ಬೆಂಗಳೂರು: ಬಿಜೆಪಿಯಲ್ಲಿ ನನಗೆ ಯಡಿಯೂರಪ್ಪನವರು ಗೊತ್ತೇ ವಿನಃ ಹೈಕಮಾಂಡ್ನವರು ಯಾರೂ ಗೊತ್ತಿಲ್ಲ ಎಂದು ಮಾಜಿ ಸಚಿವ ಶಾಸಕ ಹೆಚ್ ವಿಶ್ವನಾಥ್ ಹೇಳಿದ್ದಾರೆ.
ಹೆಚ್ ವಿಶ್ವನಾಥ್, ಮಾಜಿ ಸಚಿವ ನಗರದ ಪ್ರೆಸ್ ಕ್ಲಬ್ನಲ್ಲಿ ಮಾತನಾಡಿದ ಅವರು, ಮಂತ್ರಿಗಿರಿಗೋಸ್ಕರ ನಾನು ಯಡಿಯೂರಪ್ಪನವರನ್ನು ಭೇಟಿ ಮಾಡಿಲ್ಲ. ಕ್ಷೇತ್ರ ಮತ್ತು ಜಿಲ್ಲೆಯ ಕೆಲಸಗಳಿಗಾಗಿ ಭೇಟಿ ಮಾಡಿದ್ದೇನೆ ಎಂದು ಸ್ಪಷ್ಟಪಡಿಸಿದರು. ಈ ನಾಡಿನಲ್ಲಿ ನಾಲಿಗೆ ಮೇಲೆ ನಿಂತ ನಾಯಕ ಅಂದ್ರೆ ಅದು ಯಡಿಯೂರಪ್ಪನವರು. ಅವರ ಮಾತಿನ ಮೇಲೆ ನನಗೆ ನಂಬಿಕೆ ಇದೆ. ಸಚಿವ ಸ್ಥಾನ ಸಿಗುವ ವಿಶ್ವಾಸ ಇದೆ. ಯಡಿಯೂರಪ್ಪನವರು ಮಾತು ಕೊಟ್ಟ ಮೇಲೆ ಈಡೇರಿಸುತ್ತಾರೆ ಎಂದರು.
ಉಪ ಚುನಾವಣೆಯಲ್ಲಿ ಸೋತವರಿಗೆ ಸಚಿವ ಸ್ಥಾನ ಕೊಡಬೇಕು ಎಂಬ ಬಗ್ಗೆ ಈ ಹಿಂದೆ ಚರ್ಚೆ ಮಾಡಿಲ್ಲ. ನಾವು ಮಂತ್ರಿ ಆಗುವ ಉದ್ದೇಶದಿಂದ ಸರ್ಕಾರ ಪತನ ಮಾಡಲಿಲ್ಲ. ಮೈತ್ರಿ ಸರ್ಕಾರ ಜನತಂತ್ರಕ್ಕೆ ಮಾರಕವಾಗಿತ್ತು. ಜನತಂತ್ರ ವ್ಯವಸ್ಥೆ ಉಳಿವಿಗಾಗಿ ಸರ್ಕಾರ ಪತನ ಮಾಡಿದ್ದೇವೆ. ಅದರ ಜೊತೆಗೆ ಯಡಿಯೂರಪ್ಪನವರನ್ನು ನಂಬಿರುವವರು ನಾವು ಎಂದು ಹೇಳಿದರು.
ಮಾಜಿ ಸ್ಪೀಕರ್ ರಮೇಶ್ ಕುಮಾರ್ ಒಳಗೊಂಡಂತೆ ಕಾಂಗ್ರೆಸ್-ಜೆಡಿಎಸ್ ನಾಯಕರು ಸೇರಿ ಪ್ರಜಾಪ್ರಭುತ್ವ ಅಪಾಯದಲ್ಲಿದೆ ಎನ್ನುತ್ತಿದ್ದರು. ಆದರೆ, ಜನತಂತ್ರ ವ್ಯವಸ್ಥೆ ಅವರಿಂದ ಒದ್ದಾಡುತ್ತಿತ್ತು. ಹೀಗಾಗಿ ಮೈತ್ರಿ ಸರ್ಕಾರ ಪತನವಾಯ್ತು ಎಂದರು. ಸಚಿವ ಸಂಪುಟ ವಿಸ್ತರಣೆಯಾದ ಬಳಿಕ ಸಿಎಂ ಸ್ಥಾನದಲ್ಲಿ ಯಡಿಯೂರಪ್ಪ ಉಳಿಯುವುದಿಲ್ಲವೆಂದು ಹಾಸನದಲ್ಲಿ ಕುಮಾರಸ್ವಾಮಿ ನೀಡಿರುವ ಹೇಳಿಕೆ ಕುರಿತು ಪ್ರತಿಕ್ರಿಸಿದ ಅವರು, ಇದು ಸತ್ಯಕ್ಕೆ ದೂರ ಅಂದರು.