ಕರ್ನಾಟಕ

karnataka

ETV Bharat / state

HDK ಯಾವಾಗಲು ಬಿಚ್ಚಿಡುತ್ತೇನೆ ಅಂತಾರೆ, ಬಿಚ್ಚಪ್ಪಾ ಬಿಚ್ಚು.. ಈಗಲೇ ಬಿಚ್ಚು: ಹೆಚ್​.ವಿಶ್ವನಾಥ್ ಗರಂ - ಸಿದ್ದರಾಮಯ್ಯ

ರಾಜಕೀಯ ಪಕ್ಷಗಳ ನಾಯಕರು ತಮ್ಮತನ ಮರೆತು ಪರಸ್ಪರ ಬೈದಾಟದಲ್ಲಿ ತೊಡಗಿಕೊಂಡಿರುವುದು ಸರಿಯಲ್ಲ ಎಂದು ಹೆಚ್​.ವಿಶ್ವನಾಥ್ ಅಭಿಪ್ರಾಯಪಟ್ಟಿದ್ದಾರೆ.

ಹೆಚ್. ವಿಶ್ವನಾಥ್
ಹೆಚ್. ವಿಶ್ವನಾಥ್

By

Published : Oct 21, 2021, 8:54 PM IST

ಬೆಂಗಳೂರು: ರಾಜ್ಯದಲ್ಲಿ ಆಡಳಿತ ಮಾಡುವ ನಮ್ಮ ಪಕ್ಷ ಅಥವಾ ವಿಪಕ್ಷಗಳೇ ಇರಬಹುದು. ತಮ್ಮತನವನ್ನೇ ಮರೆತು ಪರಸ್ಪರ ಬೈದಾಟದಲ್ಲಿ ತೊಡಗಿಕೊಂಡಿರುವುದು ಸರಿಯಲ್ಲ ಎಂದು ವಿಧಾನ ಪರಿಷತ್ ಸದಸ್ಯ ಹೆಚ್.ವಿಶ್ವನಾಥ್ ಬೇಸರ ವ್ಯಕ್ತಪಡಿಸಿದ್ದಾರೆ.

ಸಿದ್ದರಾಮಯ್ಯ, ಕಟೀಲು ವಿರುದ್ಧ ಹೆಚ್.ವಿಶ್ವನಾಥ್​ ವಾಗ್ದಾಳಿ

ವಿಧಾನಸೌಧದಲ್ಲಿ ಮಾತನಾಡಿದ ಅವರು, ಎಂತೆಂಥ ಪುಣ್ಯಾತ್ಮರು ರಾಜ್ಯ ಆಳಿ ಹೋದರು. ಆದ್ರೀಗ, ರಾಜ್ಯದಲ್ಲಿ ಆಡಳಿತ ಮಾಡುವ ನಮ್ಮ ಪಕ್ಷ, ಜೆಡಿಎಸ್, ಕಾಂಗ್ರೆಸ್ ತಮ್ಮತನವನ್ನು ಮರೆತಿವೆ. ರಾಜ್ಯಕ್ಕೆ ತನ್ನದೇ ಆದ ಸ್ಥಾನಮಾನವಿತ್ತು. ಅದನ್ನು ಬಾವಿಕಟ್ಟೆ ಬಳಿ ಮಾತನಾಡುವಂತೆ ಮಾತನಾಡುತ್ತಿದ್ದಾರೆ. ರಾಜ್ಯದ ಜನ ಇದನ್ನು ಒಪ್ಪಿಕೊಳ್ಳುವುದಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದ್ರು.

