ಬೆಂಗಳೂರು: ಹೈಕಮಾಂಡ್ನಿಂದ ಮೂರನೇ ಆಯ್ಕೆ ಬಂದರೆ ನಾನು ಸಿದ್ದ ಎಂದು ಮಾಜಿ ಡಿಸಿಎಂ ಡಾ ಜಿ ಪರಮೇಶ್ವರ್ ತಿಳಿಸಿದ್ದಾರೆ.
ಬೆಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಾನು ಪಕ್ಷದ ಶಿಸ್ತಿನ ಸಿಪಾಯಿ. ನಾನು ಯಾವಾಗಲೂ ಸಿದ್ದವಾಗಿದ್ದೇನೆ. ಕಾಂಗ್ರೆಸ್ ಶಾಸಕಾಂಗ ಪಕ್ಷದ ನಾಯಕರ ಆಯ್ಕೆ ಇಂದು ಆಗಬಹುದು ಎಂಬ ನಿರೀಕ್ಷೆ ಹೊಂದಿದ್ದೇನೆ. ದಿಲ್ಲಿಗೆ ಬರುವಂತೆ ನನಗೆ ಬುಲಾವ್ ಬಂದಿಲ್ಲ, ಕೆಲವರು ಕರೆ ಮಾತನಾಡಿದ್ದಾರೆ. ಶಾಸಕಾಂಗ ಪಕ್ಷದ ಸಭೆಯಲ್ಲಿ ಅಭಿಪ್ರಾಯ ಪಡೆದು ಹೋಗಿದ್ದಾರೆ. ಇವತ್ತು ಅಂತಿಮ ಆಗಬಹುದು ಎಂಬ ನಿರೀಕ್ಷೆಯಿದೆ ಎಂದು ತಿಳಿಸಿದರು.
ಆದಷ್ಟು ಬೇಗ ಸಿಎಂ ಹಾಗೂ ಸರ್ಕಾರದ ಬಗ್ಗೆ ತೀರ್ಮಾನ ಆಗಲಿದೆ. ಹೊರಗಡೆ ಚರ್ಚೆ ಬೇರೆ ಇರುತ್ತದೆ. ಒಳಗಡೆ ಬೇರೆ ನಡೆಯುತ್ತಿರುತ್ತದೆ. ಸ್ವಾಭಾವಿಕವಾಗಿ ಕೆಪಿಸಿಸಿ ಅಧ್ಯಕ್ಷರು ಹಾಗೂ ಸಿಎಲ್ಪಿ ಕೇಳುತ್ತಿದ್ದಾರೆ. ಅರ್ಹತೆ ಇರುವವರು ಇದ್ದಾರೆ. ಆದರೆ, ಇಬ್ಬರು ಓಡಾಡಿದ್ದಾರೆ. ಪಟ್ಟು ಹಿಡಿದಿದ್ದಾರೆ ಎಂಬುದು ಪ್ರಶ್ನೆ. ಅಂತಿಮವಾಗಿ ಹೈಕಮಾಂಡ್ ನಿರ್ಧಾರ ಮಾಡಲಿದೆ. ಹೈಕಮಾಂಡ್ ನಿರ್ಧಾರವನ್ನು ಒಪ್ಪಿಕೊಳ್ಳುತ್ತಾರೆ ಎಂದರು.
ದಲಿತ ಸಿಎಂ ಕೂಗಿನ ವಿಚಾರಕ್ಕೆ 75 ವರ್ಷಗಳಿಂದ ದಲಿತರು ಮತ ಹಾಕಿದ್ದಾರೆ. ನಿನ್ನೆ ತುಮಕೂರಿನ ಕೊರಟಗೆರೆಯಲ್ಲಿ ಪ್ರತಿಭಟನೆ ಮಾಡಿದ್ದಾರೆ. ಮಲ್ಲಿಕಾರ್ಜುನ ಖರ್ಗೆ, ಪರಮೇಶ್ವರ್ ಅವರಿಗೆ ಕೊಡಿ ಎಂದು ಮನವಿ ಮಾಡಿದ್ದಾರೆ. ಕೇಳುವುದು ತಪ್ಪು ಎಂದು ನಾನು ಹೇಳಲ್ಲ.
