ಬೆಂಗಳೂರು: ಉಳಿದುಕೊಂಡಿರುವುದು ಇನ್ನೇನಿದೆ. ಕಿರುಕುಳಕ್ಕೆ ಒಂದು ಲಿಮಿಟೇಶನ್ ಇರಬೇಕು. ಈ ದೇಶದಲ್ಲಿ ಕಾನೂನು ಇದೆ. ಆ ಕಾನೂನಿನ ಮೇಲೆ ನನಗೆ ನಂಬಿಕೆ ಇದೆ. ಅದನ್ನು ದುರುಪಯೋಗ ಮಾಡಿಕೊಂಡು ನನ್ನ ಮೇಲೆ ಎಷ್ಟು ಕೇಸ್ ಹಾಕಿಸಿದ್ದಾರೆ ಎಂದು ನಾನೊಂದು ಪಟ್ಟಿ ಮಾಡಿಸಿದ್ದೇನೆ. ಎಲ್ಲರಿಗೂ ಸೇರಿ ಕಿರುಕುಳ ಕೊಡುತ್ತಿದ್ದಾರೆ. ಎಲ್ಲ ಸುತ್ತಿಕೊಂಡು ಬರುತ್ತಿದ್ದಾರೆ. ನಾನು ಎಲ್ಲದಕ್ಕೂ ರೆಡಿ ಇದ್ದೇನೆ ಎಂದು ಕೆಪಿಸಿಸಿ ಅಧ್ಯಕ್ಷ ಡಿ ಕೆ ಶಿವಕುಮಾರ್ ಅಸಮಾಧಾನ ಹೊರಹಾಕಿದ್ದಾರೆ.
ಸದಾಶಿವನಗರ ತಮ್ಮ ನಿವಾಸದಲ್ಲಿ ಮಾತನಾಡಿದ ಅವರು, ವಿಜಯ್ ಮುಳುಗುಂದ್ಗೆ ಸಿಬಿಐ ನೋಟಿಸ್ ವಿಚಾರವಾಗಿ ಪ್ರತಿಕ್ರಿಯಿಸಿ, ವಿಜಯ್ ಮುಳುಗುಂದ್ ನಮ್ಮ ಪಾರ್ಟಿಯ ಜನರಲ್ ಸೆಕ್ರೆಟರಿ, ನನ್ನ ಆಪ್ತ. ಅವನೊಬ್ಬನ ಮೇಲೆ ಕೊಟ್ಟಿಲ್ಲ. 30, 40 ಜನರಿಗೆ ನೋಟಿಸ್ ಕೊಟ್ಟಿದ್ದಾರೆ. ಯಾರ್ಯಾರು ನನ್ನ ಹತ್ರ ವ್ಯವಹಾರ ಮಾಡಿದ್ದಾರೆ. ನನ್ನ ಜೊತೆ ಯಾರಿಗೆಲ್ಲ ಬ್ಯುಸಿನೆಸ್ ಇದೆ. ಅವರೆಲ್ಲರಿಗೂ ನೋಟಿಸ್ ಕೊಟ್ಟಿದ್ದಾರೆ. ನಾವು ಇದನ್ನು ಮಾತನಾಡಬಾರದು. ಲೀಗಲ್ ಆಗಿ ಫೇಸ್ ಮಾಡೋಣ ಎಂದುಕೊಂಡಿದ್ದೇನೆ ಎಂದು ಸ್ಪಷ್ಟಪಡಿಸಿದರು.
ಈಗ ಇರುವ ಮಂತ್ರಿಗಳು ಶಾಸಕರಾಗಿದ್ದಾಗ ಎಷ್ಟಿತ್ತು ಆಸ್ತಿ. ಈಗ ಎಷ್ಟು ಆಗಿದೆ ಬಿಜೆಪಿಯವರದ್ದು ಆಸ್ತಿ? ನನಗೆ ಆಂತರಿಕ ಮಾಹಿತಿ ಇದೆ. ನಮ್ಮ ಕಿವಿಗೂ ಹೇಳುವವರು ಇದ್ದಾರೆ. ಈ ದೇಶದ ಕಾನೂನು ಬಗ್ಗೆ ನನಗೆ ಗೌರವವಿದೆ. ನನ್ನ ಪ್ರಾಮಾಣಿಕತೆಗೆ ಬೆಲೆ ಸಿಗುವ ನಂಬಿಕೆ ಇದೆ. ನನಗೆ, ನಮ್ಮ ಪಕ್ಷಕ್ಕೆ ಬೆಲೆ ಸಿಗುತ್ತೆ ಅನ್ನುವ ನಂಬಿಕೆ ಇದೆ. ಏನು ಬೇಕಾದ್ರೂ ಮಾಡಿಕೊಳ್ಳಲಿ. ನಾನು ಎಲ್ಲದನ್ನು ಫೇಸ್ ಮಾಡೋದಕ್ಕೆ ರೆಡಿ ಇದ್ದೇನೆ ಎಂದರು.