ಇಂದು ಸಾಕಷ್ಟು ವಿಚಾರಗಳು ರಾಜ್ಯದಲ್ಲಿವೆ. ಇವುಗಳನ್ನು ಬದಿಗೊತ್ತಿ ನೀನ್ಯಾರು? ನಿನಗೆಷ್ಟು ಹೆಂಡ್ತಿಯರು, ಅವನು ಹೆಬ್ಬೆಟ್ಟು ಎಂಬ ಹೇಳಿಕೆ ನೀಡುತ್ತಿದ್ದಾರೆ. ಇದು ನಿಜಕ್ಕೂ ಸರಿಯಲ್ಲ. ತಮಿಳುನಾಡು ಆಳಿದ ಕಾಮರಾಜ್​ ನಾಡರ್​ ಹೆಬ್ಬೆಟ್ಟೇ ಅಲ್ಲವೇ. ಒಂದು ಜಿಲ್ಲೆಯಲ್ಲಿ ಪ್ರಿಂಟಿಂಗ್​ ಟೆಕ್ನಾಲಜಿ ಮತ್ತೊಂದು ಜಿಲ್ಲೆಯಲ್ಲಿ ಟೆಕ್ಸ್​ಟೈಲ್ಸ್ ಮಾಡಿ ಹೆಸರು ಮಾಡಿದವರು ಎಂದು ಪರೋಕ್ಷವಾಗಿ ಕಾಂಗ್ರೆಸ್ ವಿರುದ್ಧ ಹರಿಹಾಯ್ದರು.

‘ಮೋದಿಯವರನ್ನು ಹೆಬ್ಬೆಟ್ಟು ಅಂದಿದ್ದು ಸರಿಯಲ್ಲ’

ಸಿದ್ದರಾಮಯ್ಯ, ನರೇಂದ್ರ ಮೋದಿಯವರನ್ನು ಹೆಬ್ಬೆಟ್ಟು ಅಂದಿದ್ದು ಸರಿಯಲ್ಲ. ಹಿಂದುಳಿದ ವರ್ಗದ ಪ್ರಥಮ ಪ್ರಧಾನಿ ಮೋದಿ. ಅಂಥ ಪ್ರಧಾನಿಯವರ ಬಗ್ಗೆ ಲಘುವಾಗಿ ಮಾತನಾಡಬಾರದು. ಸಿದ್ದರಾಮಯ್ಯನವರೇ, ಅಹಿಂದ ಅಹಿಂದ ಅಂತೀರಲ್ಲ. ಹಿಂದುಳಿದ ವರ್ಗದವರಿಗೆ ಇನ್ಯಾವ ಗೌರವ ಕೊಡ್ತೀರಿ. ಒಂದು ಬಾರಿ ಸಿಎಂ ಆಗಿದ್ದವರು ನೀವು. ನಂತರ 36 ಸಾವಿರ ಮತಗಳ ಅಂತರದಿಂದ ಬಿದ್ದವರು ನೀವು. ಈಗ ಗೆದ್ದವರ ಬಗ್ಗೆ ಮಾತನಾಡುತ್ತೀರಲ್ಲ ಸಿದ್ದರಾಮಯ್ಯನವರೇ ಎಂದು ವಾಗ್ದಾಳಿ ನಡೆಸಿದರು.

‘ಯುವಕರಿಗೆ ಕಲಿಸೋದು ಇದೇನಾ?’

ಮೂರು ಪಕ್ಷದವರು ಹೀಗೆಲ್ಲಾ ಮಾತಾಡೋದು, ಯುವಕರಿಗೆ ಕಲಿಸೋದು ಇದೇನಾ?. ದಯಮಾಡಿ ನಿಮ್ಮ ನಿಮ್ಮ ಕಿಚ್ಚನ್ನು ಮಾತಲ್ಲಿ ಹರಿಬಿಡಬೇಡಿ ಎಂದು ಸಲಹೆ ನೀಡಿದರು.

‘ಬಿಚ್ಚಪ್ಪಾ ಬಿಚ್ಚು’

ಕುಮಾರಸ್ವಾಮಿ ಯಾವಾಗಲು ಬಿಚ್ಚಿಡುತ್ತೇನೆ ಅಂತಾರೆ, ಬಿಚ್ಚಪ್ಪಾ ಬಿಚ್ಚು. ಸಮಯ ಯಾಕೆ ಬರಬೇಕು, ಈಗಲೇ ಬಿಚ್ಚು. ರಾಜ್ಯದ ಜನರಿಗೂ ಅದೇನು ಅಂತಾ ಗೊತ್ತಾಗಲಿ ಎಂದರು.

