆ. ಇಲ್ಲ ಪ್ರಕರಣ ಕೈ ಬಿಡ್ತಾರೆ. ಅದನ್ನು ಮಾಡಬೇಡಿ ಅಂದ್ರೆ ಪೊಲೀಸ್ ಇಲಾಖೆ ಯಾಕೆ ಇರಬೇಕು. ನ್ಯೂನತೆ ಕಂಡು ಬಂದರೆ ನಮ್ಮ ಗಮನಕ್ಕೆ ತರಲಿ. ನಾವು ಅದನ್ನ ಸರಿ ಪಡಿಸೋಣ. ಆದರೆ, ಯಾರು ಮಾತಾಡಿಸಲೇ ಬಾರದು, ಆ ಪಕ್ಷ ಈ ಪಕ್ಷ ಅಂತ ಹೇಳೋದು ಸರಿಯಲ್ಲ. ಯಾವ ಪಕ್ಷದವರು ಅಂತ ನಾವು ನೋಡುವುದಿಲ್ಲ. ಕಾನೂನು ವಿರುದ್ಧವಾಗಿ ಕೆಲಸ ಮಾಡ್ತಾರೆ, ಅವರ ವಿರುದ್ಧ ಪೊಲೀಸ್ ಇಲಾಖೆ ಕ್ರಮ ತೆಗೆದುಕೊಳ್ಳುತ್ತೆ. ಅದನ್ನೇ ನಾವು ಮಾಡುತ್ತೇವೆ. ಅದನ್ನು ಮಾಡಿಲ್ಲ ಅಂದರೆ ಸಮಾಜದಲ್ಲಿ ಶಿಸ್ತು ಇರೊಲ್ಲ. ಘಟನೆಗಳು ನಡೆಯುತ್ತವೆ. ಅದಕ್ಕೆ ಪೊಲೀಸ್ ಇಲಾಖೆ ಇರೋದು'' ಎಂದರು.
ಅವರು ದೊಡ್ಡವರು, ಹಿರಿಯರು ಇದ್ದಾರೆ:ಪರಮೇಶ್ವರ್ ಹೇಳಿಕೆಗೆ ಯಡಿಯೂರಪ್ಪ ವಿರೋಧ ವಿಚಾರವಾಗಿ ಮಾತನಾಡಿದ ಅವರು, ''ಯಡಿಯೂರಪ್ಪ ಟ್ವೀಟ್ ನೋಡಿದೆ. ಅವರಿಗೂ ಒಂದು ಕಾಲದಲ್ಲಿ ಹಾಗೆ ಇತ್ತು. ಅವರು ದೊಡ್ಡವರು, ಹಿರಿಯರು ಇದ್ದಾರೆ. ನಾನು ಅವರ ಬಗ್ಗೆ ಮಾತನಾಡುವುದಿಲ್ಲ. ನಾನು ಅವಹೇಳನಕಾರಿ ಮಾತು ಆಡಿಲ್ಲ. ಮುಂದೆ ಮತ್ತೆ ಅದನ್ನ ವಿಶ್ಲೇಷಣೆ ಮಾಡೋದು ಅರ್ಥವಿಲ್ಲ'' ಎಂದು ಸ್ಪಷ್ಟಪಡಿಸಿದರು.
ಇಂಡಿಯಾ ಬದಲು ಭಾರತ್ ಎಂಬ ಹೆಸರು ವಿಚಾರವಾಗಿ ಪ್ರತಿಕ್ರಿಯಿಸುತ್ತಾ, ''ಯುನೈಟೆಡ್ ನೇಷನ್ಸ್ ಹೋಗಿ ಇವರೆಲ್ಲ ನೋಡಲಿ. ಪ್ರಧಾನಿಗಳು, ವಿದೇಶಾಂಗ ಮಂತ್ರಿಗಳು ಹೋಗ್ತಾರೆ ಅಲ್ಲವಾ ಅಲ್ಲಿ ಮೊದಲು ನೋಡಲಿ. ಅಲ್ಲಿ ಬೋರ್ಡ್ ಇಟ್ಟಿದ್ದಾರೆ. ಅಲ್ಲಿ ಇಂಡಿಯಾ ಅಂತ ಹೆಸರು ಇಟ್ಟಿದ್ದಾರೆ. ಕಾನ್ಸಿಟ್ಯೂಟ್ ಆಫ್ ಇಂಡಿಯಾ ಅಂತ ಇದೆ. ಇವರು ಮೇಕ್ ಇನ್ ಇಂಡಿಯಾ ಅಂತ ಮಾಡಿರಲಿಲ್ಲವಾ. ಯಾಕೆ ಅವರು ಹೇಳಿದ್ರು ಆಗಲೇ ಮೇಕ್ ಇನ್ ಭಾರತ ಅಂತ ಹೇಳಬಹುದಿತ್ತು ಅಲ್ಲವಾ? ಇಂಡಿಯಾ ಹೆಸರಿನಲ್ಲಿ ಏನಾದ್ರು ತಪ್ಪು ಇದ್ದರೆ, ಬಹಳ ಕೆಟ್ಟದಾಗಿ ಇದೆ ಅಂತಿದ್ದರೆ, ದೇಶಕ್ಕೆ ಕೆಟ್ಟದಾಗುತ್ತಿದೆ ಅಂತ ಇದ್ದರೆ ನಾವು ಅರ್ಥ ಮಾಡಿಕೊಳ್ಳೋಣ. ಈ ಆ ವಿಷಯ ಬೇಕಾಗಿದೆಯಾ? ಇಂಡಿಯಾ ಅಂತ ಒಕ್ಕೂಟ ರಚನೆ ಮಾಡಿದ್ದಕ್ಕೆ ಭಾರತ್ ಮಾಡಲು ಹೊರಟಿದ್ದಾರೆ ಅಂತ ನಾವು ಅರ್ಥೈಸಬೇಕಾಗುತ್ತದೆ. ಇದರಲ್ಲಿ ರಾಜಕಾರಣ ಅಷ್ಟೆ. ಬೇರೆ ಏನು ಇಲ್ಲ'' ಎಂದು ಕಿಡಿಕಾರಿದರು.
