ಬೆಂಗಳೂರು: ಕಾಂತರಾಜು ವರದಿ ಬಗ್ಗೆ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರು ತಮಗೆ ಬರೆದಿದ್ದಾರೆ ಎನ್ನಲಾದ ಪತ್ರ ಇನ್ನೂ ತಲುಪಿಲ್ಲ ಎಂದು ಕನ್ನಡ ಮತ್ತು ಸಂಸ್ಕೃತಿ ಹಾಗೂ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಸಚಿವ ಶಿವರಾಜ್ ತಂಗಡಗಿ ಹೇಳಿದ್ದಾರೆ. ವಿಕಾಸಸೌಧದಲ್ಲಿ ಬುಧವಾರ ಸುದ್ದಿಗಾರರನ್ನು ಉದ್ದೇಶಿಸಿ ಮಾತನಾಡಿದ ಅವರು, ಉಪಮುಖ್ಯಮಂತ್ರಿಗಳು ಬರೆದಿದ್ದಾರೆ ಎನ್ನಲಾದ ಪತ್ರ ತಲುಪಿದರೆ ಖುದ್ದಾಗಿ ಮುಖ್ಯಮಂತ್ರಿ ಹಾಗೂ ಉಪಮುಖ್ಯಮಂತ್ರಿಗಳನ್ನು ಭೇಟಿ ಮಾಡಿ ಚರ್ಚೆ ನಡೆಸುತ್ತೇನೆ. ಪತ್ರ ನೋಡದೆ ಪ್ರತಿಕ್ರಿಯಿಸಲು ಸಾಧ್ಯವಿಲ್ಲ ಎಂದರು.
ಕಾಂತರಾಜು ಅವರ ವರದಿಯಲ್ಲಿ ಏನಿದೆ ಎಂಬುದೇ ಇನ್ನೂ ತಿಳಿದಿಲ್ಲ. ಶೈಕ್ಷಣಿಕ, ಆರ್ಥಿಕ ಹಾಗೂ ಸಾಮಾಜಿಕವಾಗಿ ಪ್ರತಿಯೊಂದು ಸಮುದಾಯದ ಬಗ್ಗೆ ತಿಳಿದುಕೊಳ್ಳುವ ಸಲುವಾಗಿ ಸಮೀಕ್ಷೆ ನಡೆಸಲಾಗಿದೆ. ಕಾಂತರಾಜು ಅವರ ವರದಿ ಸ್ವೀಕಾರ ಮಾಡುವ ಬಗ್ಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಮಾತನಾಡಿದ್ದಾರೆ. ಸಿಎಂ, ಡಿಸಿಎಂ ಜತೆ ಚರ್ಚೆ ನಡೆಸಿ ನಿರ್ಧಾರ ಕೈಗೊಳ್ಳಲಾಗುವುದು ಎಂದು ತಿಳಿಸಿದರು. ಕಾಂತರಾಜು ವರದಿ ಬಗ್ಗೆ ಕೆಲ ಸಮುದಾಯಗಳಿಂದ ವಿರೋಧ ವ್ಯಕ್ತವಾಗಿರುವ ಬಗ್ಗೆ ಪ್ರತಿಕ್ರಿಯಿಸಿದ ಸಚಿವರು, ವರದಿ ಸ್ವೀಕಾರ ಆಗುವುದಕ್ಕೂ ಮುನ್ನವೇ ವಿರೋಧ ವ್ಯಕ್ತಪಡಿಸುವುದರಲ್ಲಿ ಅರ್ಥವಿಲ್ಲ ಎಂದು ಹೇಳಿದರು.
ಮೂವರು ಡಿಸಿಎಂ ಹುದ್ದೆಗಳನ್ನು ಸೃಷ್ಟಿಸಬೇಕು ಎಂಬ ಸಚಿವ ಕೆ.ಎನ್.ರಾಜಣ್ಣ ಹೇಳಿಕೆಗೆ ಪ್ರತಿಕ್ರಿಯಿಸಿ, ಹೈಕಮಾಂಡ್ ಈ ಬಗ್ಗೆ ತೀರ್ಮಾನ ಕೈಗೊಳ್ಳಲಿದೆ. ಈ ಬಗ್ಗೆ ಯಾವುದೇ ಪ್ರತಿಕ್ರಿಯೆ ನೀಡುವುದಿಲ್ಲ ಎಂದು ತಿಳಿಸಿದರು.