‘ರಾಜ್ಯವನ್ನು ಮಲಿನ ಮಾಡೋದು ಬೇಡ’

ರಾಹುಲ್ ಗಾಂಧಿ ಡ್ರಗ್ ಪೆಡ್ಲರ್​ ಎಂಬ ಕಟೀಲು ಮಾತಿಗೆ ಪ್ರತಿಕ್ರಿಯಿಸಿದ ವಿಶ್ವನಾಥ್, ರಾಜ್ಯವನ್ನು ಮಲಿನ ಮಾಡುವುದು ಬೇಡ. ನೆಹರೂ, ದೇವೇಗೌಡರ ಕುಟುಂಬ ಯಾವುದೇ ಆಗಿರಲಿ. ಅವರ ಕುಟುಂಬಗಳ ಬಗ್ಗೆ ಮಾತನಾಡುವುದು ಸರಿಯಲ್ಲ. ಅವರು ದೇಶಕ್ಕೆ ತಮ್ಮದೇ ಆದ ಕೊಡುಗೆ ಕೊಟ್ಟಿದ್ದಾರೆ ಎಂದರು.

ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲು ಅವರು, ರಾಹುಲ್ ಗಾಂಧಿಯವರ ಬಗ್ಗೆ ಮಾತನಾಡಿದ್ದು ಕೂಡ ಒಳ್ಳೆಯದಲ್ಲ. ಅವರ ವೈಯಕ್ತಿಕ ಚರೀಷ್ಮಾಗೂ ಒಳ್ಳೆಯದಲ್ಲ. ಆ ರೀತಿಯ ಮಾತುಗಳು ಯಾರಿಂದಲೂ ಬರಬಾರದು ಎಂದು ಹೇಳಿದ್ರು.

ಇದನ್ನೂ ಓದಿ: ಕೆಪಿಸಿಸಿ ಅಧ್ಯಕ್ಷರ ವಿರುದ್ಧ ಗುಸುಗುಸು.. ಉಗ್ರಪ್ಪ ವಿರುದ್ಧ ಕ್ರಮ ಕೈಗೊಳ್ಳಲು ಸಮಿತಿ ಹಿಂದೇಟು?

ಭಾರತ ಪ್ರಾಮಾಣಿಕತೆಯಿಂದ ಬಳಲುತ್ತಿದೆ. ನೀವು ಪ್ರಾಮಾಣಿಕತೆಯಿಂದ ಬಳಲುತ್ತಿದ್ದೀರಾ. ನಿಮಗೆ ಒಳ್ಳೆಯ ಮಾತುಗಳೇ ಬರುವುದಿಲ್ಲವೇ? ಎಂದು ಪ್ರಶ್ನಿಸಿದ ಅವರು, ಬೈಗಮಿ ಪದ ಬಳಕೆ ಮಾಡಿದ್ದೂ ಸರಿಯಲ್ಲ. ವೈಯುಕ್ತಿಕ ಟೀಕೆ ಸರಿಯಲ್ಲ. ಅಭಿವೃದ್ಧಿ ದೃಷ್ಟಿಯಿಂದ ಚರ್ಚೆ ಮಾಡಲು ಬೇಕಾದಷ್ಟಿದೆ. ರೈತರ ದುಃಖ ದುಮ್ಮಾನಗಳಿವೆ ಎಂದರು.

ಬಿಎಸ್​​ವೈ ವಿರುದ್ಧವೂ ಹಳ್ಳಿಹಕ್ಕಿ ಗರಂ

ಬಿ.ಎಸ್. ಯಡಿಯೂರಪ್ಪ, ಎಂ.ಜಿ.ರಸ್ತೆಯಲ್ಲಿ 5 ಕೋಟಿ ರೂ.ಗೆ ರಸ್ತೆ ಉದ್ಘಾಟನೆ ಮಾಡಿ ಬಂದರು. ಅವರು ಬರುತ್ತಿದ್ದಂತೆಯೇ ಮಳೆಯಲ್ಲಿ ರಸ್ತೆ ಕೊಚ್ಚಿಹೋಯ್ತು ಎಂದು ಬಿಎಸ್​ವೈ ವಿರುದ್ಧ ಕುಟುಕಿದರು.

ABOUT THE AUTHOR

...view details