ಬೆಂಗಳೂರು: 'ನಾನು ಈಗ ಯಾವುದೇ ತೃಪ್ತಿ, ಅತೃಪ್ತಿ ಬಗ್ಗೆ ಮಾತನಾಡುವುದಿಲ್ಲ. ಎರಡು ಉಪ ಚುನಾವಣೆ ಇದೆ. ಪ್ರತಿಪಕ್ಷದ ನಾಯಕ ಸಿದ್ದರಾಮಯ್ಯ ಹಗುರವಾಗಿ ಮಾತನಾಡುತ್ತಾರೆ. ಅವರಿಗೆ ಗೆಲುವಿನ ಮೂಲಕ ಉತ್ತರ ಕೊಡುತ್ತೇವೆ' ಎಂದು ಸಿಎಂ ರಾಜಕೀಯ ಕಾರ್ಯದರ್ಶಿ ಎಂ.ಪಿ.ರೇಣುಕಾಚಾರ್ಯ ಹೇಳಿದ್ದಾರೆ.
ವಿಕಾಸಸೌಧದಲ್ಲಿ ತಮ್ಮ ಕಚೇರಿಯಲ್ಲಿ (ಕೊಠಡಿ ಸಂಖ್ಯೆ 444, 445 ) ಪೂಜೆ ನೆರವೇರಿಸಿ ನಂತರ ಸುದ್ದಿಗಾರರ ಜೊತೆ ಮಾತನಾಡಿದ ಅವರು, 'ಈ ಹಿಂದೆ ಬಿ.ಎಸ್.ಯಡಿಯೂರಪ್ಪನವರು ನನ್ನನ್ನು ರಾಜಕೀಯ ಕಾರ್ಯದರ್ಶಿಯಾಗಿ ನೇಮಕ ಮಾಡಿದ್ದರು. ಅವರು ಕೂಡ ಇದೇ ಕೊಠಡಿಗೆ ಬಂದು ಶುಭಾಶಯ ಕೋರಿದ್ದರು' ಎಂದರು.
'ಅದೇ ರೇಣುಕಾಚಾರ್ಯ, ಅದೇ ಸಿಎಂ ರಾಜಕೀಯ ಕಾರ್ಯದರ್ಶಿ, ನಾನು ಯಾವತ್ತೂ ಬದಲಾಗಲ್ಲ. ಪಕ್ಷದ ಸಂಪರ್ಕ ಸೇತುವೆಯಾಗಿ ಕೆಲಸ ಮಾಡಿದ್ದೆ. ಏನೇ ಆದರೂ ಯಡಿಯೂರಪ್ಪನವರ ಜೊತೆ ಕೆಲಸ ಮಾಡಿದ್ದೆ. ಈಗ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರಿಗೆ ರಾಜಕೀಯ ಕಾರ್ಯದರ್ಶಿಯಾಗಿರುವೆ.
'ನಾನೀಗ ಯಾವುದೇ ತೃಪ್ತಿ, ಅತೃಪ್ತಿ ಬಗ್ಗೆ ಮಾತನಾಡುವುದಿಲ್ಲ' ಸಿಎಂ ಬೊಮ್ಮಾಯಿ ಅವರು ಶುಭ ಕೋರಿದ್ದಾರೆ. ನಿನ್ನೆ ವಿಶೇಷವಾಗಿ ಕೇಂದ್ರದ ನಾಯಕರು ಶುಭಾಶಯ ಕೋರಿದ್ದಾರೆ. ಮುಂದಕ್ಕೆ ಒಳ್ಳೆಯ ದಿನ ಬರುತ್ತದೆಂದು ಸಿಎಂ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ. ಸದ್ಯಕ್ಕೆ ಈ ಕೆಲಸ ಮಾಡಿಕೊಂಡು ಹೋಗುತ್ತೇನೆ' ಎಂದರು.
