ಬೆಂಗಳೂರು: ನನಗೆ ಸಚಿವ ಸ್ಥಾನ ಕೊಡಲಿಲ್ಲ ಅಂತ ಅಸಮಾಧಾನ ಇಲ್ಲ. ನನಗೆ ಅಸಮಾಧಾನ ಇರುವುದು ಇರುವ ವ್ಯವಸ್ಥೆಯ ವಿರುದ್ಧ ಎಂದು ಕಾಂಗ್ರೆಸ್ ಪರಿಷತ್ ಸದಸ್ಯ ಬಿ.ಕೆ.ಹರಿಪ್ರಸಾದ್ ಹೇಳಿದ್ದಾರೆ. ಬೆಂಗಳೂರಿನ ತಮ್ಮ ನಿವಾಸದಲ್ಲಿಂದು ಮಾತನಾಡಿದ ಅವರು, ನಾನು ಎಂದೂ ಸಚಿವ ಸ್ಥಾನ ಕೇಳಿಲ್ಲ. ನಾಲ್ವಡಿ ಕೃಷ್ಣರಾಜ ಒಡೆಯರ್ ಸ್ಥಾಪಿಸಿದ ಮೇಲ್ಮನೆ. ಅದನ್ನು ಸರಿಯಾಗಿ ನಿರ್ವಹಣೆ ಮಾಡ್ತಿಲ್ಲ. ತನ್ನದೇ ಆದ ಚರಿತ್ರೆ ಮೇಲ್ಮನೆ ಸಭೆಗಿದೆ, ಅದು ಹಾಳಾಗಬಾರದು. ನಾನು ಕೆಪಿಸಿಸಿಯ ಯಾವುದೇ ಸ್ಥಾನಮಾನದ ಆಕಾಂಕ್ಷಿ ಅಲ್ಲ. ನಾನು ಅಖಿಲ ಭಾರತ ಕಾರ್ಯದರ್ಶಿಯಾಗಿ ಜವಾಬ್ದಾರಿ ನಿಭಾಯಿಸಿದ್ದೀನಿ. ಈಗ ಕೆಪಿಸಿಸಿ ಉಪಾಧ್ಯಕ್ಷ, ಕಾರ್ಯಾಧ್ಯಕ್ಷ ಸ್ಥಾನ ನನಗೆ ಬೇಡ. ಡಿ.ಕೆ.ಶಿವಕುಮಾರ್ ಅಧ್ಯಕ್ಷರಾಗಿದ್ದಾರೆ. ಅವರೇ ಲೋಕಸಭೆಯವರೆಗೆ ಅಧ್ಯಕ್ಷರಾಗಿರುತ್ತಾರೆ ಎಂದರು.
ಮಹಾತ್ಮಾ ಗಾಂಧಿ ತತ್ವ ಸಿದ್ಧಾಂತಕ್ಕೆ ಸಿಕ್ಕ ಜಯ:ನಮ್ಮ ನಾಯಕರಾದ ರಾಹುಲ್ ಗಾಂಧಿ ಕುರಿತು ಸುಪ್ರೀಂ ಕೋರ್ಟ್ ನೀಡಿರುವ ತೀರ್ಪು ಮಹಾತ್ಮ ಗಾಂಧಿಯವರ ತತ್ವ ಸಿದ್ದಾಂತಕ್ಕೆ ಸಿಕ್ಕ ಜಯ ಎಂದು ಇದೇ ವೇಳೆ ತಿಳಿಸಿದರು. ಕಳೆದ ಲೋಕಸಭಾ ಚುನಾವಣೆ ಸಂದರ್ಭದಲ್ಲಿ ಕೋಲಾರದಲ್ಲಿ ಮಾಡಿದ ಭಾಷಣದ ಆಧಾರದ ಮೇಲೆ ಗುಜರಾತ್ ಕೋರ್ಟ್ ತೀರ್ಪು ಕೊಟ್ಟಿತ್ತು. ರಾಹುಲ್ ಗಾಂಧಿ ಅವರನ್ನು ತರಾತುರಿಯಲ್ಲಿ ಸಂಸದ ಸ್ಥಾನದಿಂದಲೂ ಕೈ ಬಿಡಲಾಗಿತ್ತು. ಎರಡು ವರ್ಷ ಜೈಲು ಶಿಕ್ಷೆ ನೀಡಿರುವುದರ ಹಿಂದೆ ದ್ವೇಷ ರಾಜಕಾರಣವಿತ್ತು. ಇದರ ವಿರುದ್ಧ ಇಂದು ಸುಪ್ರೀಂ ಕೋರ್ಟ್ ತಡೆಯಾಜ್ಞೆ ನೀಡಿ ತೀರ್ಪು ನೀಡಿರುವುದು ಸತ್ಯಕ್ಕೆ ಸಂದ ಜಯ ಎಂದರು.
ಬಿಜೆಪಿಯವರ ಸುಳ್ಳು ಮತ್ತು ಅಸತ್ಯದ ಸಿದ್ಧಾಂತಕ್ಕೆ ಸೋಲಾಗಿದೆ. ರಾಹುಲ್ ಗಾಂಧಿ ಅವರು ನಡೆಸಿದ ಭಾರತ್ ಜೋಡೋ ಯಾತ್ರೆಯ ಸಿದ್ಧಾಂತ ಮತ್ತು ಸತ್ಯಕ್ಕೆ ಜಯ ಸಿಕ್ಕಿದೆ. ಸುಪ್ರೀಂ ಕೋರ್ಟ್ ತಡೆಯಾಜ್ಞೆ ಅರ್ಥ, ಸುಳ್ಳು ತುಂಬಾ ದಿನ ಇರಲ್ಲ ಎನ್ನುವುದಕ್ಕೆ ಸಾಕ್ಷಿ. ಬಿಲ್ಕಿಸ್ ಭಾನು ಪ್ರಕರಣ ಗುಜರಾತ್ ಮಾದರಿಯದ್ದು, ರಾಹುಲ್ ಗಾಂಧಿ ಅವರನ್ನು ಅನರ್ಹ ಮಾಡಿದ್ದು ಕೂಡ ಗುಜರಾತ್ ಮಾದರಿ ರಾಜಕೀಯದ ಉದಾಹರಣೆಗಳು ಎಂದು ತಿಳಿಸಿದರು.