ಆನೇಕಲ್ (ಬೆಂಗಳೂರು): ಅತ್ತಿಬೆಲೆ ಪಟಾಕಿ ಗೋದಾಮಿನಲ್ಲಿ ಶನಿವಾರ ನಡೆದ ಅಗ್ನಿ ಅವಘಡ ಸ್ಥಳಕ್ಕೆ ಸಿಎಂ ಸಿದ್ದರಾಮಯ್ಯ, ಡಿಸಿಎಂ ಡಿ ಕೆ ಶಿವಕುಮಾರ್ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಈ ವೇಳೆ ಪಟಾಕಿ ದುರಂತ ಪ್ರಕರಣವನ್ನು ಸಿಐಡಿಗೆ ವಹಿಸುವುದಾಗಿ ಎಂದು ಹೇಳಿದರು.
ಘಟನಾ ಸ್ಥಳಕ್ಕೆ ಭೇಟಿ ನೀಡಿದ ಬಳಿಕ ಮಾಧ್ಯಮದವರೊಂದಿಗೆ ಮಾತನಾಡಿದ ಸಿಎಂ ಸಿದ್ದರಾಮಯ್ಯ, ಅತ್ತಿಬೆಲೆಯ ಪಟಾಕಿ ಗೋದಾಮಿನಲ್ಲಿ ನಡೆದ ಅಗ್ನಿ ಅವಘಡ ಪ್ರಕರಣದಲ್ಲಿ ಒಟ್ಟು 14 ಮಂದಿ ಸಾವನ್ನಪ್ಪಿದ್ದು, 7 ಮಂದಿ ಗಂಭೀರ ಗಾಯಗೊಂಡಿದ್ದಾರೆ. ಘಟನೆ ನಡೆದ ತಕ್ಷಣ ಅಗ್ನಿಶಾಮಕ ದಳದ ಸಿಬ್ಬಂದಿ ಸ್ಥಳಕ್ಕೆ ಧಾವಿಸಿ ಬೆಂಕಿ ನಂದಿಸುವ ಕಾರ್ಯ ಮಾಡಿದ್ದಾರೆ. ಈ ಪ್ರಕರಣವನ್ನು ಸಿಐಡಿ ತನಿಖೆಗೆ ವಹಿಸಲಾಗುವುದು. ಸಿಐಡಿಯು ಘಟನೆ ಹಿಂದಿರುವ ಕಾರಣ ಮತ್ತು ಆರೋಪಿಗಳ ವಿರುದ್ಧ ತನಿಖೆ ನಡೆಸಲಿದೆ. ತಪ್ಪಿತಸ್ಥರಿಗೆ ಶಿಕ್ಷೆಯಾಗುತ್ತದೆ. ಮೃತರ ಗುರುತು ಪತ್ತೆ ಹಚ್ಚಲಾಗಿದೆ ಎಂದು ತಿಳಿಸಿದರು.
ಅಕ್ಟೋಬರ್ 7ರಂದು ಮಧ್ಯಾಹ್ನ 3.15 ರಿಂದ 3.30ರ ವೇಳೆ ಬೆಂಕಿ ಅನಾಹುತ ನಡೆದಿದೆ. ಇದು ಅತ್ಯಂತ ದುರದೃಷ್ಟಕರ ಘಟನೆ. ರಾಮುಸ್ವಾಮಿರೆಡ್ಡಿ ಎಂಬುವರು ಪರವಾನಗಿ ಪಡೆದು ಪಟಾಕಿ ಮಾರಾಟದ ವ್ಯವಹಾರ ಮಾಡುತ್ತಿದ್ದರು. ಶನಿವಾರ ಮಧ್ಯಾಹ್ನ 3 ಗಂಟೆ ಸಮಯದಲ್ಲಿ ತಮಿಳುನಾಡಿನಿಂದ ಟ್ರಕ್ ಗಳಲ್ಲಿ ಪಟಾಕಿಗಳು ಬಂದಿದ್ದು, ಬೆಂಕಿ ಹೇಗೆ ಪಟಾಕಿಗೆ ತಗುಲಿತು ಎನ್ನುವುದಕ್ಕೆ ನಿಖರ ಕಾರಣ ತಿಳಿದುಬಂದಿಲ್ಲ. ಅಧಿಕಾರಿಗಳು ಇಲ್ಲಿ ಪರಿಶೀಲಿಸಿದ ಮೇಲೆ, ಸ್ಫೋಟಕಗಳ ಮಾರಾಟ ಮಾಡುವ ಗೋದಾಮಿನಲ್ಲಿ ಸುರಕ್ಷಾ ಕ್ರಮಗಳನ್ನು ತೆಗೆದುಕೊಂಡಿರಲಿಲ್ಲ ಎಂದು ಕಂಡುಬಂದಿದೆ.
ಗೋದಾಮಿನ ಸ್ಥಳ ಬಹಳ ಕಿರಿದಾಗಿದ್ದು, ಇದರಲ್ಲಿ 14 ಜನರು ಮೃತಪಟ್ಟಿದ್ದಾರೆ. ಎಲ್ಲರೂ ತಮಿಳುನಾಡಿನ ಕೃಷ್ಣಗಿರಿ, ಧರ್ಮಪುರಿಯವರು. ಅವರಲ್ಲಿ ಬಹುತೇಕರು ವಿದ್ಯಾರ್ಥಿಗಳು. ರಜಾ ಸಮಯದಲ್ಲಿ ಓದಿಗಾಗಿ ಹಣ ಸಂಪಾದನೆಗಾಗಿ ಬಂದವರು. ಒಬ್ಬ ಮ್ಯಾನೇಜರನ್ನು ಹೊರತುಪಡಿಸಿ ಯಾರೂ ಖಾಯಂ ನೌಕರರಿಲ್ಲ. ಸ್ಫೋಟಕಗಳಿಗೆ ಅಗತ್ಯವಾದ ಯಾವುದೇ ಸುರಕ್ಷತಾ ಕ್ರಮಗಳನ್ನು ಕೈಗೊಂಡಿಲ್ಲ. ಗೋದಾಮು ಅಧಿಕೃತವೋ ಅಲ್ಲವೋ ಎಂಬುದನ್ನು ಪರಿಶೀಲಿಸಬೇಕು ಎಂದು ಹೇಳಿದರು.