ನೀವು ಹಿರಿಯರು, ಸಚಿವ ಸ್ಥಾನ ಬೇಡವೇ? ಎಂದು ಸುದ್ದಿಗಾರರು ಕೇಳಿದ ಪ್ರಶ್ನೆಗೆ ಉತ್ತರಿಸಿದ ರೇಣುಕಾಚಾರ್ಯ, 'ನಾನು ಹಿರಿಯ ಅಂತಾ ಯಾವತ್ತೂ ಹೇಳಲ್ಲ. ನಾನು ಕಿರಿಯರಲ್ಲಿ ಅತ್ಯಂತ ಕಿರಿಯ. ಕೋವಿಡ್ ಸಮಯದಲ್ಲಿ ನಾನು ಮಾಡಿದ ಕೆಲಸ ದೇಶಾದ್ಯಂತ ಗೊತ್ತಿದೆ. ನನ್ನನ್ನು ಪಕ್ಷ ಕಡೆಗಣಿಸಿಲ್ಲ. ರಾಜಕೀಯ ಕಾರ್ಯದರ್ಶಿ ಸ್ಥಾನ ಅತ್ಯಂತ ಕಿರಿಯ ಸೇವೆ. ಆದರೂ ಪಕ್ಷಕ್ಕಾಗಿ ಕೆಲಸ ಮಾಡುತ್ತೇನೆ' ಎಂದರು.
ಸಿಎಂ ಬಸವರಾಜ ಬೊಮ್ಮಾಯಿ ನೇತೃತ್ವದಲ್ಲಿ ಮುಂದಿನ ಚುನಾವಣೆ ವಿಚಾರಕ್ಕೆ ಪ್ರತಿಕ್ರಿಯಿಸಿದ ಅವರು, 'ಸಂಘಟನಾ ಚತುರ ಅಮಿತ್ ಶಾ ಹೇಳಿಕೆಗೆ ನಾವು ಬದ್ಧ. ಸಹಜವಾಗಿ ಮುಖ್ಯಮಂತ್ರಿ ಆದವರ ನೇತೃತ್ವದಲ್ಲೇ ಚುನಾವಣೆ ನಡೆಯುತ್ತದೆ. ಮಾಜಿ ಸಿಎಂ ಯಡಿಯೂರಪ್ಪ, ಪಕ್ಷದ ಅಧ್ಯಕ್ಷ ನಳೀನ್ ಕುಮಾರ್ ಕಟೀಲ್ ಅವರ ಸಾಮೂಹಿಕ ನಾಯಕತ್ವದ ಅಡಿ ಚುನಾವಣೆಗೆ ಹೋಗುತ್ತೇವೆ ಎಂದು ಬೊಮ್ಮಾಯಿ ಹೇಳಿದ್ದಾರೆ. ಈ ಹಿನ್ನೆಲೆಯಲ್ಲಿ ನಮಗೆ ಗೆಲುವು ಮುಖ್ಯ' ಎಂದು ತಿಳಿಸಿದರು.
ಉಪಚುನಾವಣೆಗೆ ನೀವು ಹೋಗುತ್ತಿರಾ? ಎಂಬ ಪ್ರಶ್ನೆಗೆ, 'ನಾನು ಹೋದರೆ ಬಹಳ ದೊಡ್ಡ ಬದಲಾವಣೆ ಏನೂ ಆಗಲ್ಲ. ದೊಡ್ಡವರು ಇದ್ದಾರೆ. ಹೊನ್ನಾಳಿಯಲ್ಲಿ ಕಸ ಹೊಡೆದು ಪಕ್ಷ ಕಟ್ಟಿದ್ದೇನೆ. ಎರಡು ಬಾರಿ ಜೈಲಿಗೆ ಹೋಗಿದ್ದೇನೆ. ನೀಡಿರುವ ಜವಾಬ್ದಾರಿ ಮೂಲಕ ಪಕ್ಷ ಸಂಘಟನೆ ಮಾಡುತ್ತೇನೆ' ಎಂದರು.
ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿಯಾಗಿ ನೇಮಕಗೊಂಡಿರುವ ಎಂ.ಪಿ.ರೇಣುಕಾಚಾರ್ಯ ವಿಕಾಸಸೌಧದಲ್ಲಿನ ತಮ್ಮ ಕೊಠಡಿಯಲ್ಲಿ ಆಯೋಜಿಸಿದ್ದ ಪೂಜಾ ಕಾರ್ಯಕ್ರಮದಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಭಾಗವಹಿಸಿ, ರೇಣುಕಾಚಾರ್ಯ ಅವರಿಗೆ ಸಿಹಿ ತಿನ್ನಿಸಿ ಶುಭ ಕೋರಿದರು. ಮಾಜಿ ಶಾಸಕ ಅಶೋಕ ಖೇಣಿ ಸೇರಿ ಮತ್ತಿತರರು ಈ ವೇಳೆ ಉಪಸ್ಥಿತರಿದ್ದರು.