ಬೆಂಗಳೂರು :ನಾನು ಸಿರಿಧಾನ್ಯದ ರಾಯಭಾರಿ. ಕಳೆದ 30 ವರ್ಷದಿಂದ ಸಿರಿಧಾನ್ಯ ಬಳಕೆ ಮಾಡುತ್ತಿದ್ದೇನೆ. ನಮ್ಮ ಸರ್ಕಾರವೂ ಸಿರಿಧಾನ್ಯ ಕೃಷಿಗೆ ಅಗತ್ಯ ಸಹಕಾರ ನೀಡುತ್ತಿದ್ದು, ಮುಂದೆಯೂ ಅಗತ್ಯ ಸಹಕಾರ ಮುಂದುವರೆಸಲಾಗುತ್ತದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದ್ದಾರೆ.
ನಗರದ ಅರಮನೆ ಮೈದಾನದಲ್ಲಿ ನಡೆಯುತ್ತಿರುವ ಮೂರು ದಿನಗಳ ಅಂತಾರಾಷ್ಟ್ರೀಯ ಸಿರಿಧಾನ್ಯ ಮತ್ತು ಸಾವಯುವ ಮೇಳಕ್ಕೆ ಸಿರಿಧಾನ್ಯವನ್ನು ಒನಕೆಯಲ್ಲಿ ಕುಟ್ಟುವ ಮೂಲಕ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹಾಗೂ ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಚಾಲನೆ ನೀಡಿದರು. ಬಳಿಕ ವೇದಿಕೆ ಮೇಲೆ ಇದ್ದ ಎಲ್ಲಾ ಗಣ್ಯರು ಸಹ ಒನಕೆಯಲ್ಲಿ ಸಿರಿಧಾನ್ಯವನ್ನು ಕುಟ್ಟಿದರು. ಇದಕ್ಕೆ ತಮ್ಮ ಭಾಷಣದ ಆರಂಭದಲ್ಲಿ ತಮಾಷೆ ಮಾಡಿದ ಸಿಎಂ ಎಲ್ಲರೂ ಒಮ್ಮೆ ಕುಟ್ಟಿದರೆ ಹೀಗೆ ಆಗುತ್ತದೆ ನೋಡಿ ಎಂದು ಹಾಸ್ಯ ಚಟಾಕಿ ಹಾರಿಸಿದರು. ಸಿಎಂ ಹೇಳಿಕೆಗೆ ಮೇಳದಲ್ಲಿ ಭಾಗವಹಿಸಿದವರೆಲ್ಲ ಕೆಲಕಾಲ ನಗೆಗಡಲಲ್ಲಿ ತೇಲಿದರು.
ನಂತರ ಉದ್ಘಾಟನಾ ಭಾಷಣ ಮಾಡಿದ ಸಿಎಂ ಸಾವಯುವ ಧಾನ್ಯ ಬಳಸಿ ಆರೋಗ್ಯವಂತರಾಗಿ ಎಂದು ಸಾವಯುವ ಮೇಳದ ಮೂಲಕ ಕರೆ ನೀಡಿದರು. ಸಿಎಂ ನಾನು ಸಿರಿ ಧಾನ್ಯದ ರಾಯಬಾರಿ, ನಾನು 30 ವರ್ಷದಿಂದ ಅನ್ನವನ್ನು ಸೇವಿಸುತ್ತಿಲ್ಲ, ಬದಲಿಗೆ ಸಿರಿಧಾನ್ಯವನ್ನು ಸೇವಿಸುತ್ತಿದ್ದೇನೆ ಎಮದು ತಮ್ಮ ಆಹಾರ ಪದ್ದತಿ ತಿಳಿಸಿದರು. ಸಿರಿಧಾನ್ಯದಲ್ಲಿ ಪೌಷ್ಟಿಕ ಅಂಶಗಳಿವೆ, ಸಿರಿ ಧಾನ್ಯ ಬೆಳೆಯಲು ನಮ್ಮ ಸರ್ಕಾರ ಎಲ್ಲ ಸಹಕಾರ ಕೊಡುತ್ತಿದೆ ಎಂದರು.