ಆದರೆ ಹೈಕಮಾಂಡ್ ಜಾತಿ ಆಧಾರಿತವಾಗಿ ಸಿಎಂ ಆಯ್ಕೆ ಮಾಡಲ್ಲ. ದಲಿತ ಸಿಎಂ ಮಾಡಿ ಅಂತಾ ಕೇಳುವುದು ತಪ್ಪಾ? ಅಲ್ಲ. ಹೈಕಮಾಂಡ್ ಇದನ್ನು ಪರಿಗಣಿಸಲೇಬೇಕು. ಯಾಕೆ ಅಂದರೆ ದಲಿತ ಸಮುದಾಯದವರು ಈ ಪಕ್ಷಕ್ಕೆ ಮತವನ್ನು ಹಾಕ್ತಾನೆ ಬಂದಿದ್ದಾರೆ. ಆದ್ದರಿಂದ ಅವರ ಬೇಡಿಕೆಯನ್ನು ಹೈಕಮಾಂಡ್ ನಾಯಕರು ಪರಿಗಣಿಸಬೇಕಾಗುತ್ತೆ ಎಂದು ಮನವಿ ಮಾಡಿದರು.
ದಲಿತ ಸಿಎಂ ಅಂತಾ ನನಗೂ ಕರೆ ಬಂದಿತ್ತು. ಪ್ರತಿಭಟನೆ ಮಾಡುತ್ತೇವೆ ಎಂದು ಕರೆ ಮಾಡಿದ್ರು. ಪ್ರತಿಭಟನೆ ಮಾಡುತ್ತೇವೆ, ಗಲಾಟೆ ಮಾಡುತ್ತೇವೆ ಎಂದು ಹೇಳಿದ್ರು. ಕೆಪಿಸಿಸಿ ಕಚೇರಿ ಮುಂದೆ ಪ್ರತಿಭಟನೆ ಮಾಡುತ್ತೇವೆ ಎಂದು ಹೇಳಿದ್ರು. ನಾನು ಅವರಿಗೆ ಹೇಳಿದೆ, ಬೇಡಪ್ಪಾ ಹಾಗೆಲ್ಲ ಮಾಡಬೇಡಿ. ಈ ಸಮಯದಲ್ಲಿ ನಾವು ಗೊಂದಲ ಸೃಷ್ಟಿಮಾಡಿಕೊಳ್ಳಬಾರದು. ಹೈಕಮಾಂಡ್ ನಾಯಕರು ಎಲ್ಲ ನೋಡುತ್ತಿರುತ್ತಾರೆ, ಅವರಿಗೆ ಎಲ್ಲ ಗೊತ್ತಿದೆ ಎಂದು ಹೇಳಿದ್ದೆ ಎಂದರು.
ಸಿದ್ದರಾಮಯ್ಯ ಅವರಿಗೆ ಶಾಸಕರ ಬೆಂಬಲವಿದೆ ಎಂದು ನಂಬರ್ ಹೇಳಿರುವ ವಿಚಾರಕ್ಕೆ ಮಾತನಾಡಿ, ಹೈಕಮಾಂಡ್ ಯಾರಿಗೆ ಎಷ್ಟು ಜನ ಬೆಂಬಲಿಸಿದ್ದಾರೆ ಎಂದು ಹೇಳಲ್ಲ. ಸಿದ್ದರಾಮಯ್ಯ ಅವರದ್ದು ಗೆಸಿಂಗ್ ನಂಬರ್ ಇರಬಹುದು. ಆ ಮೂಲಕ ತಮ್ಮ ಬಲ ಹೆಚ್ಚಾಗಿದೆ ಎಂದು ತೋರಿಸಿಕೊಳ್ಳಲು ಹೇಳಿರಬಹುದೆಂದು ಅಭಿಪ್ರಾಯ ವ್ಯಕ್ತಪಡಿಸಿದರು.