ಬೆಂಗಳೂರು: ನಾನು ಕಾಂಗ್ರೆಸ್ ಪಕ್ಷದಿಂದ ದೂರ ಆಗಿಲ್ಲ. ಕಾಂಗ್ರೆಸ್ ಜತೆಗೆ ಇದ್ದೇನೆ ಎಂದು ವಿಧಾನ ಪರಿಷತ್ ಪ್ರತಿಪಕ್ಷದ ಮಾಜಿ ನಾಯಕ ಎಸ್ ಆರ್ ಪಾಟೀಲ್ ತಿಳಿಸಿದರು. ಬೆಂಗಳೂರಿನ ಶಿವಾನಂದವೃತ್ತ ಸಮೀಪ ಇರುವ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ನಿವಾಸ ಬಳಿ ಸುದ್ದಿಗಾರರ ಜತೆ ಮಾತನಾಡಿದ ಅವರು, ವರಿಷ್ಠರು ಬಯಸಿದರೆ ವಿಧಾನಸಭಾ ಚುನಾವಣೆಗೆ ನಿಲ್ಲುತ್ತೇನೆ. ಯಾವುದೇ ಕ್ಷೇತ್ರದಿಂದ ನಿಲ್ಲಲು ಹೇಳಿದರೂ ನಿಲ್ಲುತ್ತೇನೆ. 25 ವರ್ಷ ಮೇಲ್ಮನೆ ಸದಸ್ಯನಾಗಿ ಸಚಿವನಾಗಿದ್ದೆ. ಈಗ ಕೆಳ ಮನೆಗೆ ಸ್ಫರ್ಧೆಗೆ ಅವಕಾಶ ಕೊಟ್ಟರೆ ಸ್ಫರ್ಧಿಸುತ್ತೇನೆ ಎಂದರು.
ಮೀಸಲಾತಿ ಹೋರಾಟ ವಿಚಾರವಾಗಿ ಪ್ರತಿಕ್ರಿಯಿಸಿದ ಎಸ್ಆರ್ಪಿ, 'ಪಂಚಮಸಾಲಿ ಸಮುದಾಯ ಮೀಸಲಾತಿ ಬೇಡಿಕೆ ಇಟ್ಟು ಹೋರಟ ಮಾಡುತ್ತಿದ್ದಾರೆ. ಮೀಸಲಾತಿ ನೀಡುವ ಬಗ್ಗೆ ಸರ್ಕಾರ ಗಮನ ಹರಿಸುತ್ತದೆ' ಎಂದರು. ಸಿದ್ದರಾಮಯ್ಯ ಕೋಲಾರದಲ್ಲಿ ಸ್ಫರ್ಧೆ ವಿಚಾರ ಮಾತನಾಡುತ್ತಾ, ಕೋಲಾರ ಸೇರಿದಂತೆ ಹಲವು ಕಡೆ ಸಿದ್ದರಾಮಯ್ಯ ಸ್ಫರ್ಧೆಗೆ ಒತ್ತಾಯ ಇದೆ. ಬಾದಾಮಿಯಲ್ಲಿ ಒತ್ತಾಯ ಇದೆ. ಈಗಾಗಲೇ ಸಿದ್ದರಾಮಯ್ಯ ಹೈಕಮಾಂಡ್ ಸೂಚಿಸಿದ ಕ್ಷೇತ್ರದಲ್ಲಿ ಸ್ಫರ್ಧಿಸುವುದಾಗಿ ಹೇಳಿದ್ದಾರೆ. ಬಾಗಲಕೋಟೆ ನಾಯಕನಾಗಿ ನಾನು ಬಾದಾಮಿಗೆ ಕರೆಯುತ್ತಿದ್ದೇನೆ. ಸಿದ್ದರಾಮಯ್ಯ ಏನ್ ನಿರ್ಧಾರ ಮಾಡ್ತಾರೆ ಅಂತಾ ನೋಡಬೇಕು ಎಂದು ಹೇಳಿದರು.
ನಿರಾಣಿ V/S ಯತ್ನಾಳ್ ವಿಚಾರ ಮಾತನಾಡಿ, ಅವರಿಬ್ಬರದು ವೈಯಕ್ತಿಕ ವಿಚಾರ. ಆದರೆ, ನಾನು ಹಿರಿಯನಾಗಿ ಸಲಹೆ ನೀಡುತ್ತೇನೆ. ಸಾರ್ವಜನಿಕ ಜೀವನದಲ್ಲಿ ಏಕವಚನ ಪದ ಪ್ರಯೋಗ ಮಾಡಬಾರದು ಎಂದು ಹೇಳಿದರು.
ಬಾದಾಮಿಗೆ ಆಹ್ವಾನ:ಕಳೆದ ಸಾರಿ ಸಿದ್ದರಾಮಯ್ಯ ಬಾದಾಮಿಯಿಂದ ಸ್ಪರ್ಧಿಸಿದ್ದ ಕಾರಣಕ್ಕೆ ಉತ್ತರ ಕರ್ನಾಟಕ ಭಾಗದಲ್ಲಿ ಕಾಂಗ್ರೆಸ್ ಒಂದಿಷ್ಟು ಹೆಚ್ಚುವರಿ ಸ್ಥಾನ ಗೆದ್ದಿತ್ತು. ಈ ಹಿನ್ನೆಲೆ ಈ ಬಾರಿಯೂ ಬಾದಾಮಿಯಿಂದ ಸ್ಪರ್ಧಿಸಿದರೆ ಬಾಗಲಕೋಟೆ, ಬೆಳಗಾವಿ, ರಾಯಚೂರು, ಬಳ್ಳಾರಿ, ಬೀದರ್, ವಿಜಯಪುರ ಮುಂತಾದ ಜಿಲ್ಲೆಯ ಕಾಂಗ್ರೆಸ್ ನಾಯಕರು, ಕಾರ್ಯಕರ್ತರಿಗೆ ಹೆಚ್ಚಿನ ಬಲ ಬರಲಿದೆ.