ವರ್ಗಾವಣೆಯಲ್ಲಿ ಡಿಕೆಶಿ ಕೈವಾಡ ಇಲ್ಲ:ವಿವಾದಿತ ಹೇಳಿಕೆ ನೀಡದಂತೆ ಹೈಕಮಾಂಡ್ ಸೂಚನೆ ಬಂದಿದೆಯಾ ಎಂಬ ವಿಚಾರವಾಗಿ ಪ್ರತಿಕ್ರಿಯಿಸುತ್ತಾ, ''ಯಾರು ವಿವಾದ ಮಾಡಿದ್ದಾರೆ. ಯಾರು ವಿವಾದ ಹೇಳಿಕೆ ಕೊಟ್ಟಿಲ್ಲ. ಏನು ವಿವಾದ? ಸುಪ್ರೀಂ ಕೋರ್ಟ್ ತೀರ್ಪು ನೋಡಿದ್ದೀರಾ? ಹಿಂದೂಯಿಸಂ ವೇ ಆಫ್ ಲೈಫ್ ಅಂತ ಹೇಳಿದ್ದಾರೆ. ಸುಪ್ರೀಂ ಕೋರ್ಟ್ಗಿಂತ ನಾವು ದೊಡ್ಡವರಾ? ಉದಯನಿಧಿ ಸ್ಟಾಲಿನ್ ಹೇಳಿಕೆ ವೈಯಕ್ತಿಕ. ಅವರು ಹೇಳಿದ್ದಕ್ಕೆ ನಾವು ಉತ್ತರ ಕೊಡೋಕೆ ಆಗುತ್ತಾ? ಒಬ್ಬರು ಹೇಳಿದ್ದು ಇನ್ನೊಬ್ಬರು ಒಪ್ಪಲ್ಲ. ಉದಯ್ ಸ್ಟಾಲಿನ್ ಹೇಳಿದಕ್ಕೆ ನಾವೇನು ಒಪ್ಪುವುದಿಲ್ಲ. ಅವರು ಹೇಳಿದ್ದಕ್ಕೆ ನನ್ನನ್ನು ಕೇಳಿದ್ರೆ ನನ್ನ ಅಭಿಪ್ರಾಯ ಹೇಳಬೇಕು ಅಷ್ಟೇ ಆಗೋದು'' ಎಂದು ಸ್ಪಷ್ಟಪಡಿಸಿದರು.
