ಬೆಂಗಳೂರು: ಸರ್ಕಾರಿ ಭೂ ಕಬಳಿಕೆ ಅಕ್ರಮ ಬೃಹದಾಕಾರವಾಗಿ ಬೆಳೆದಿದ್ದು, ಇದನ್ನು ಮಟ್ಟ ಹಾಕಲು ಕಠಿಣ ಕಾನೂನು ತರಬೇಕು. ಅದಕ್ಕೆ ನಾನು ಸಿದ್ಧನಿದ್ದೇನೆ ಎಂದು ಸಚಿವ ಆರ್.ಅಶೋಕ್ ಹೇಳಿದರು.
ವಿಧಾನಸಭೆಯಲ್ಲಿ ಬಜೆಟ್ ಮೇಲಿನ ಚರ್ಚೆ ವೇಳೆ ಶಾಸಕ ಎ.ಟಿ.ರಾಮಸ್ವಾಮಿ ಅವರು ಸರ್ಕಾರಿ ಭೂ ಕಬಳಿಕೆ ಸಂಬಂಧ ಪ್ರಸ್ತಾಪಿಸಿದ ವಿಚಾರಕ್ಕೆ ಸಚಿವ ಆರ್.ಅಶೋಕ್ ಪ್ರತಿಕ್ರಿಯಿಸಿದರು. ಈ ಅಕ್ರಮ ಭೂ ಕಬಳಿಕೆಯನ್ನು ತಡೆ ಹಿಡಿದರೆ ಮಾತ್ರ ಆದಾಯ ತರಬಹುದು. ಇಲ್ಲವಾದರೆ ಇದು ಬೆಳೆಯುತ್ತಾ ಹೋಗುತ್ತದೆ. ತಪ್ಪು ಮಾಡಿದ ಅಧಿಕಾರಿಗಳನ್ನು ಬಗ್ಗು ಬಡಿಯಬೇಕು. ಹಳೆಯ ಕಾನೂನಿನಲ್ಲಿ ಅದು ಸಾಧ್ಯವಿಲ್ಲ. ಬದಲಾವಣೆ ತರೋಣ. ನೈಸ್ ಅಕ್ರಮಗಳನ್ನೂ ಮಟ್ಟ ಹಾಕೋಣ ಎಂದರು.
ನಾನು ಬಂದ ಬಳಿಕ 8 ಸಬ್ ರಿಜಿಸ್ಟ್ರಾರ್ ಅಮಾನತು ಮಾಡಿದ್ದೇನೆ. ಐದು ತಿಂಗಳಿಂದ ಎಲ್ಲಾ ಬಡಾವಣೆ ನೋಂದಣಿಯನ್ನು ಸ್ಥಗಿತಗೊಳಿಸಿದ್ದೇನೆ ಎಂದು ತಿಳಿಸಿದರು. ನೈಸ್ ಮೇಲೆ ಕ್ರಮ ಕೈಗೊಂಡಿದ್ದಕ್ಕೆ ಕಾನೂನು ಸಚಿವರೇ ಬದಲಾವಣೆ ಆಗಿದ್ದಾರೆ ಎಂದು ಹೆಚ್.ಡಿ.ರೇವಣ್ಣ ಇದೇ ವೇಳೆ ಆರೋಪಿಸಿದರು.
ಸರ್ಕಾರಿ ವಕೀಲರಿಗೆ ಖಾಸಗಿಯವರು ಹಣ ನೀಡುತ್ತಾರೆ:ಭೂ ಅಕ್ರಮ ಪ್ರಕರಣಗಳ ಸಂಬಂಧ ಸರ್ಕಾರದ ವಕೀಲರು ಖಾಸಗಿಯವರ ಜೊತೆ ಶಾಮೀಲಾಗಿದ್ದಾರೆ ಎಂದು ಶಾಸಕ ಎ.ಟಿ.ರಾಮಸ್ವಾಮಿ ಆರೋಪಿಸಿದ್ದಾರೆ. ಸರ್ಕಾರಿ ವಕೀಲರಿಗೆ ಖಾಸಗಿಯವರು ಹಣ ನೀಡುತ್ತಾರೆ. ಹೀಗಾಗಿ ದೊಡ್ಡ ದೊಡ್ಡ ಪ್ರಕರಣಗಳ ಸಂಬಂಧ ಸರ್ಕಾರಿ ವಕೀಲರು ಕೋರ್ಟ್ನಲ್ಲಿ ಸುಮ್ಮನೆ ಇರುತ್ತಾರೆ. ಖಾಸಗಿಯವರು ಅವರ ವಕೀಲರಿಗೆ ಬಾಯಿ ಬಿಡಿ ಎಂದು ದುಡ್ಡು ಕೊಡುತ್ತಾರೆ, ಸರ್ಕಾರಿ ವಕೀಲರಿಗೆ ಬಾಯಿ ಮುಚ್ಚಿ ಎಂದು ದುಡ್ಡು ಕೊಡ್ತಾರೆ ಎಂದು ಕಿಡಿಕಾರಿದರು.