ಬೆಂಗಳೂರು: ವಿಧಾನಸಭೆ ಅಧ್ಯಕ್ಷರ ಪೀಠದಲ್ಲಿ ಕುಳಿತು ರಮೇಶ್ ಕುಮಾರ್ ನೃತ್ಯಗಾರ ಹೆಣ್ಣು ಮಕ್ಕಳ ಬಗ್ಗೆ ಹಗುರವಾಗಿ ಮಾತಾಡಿದ್ದು, ಕೂಡಲೇ ಸ್ಪೀಕರ್ ಕ್ಷಮೆ ಯಾಚಿಸಬೇಕು ಎಂದು ಸಂಸದೆ ಶೋಭಾ ಕರಂದ್ಲಾಜೆ ಆಗ್ರಹಿಸಿದ್ದಾರೆ.
ನಾನು ನೃತ್ಯಗಾರನಲ್ಲ ಎಂದು ಸ್ಪೀಕರ್ ಪೀಠದಲ್ಲಿ ಕೂತು ರಮೇಶ್ ಕುಮಾರ್ ಹೇಳಿಕೆ ನೀಡಿದ್ದಾರೆ. ಎರಡು ಮೂರು ಬಾರಿ ಅವರು ಅಸಾಂವಿಧಾನಾತ್ಮಕವಾಗಿ ಮಾತಾಡಿದ್ದಾರೆ. ಹಿಂದೆ ಅದೇ ಪೀಠದಲ್ಲಿ ಕೂತು ವೇಶ್ಯೆಯರ ಬಗ್ಗೆ ಮಾತಾಡಿದ್ದರು, ಈಗ ನೃತ್ಯಗಾರರ ಬಗ್ಗೆ ಮಾತಾಡಿದ್ದಾರೆ. ಅವರ ನೆತ್ತಿ ಮೇಲೆ ದೇಶದ ಲಾಂಛನ ಇದೆ, ಆ ಪೀಠದಲ್ಲಿ ಕೂತು ಗೌರವಯುತವಾಗಿ ಮಾತಾಡಬೇಕು. ದೇಶದಲ್ಲಿ ಭರತನಾಟ್ಯ, ಯಕ್ಷಗಾನ, ಕಥಕ್ಕಳಿ ಮೂಲಕ ದೇವರನ್ನು ಒಲಿಸಿಕೊಂಡ ಕಲಾವಿದರಿದ್ದಾರೆ ಎಂದು ಕಿಡಿಕಾರಿದರು.