ಡಿಕೆಶಿ ಎಳೆದು ತರಬೇಡಿ:IPS ಅಧಿಕಾರಿಗಳ ವರ್ಗಾವಣೆಯಲ್ಲಿ ಗೊಂದಲ ವಿಚಾರವಾಗಿ ಪ್ರತಿಕ್ರಿಯಿಸಿ, ''ಆದೇಶ ಮಾಡಿದ ಮೇಲೆ ಎಲಿಜಿಬಿಲಿಟಿ ಎಲ್ಲಾ ಮತ್ತೆ ನೋಡಬೇಕಾಯ್ತು. ಹೀಗಾಗಿ ಒಂದೆರೆಡು ಬದಲಾವಣೆ ಮಾಡಿದ್ದಾರೆ. ಇದು ಸಾಮಾನ್ಯವಾಗಿ ನಡೆಯೋ ವಿದ್ಯಮಾನ. ಒಂದೊಂದು ಸಾರಿ ಹೀಗೆ ಆಗುತ್ತೆ. ನಾವು ಮಾನವರು ತಪ್ಪು ಮಾಡುತ್ತೇವೆ'' ಎಂದರು. ವರ್ಗಾವಣೆ ವಿಚಾರದಲ್ಲಿ ಡಿಕೆಶಿವಕುಮಾರ್ ಕೈವಾಡ ಏನೂ ಇಲ್ಲ. ಪಾಪ ಅವರ ಹೆಸರು ಯಾಕೆ ತರುತ್ತೀರಾ? ಅವರು ಬೆಂಗಳೂರು ಅಭಿವೃದ್ಧಿ ಮಾಡೋಕೆ ಅನೇಕ ಯೋಜನೆ ಹಮ್ಮಿಕೊಂಡಿದ್ದಾರೆ. ಅವರನ್ನು ಇದಕ್ಕೆ ಎಳೆಯೋದು ಬೇಡ. ಅವರ ಕೈವಾಡ ವರ್ಗಾವಣೆಯಲ್ಲಿ ಇಲ್ಲ. ಬಿಜೆಪಿಯವರು ಇದನ್ನ ರಾಜಕೀಯಕ್ಕೆ ಬಳಕೆ ಮಾಡಿಕೊಳ್ತಿದ್ದಾರೆ. ಅವರಿಗೆ ಅದೇ ಕೆಲಸ. ಅವರು ಅದನ್ನೇ ಮಾಡಬೇಕು. ಅಭಿವೃದ್ಧಿ ಬಗ್ಗೆ ಮಾತಾಡೋದಿಲ್ಲ. ಕೇಂದ್ರ ಸರ್ಕಾರ ಇನ್ನು ನಮಗೆ ಒಂದು ರೂಪಾಯಿ ಹಣ ಬಿಡುಗಡೆ ಮಾಡಿಲ್ಲ. ಈ ವರ್ಷದಲ್ಲಿ ಒಂದು ರೂಪಾಯಿ ಹಣ ಕೊಟ್ಟಿಲ್ಲ. ಅದರ ಬಗ್ಗೆ ಬಿಜೆಪಿಯವರು ಮಾತಾಡಲಿ. ಅಭಿವೃದ್ಧಿ ಬಗ್ಗೆ ಮಾತಾಡಲಿ ಸಲಹೆ ಕೊಡಲಿ. ಅದು ಬಿಟ್ಟು ಯಾವುದರ ಬಗ್ಗೆಯೋ ಮಾತಾಡ್ತಾರೆ'' ಎಂದು ಗರಂ ಆದರು.
ಸಚಿವ ಪ್ರಿಯಾಂಕ್ ಖರ್ಗೆ ವಿರುದ್ದ ಯುಪಿಯಲ್ಲಿ FIR ದಾಖಲು ವಿಚಾರವಾಗಿ ಪ್ರತಿಕ್ರಿಯಿಸುತ್ತಾ, ''ಪ್ರಿಯಾಂಕ್ ಖರ್ಗೆ ಏನು ಹೇಳಿದ್ದಾರೆ. ಯಾವುದೇ ಧರ್ಮ ಎಲ್ಲರಿಗೂ ಸಮಾನವಾಗಿ ಪ್ರತಿಪಾದನೆ ಮಾಡುವ ಧರ್ಮ ಆಗಿರಬೇಕು. ಹಿಂದೂ ಧರ್ಮವೂ ಅಷ್ಟೇ ಸಮಾನತೆ ಪ್ರತಿಪಾದನೆ ಮಾಡಬೇಕು ಅಂತ. ನಾವು ಅದನ್ನೆ ಕೇಳೋದು. ಭಾರತದಲ್ಲಿ ನಾವು ಸಂವಿಧಾನ ಕೊಟ್ಟ ಮೇಲೆ ಪೀಠಿಕೆಯಲ್ಲಿ ಇದು ಇದೆ. ಅಂಬೇಡ್ಕರ್ ಅವರು ಸಮಾನತೆ ಬಗ್ಗೆ ಬರೆದಿಟ್ಟಿದ್ದರು. ಸಮಾನತೆ ಬಿಜೆಪಿ ಅವರಿಗೆ ಸರಿಯಲ್ಲ ಅನ್ನಿಸುತ್ತೆ. ಅದಕ್ಕೆ ಹೀಗೆ ಮಾಡ್ತಿದ್ದಾರೆ'' ಎಂದು ಕಿಡಿಕಾರಿದರು.
ಇದನ್ನೂ ಓದಿ:ಪರೇಡ್ ವೇಳೆ ಸಾವ್ಧಾನ್ - ವಿಶ್ರಾಮ್ ಎಂಬ ಪದಗಳಿಗೆ ತಿಲಾಂಜಲಿ.. ಇನ್ಮುಂದೆ ಕನ್ನಡದಲ್ಲೇ ಕಮಾಂಡ್