ಕಳೆದ ಮೂರು ವರ್ಷದಿಂದ ಅಕ್ಕಿಯ ಜೊತೆ ರಾಗಿ, ಜೋಳವನ್ನು ಪಡಿತರ ವ್ಯವಸ್ಥೆಯಲ್ಲಿ ಕೊಡುತ್ತಿದ್ದೇವೆ. ಅಂತಾರಾಷ್ಟ್ರೀಯ ಮಟ್ಟದಲ್ಲಿ ಸಿರಿಧಾನ್ಯಗಳಿಗೆ ದೊಡ್ಡ ಬೇಡಿಕೆ ಇದ್ದು, ಅದಕ್ಕೆ ಬೇಕಾದ ಮಾರುಕಟ್ಟೆ, ಪ್ಯಾಕೇಜಿಂಗ್ ಗೆ ನಮ್ಮಲ್ಲಿ ಉತ್ತಮ ವ್ಯವಸ್ಥೆ ಇದೆ. ಸಿರಿಧಾನ್ಯ ಬೆಳೆ ವಿಸ್ತರಣೆಗೆ ಕೇಂದ್ರದಿಂದ ಅನುದಾನ ಜೊತೆಗೆ ಪ್ರೋತ್ಸಾಹವೂ ಸಿಗುತ್ತಿದೆ ಎಂದರು. ಬೇರೆ ದೇಶದಲ್ಲಿ ಹಿಂದಿನ ಹತ್ತು ವರ್ಷ ಮಳೆ, ಬೆಳೆ ಎಲ್ಲಾ ಆಧರಿಸಿ ಮುಂದಿನ ವರ್ಷದ ಬೆಳೆಗೆ ದರ ನಿರ್ಧಾರ ಆಗುತ್ತದೆ. ಹೀಗಾಗಿ ನಮ್ಮಲ್ಲೂ ಬೆಳೆಗಳ ಔಟ್ ಲುಕ್ ರಿಪೋರ್ಟ್ ರೆಡಿ ಆಗಬೇಕು. ಕೃಷಿ ಅಧಿಕಾರಿಗಳು ರಿಪೋರ್ಟ್ ರೆಡಿ ಮಾಡಿ ಎಂದು ಸೂಚಿಸಿದರು.
ಮುಂದೆ ಕೃಷಿಕರು ಬೆಳೆಗೆ ಎಷ್ಟು ಖರ್ಚು ಮಾಡಬೇಕು, ಎಷ್ಟು ಖರ್ಚು ಮಾಡಿದರೆ ಲಾಭ ಬರುತ್ತದೆ ಎಂದು ರೈತರಿಗೆ ಗೊತ್ತಾಗಬೇಕು. ಇದು ಆದಲ್ಲಿ ರೈತರಿಗೆ ಅನಿಶ್ಚಿತತೆ ಹೋಗಿತ್ತದೆ ಎಮದು ಸಿಎಂ ಹೇಳಿದರು. ರೈತಶಕ್ತಿ ಯೋಜನೆಯನ್ನು 10 ದಿನದಲ್ಲಿ ಆರಂಭಿಸುತ್ತೇವೆ, ರಾಜ್ಯದಲ್ಲಿ ಹೆಚ್ಚುವರಿ ಇಂಧನವಿದ್ದು, ಸೋಲಾರ್ ಕೃಷಿ ಪಂಪ್ ಗೆ ಬೆಂಬಲ ನೀಡಿದ್ದೇವೆ. ಹಾಗೂ ರಾಜ್ಯದಲ್ಲಿ 11 ಲಕ್ಷ ರೈತರ ಮಕ್ಕಳು ರೈತ ವಿದ್ಯಾನಿಧಿಯ ಲಾಭವನ್ನು ಪಡೆದಿದ್ದಾರೆ ಎಂದು ಹೇಳಿದರು.