ಲೋಗೋ ಮಾದರಿ ಕಳುಹಿಸಿ, ಸಂಭ್ರಮದಲ್ಲಿ ಪಾಲ್ಗೊಳ್ಳಿ:ಕರ್ನಾಟಕ ಸಂಭ್ರಮ 50ರ ಹಿನ್ನೆಲೆಯಲ್ಲಿ ಕನ್ನಡ ನಾಡು, ನುಡಿ ಹಾಗೂ ಸಂಸ್ಕೃತಿಯನ್ನು ಬಿಂಬಿಸುವ ವಿಶಿಷ್ಟವಾದ ಲಾಂಛನ (ಲೋಗೋ) ಬಳಸಲು ತೀರ್ಮಾನಿಸಲಾಗಿದ್ದು, ಸಾರ್ವಜನಿಕರು ಲಾಂಛನ ಸಿದ್ಧಪಡಿಸಿ ಕಳುಹಿಸುವ ಮೂಲಕ ಈ ಸಂಭ್ರಮದಲ್ಲಿ ಪಾಲ್ಗೊಳ್ಳಬೇಕು ಎಂದು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವ ಶಿವರಾಜ್ ತಂಗಡಗಿ ಮನವಿ ಮಾಡಿದ್ದಾರೆ.
ಮೈಸೂರು ರಾಜ್ಯಕ್ಕೆ ಕರ್ನಾಟಕ ಎಂದು ಮರುನಾಮಕರಣವಾಗಿ 50 ವರ್ಷ ಪೂರ್ಣಗೊಳ್ಳಲಿರುವ ಹಿನ್ನೆಲೆಯಲ್ಲಿ ಕರ್ನಾಟಕ ಸಂಭ್ರಮ 50- ʼಹೆಸರಾಯಿತು ಕರ್ನಾಟಕ ಉಸಿರಾಗಲಿ ಕನ್ನಡʼ ಎಂಬ ಶೀರ್ಷಿಕೆಯಡಿ ರಾಜ್ಯಾದ್ಯಂತ ವರ್ಷಪೂರ್ತಿ ವೈವಿಧ್ಯಮಯ ಕಾರ್ಯಕ್ರಮ ಏರ್ಪಡಿಸಲು ನಿರ್ಧರಿಸಲಾಗಿದೆ. ಈಗಾಗಲೇ ನಾಲ್ಕು ಕಂದಾಯ ವಿಭಾಗವಾರು ಸಭೆ ನಡೆಸಿ ಸಾಹಿತಿ, ಕಲಾವಿದರು, ರಂಗಕರ್ಮಿ ಹಾಗೂ ಹೋರಾಟಗಾರರಿಂದ ಸಲಹೆ ಪಡೆಯಲಾಗಿದೆ. ಪ್ರತಿಯೊಬ್ಬರಿಂದ ಉತ್ತಮ ಸಲಹೆ ವ್ಯಕ್ತವಾಗಿದೆ. ಸಾರ್ವಜನಿಕರು ಸಂಭ್ರಮದಲ್ಲಿ ಪಾಲ್ಗೊಳ್ಳಬೇಕು. ಮೊದಲ ಹಂತದಲ್ಲಿ ಸಾರ್ವಜನಿಕರಿಂದ ಲಾಂಛನದ ಮಾದರಿಗೆ ಆಹ್ವಾನಿಸಲಾಗಿದ್ದು, ಸೆ.30ರೊಳಗೆ ಲಾಂಛನದ ಮಾದರಿ ಕಳುಹಿಸಲು ಅವಕಾಶವಿದೆ. ಆಯ್ಕೆಯಾಗುವ ಮಾದರಿ ಲಾಂಛನಕ್ಕೆ 25 ಸಾವಿರ ನಗದು ಬಹುಮಾನ ನಿಗದಿಪಡಿಸಲಾಗಿದೆ. ಅಗತ್ಯ ಮಾಹಿತಿಯನ್ನು https://www.kannadasiri.Karnataka.gov.in ಪಡೆಯಬಹುದು ಎಂದು ಸಚಿವರು ವಿವರಿಸಿದರು.
1973ರಲ್ಲಿ ಕರ್ನಾಟಕ ಎಂದು ಹೆಸರಿಟ್ಟ ವೇಳೆ ಮೈಸೂರಿನವರೇ ಆದ ದೇವರಾಜು ಅರಸು ಅವರು ರಾಜ್ಯದ ಮುಖ್ಯಮಂತ್ರಿಯಾಗಿದ್ದರು. ಇದೀಗ ಸಂಭ್ರಮದಲ್ಲಿ ಅದೇ ಜಿಲ್ಲೆಯವರೇ ಆದ ಭಾಗ್ಯವಿದಾತ ಎಂದೇ ಹೆಸರಾದ ಸಿದ್ದರಾಮಯ್ಯ ಮುಖ್ಯಮಂತ್ರಿಯಾಗಿದ್ದಾರೆ ಎಂದು ಶಿವರಾಜ್ ತಂಗಡಗಿ ಸಂತಸ ವ್ಯಕ್ತಪಡಿಸಿದರು.
ಇದನ್ನೂ ಓದಿ:'ಮೂರು ಡಿಸಿಎಂ ಹುದ್ದೆಯ ಬೇಡಿಕೆ ತಪ್ಪಲ್ಲ': ಮಂಡ್ಯದಲ್ಲಿ ಗೃಹ ಸಚಿವ ಜಿ.ಪರಮೇಶ್ವರ್ ಹೇಳಿಕೆ