ಬೆಂಗಳೂರು: ಮಾರತ್ ಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಅಕ್ರಮ ಬಾಂಗ್ಲಾ ವಾಸಿಗಳು ಎಂದು ಆರೋಪಿಸಿ ತೆರವುಗೊಳಿಸಿದ್ದ ಜೋಪಡಿ ನಿವಾಸಿಗಳಿಗೆ ಪರಿಹಾರ ವಿತರಿಸಲಾಗಿದೆ ಎಂದು ಸರ್ಕಾರ ಹೈಕೋರ್ಟ್‌ಗೆ ಮಾಹಿತಿ ನೀಡಿದೆ.
ಜೋಪಡಿ ನಿವಾಸಿಗಳನ್ನು ತೆರವು ಮಾಡಿದ್ದನ್ನು ಪ್ರಶ್ನಿಸಿ ಪೀಪಲ್ಸ್ ಯೂನಿಯನ್ ಫಾರ್ ಸಿವಿಲ್ ಲಿಬರ್ಟೀಸ್ ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ಇಂದು ಮುಖ್ಯ ನ್ಯಾಯಮೂರ್ತಿ ಎ.ಎಸ್. ಓಕ ನೇತೃತ್ವದ ವಿಭಾಗೀಯ ಪೀಠ ವಿಚಾರಣೆ ನಡೆಸಿತು.
ಈ ವೇಳೆ ಸರ್ಕಾರದ ಪರ ವಕೀಲರು ಪೀಠಕ್ಕೆ ಮಾಹಿತಿ ನೀಡಿ, ತೆರವು ಕಾರ್ಯಾಚರಣೆಯಲ್ಲಿ ಜೋಪಡಿ ಕಳೆದುಕೊಂಡ 131 ಕುಟುಂಬಗಳಲ್ಲಿ 95 ಕುಟುಂಬಗಳಿಗೆ ಹೈಕೋರ್ಟ್ ನಿರ್ದೇಶನದಂತೆ ತಾತ್ಕಾಲಿಕ ಪರಿಹಾರ 14,100 ಹಾಗೂ 29 ಸಾವಿರ ಪುನರ್ವಸತಿ ಪರಿಹಾರ ಹಣ ನೀಡಲಾಗಿದೆ. ಇನ್ನು 36 ಕುಟುಂಬಗಳ ಬ್ಯಾಂಕ್ ಖಾತೆ ವಿವರ ಲಭ್ಯವಾಗಿಲ್ಲ. ಹೀಗಾಗಿ ಅವರಿಗೆ ಪರಿಹಾರ ನೀಡಲು ಸಾಧ್ಯವಾಗಿಲ್ಲ ಎಂದರು.
ಇದನ್ನೂ ಓದಿ: ಬೀದಿ ನಾಯಿಗಳ ಪಾಲಿಗೆ ಮಹಾತಾಯಿ 'ರಾಧಿಕಾ ರಾಘವಾನ್'
ಇದಕ್ಕೆ ಪ್ರತಿಕ್ರಿಯಿಸಿದ ಪೀಠ, ಅರ್ಜಿದಾರರು ಸಂತ್ರಸ್ತರ ಬ್ಯಾಂಕ್ ಖಾತೆಗಳ ವಿವರಗಳನ್ನು ಸಂಗ್ರಹಿಸಿ ತಹಶೀಲ್ದಾರ್ಗೆ ಸಲ್ಲಿಸಬೇಕು. ಅವುಗಳನ್ನು ಪಡೆದು ಅಧಿಕಾರಿಗಳು ಸಂತ್ರಸ್ತರ ಕುಟುಂಬಗಳಿಗೆ ಪರಿಹಾರ ಹಣವನ್ನು ಬ್ಯಾಂಕ್ ಖಾತೆಗಳಿಗೆ ಜಮಾವಣೆ ಮಾಡಬೇಕು ಎಂದು ನಿರ್ದೇಶಿಸಿ, ವಿಚಾರಣೆಯನ್ನು ಏಪ್ರಿಲ್ 21ಕ್ಕೆ ಮುಂದೂಡಿತು.
ಪ್ರಕರಣದ ಹಿನ್ನೆಲೆ:ಅಕ್ರಮ ಬಾಂಗ್ಲಾ ನಿವಾಸಿಗಳು ಎಂದು ಮಾರತಹಳ್ಳಿ ಠಾಣೆ ಪೊಲೀಸರು ನೀಡಿದ ಮಾಹಿತಿ ಪರಿಶೀಲಿಸದೆ ಬಿಬಿಎಂಪಿ ಅಧಿಕಾರಿಗಳು ಠಾಣೆ ವ್ಯಾಪ್ತಿಯ ತೂಬರಹಳ್ಳಿ, ಕುಂದಲಹಳ್ಳಿ ಸುತ್ತಮುತ್ತಲಿನ ಜೋಪಡಿಗಳನ್ನು ತೆರವು ಮಾಡಿದ್ದರು. ಈ ಸಂಬಂಧ ಅರ್ಜಿದಾರರು ಹೈಕೋರ್ಟ್ ಮೆಟ್ಟಿಲೇರಿದ ಬಳಿಕ ಪೊಲೀಸರು ಹಾಗೂ ಬಿಬಿಎಂಪಿ ಪರಸ್ಪರ ಆರೋಪ-ಪ್ರತ್ಯಾರೋಪ ಮಾಡಿದ್ದರು.
ಪ್ರಕರಣದ ವಿಚಾರಣೆ ನಡೆಸಿದ್ದ ಪೀಠ, ಸೂರು ಕಳೆದುಕೊಂಡಿರುವ ಕುಟುಂಬಗಳಿಗೆ ತಾತ್ಕಾಲಿಕವಾಗಿ 14100 ರೂಪಾಯಿ ಪರಿಹಾರ ನೀಡಬೇಕು. ಜತೆಗೆ ಪುನರ್ವಸತಿ ಕಲ್ಪಿಸಬೇಕು ಎಂದು ತಾಕೀತು ಮಾಡಿತ್ತು. ಇದಕ್ಕೆ ಸರ್ಕಾರ ಆನೇಕಲ್ ಜಿಗಣಿಯಲ್ಲಿ 29 ಸಾವಿರ ವೆಚ್ಚದಲ್ಲಿ ವರ್ಷದ ಮಟ್ಟಿಗೆ ತಾತ್ಕಾಲಿಕ ಶೆಡ್ ಗಳನ್ನು ನಿರ್ಮಿಸಿ ಪುನರ್ವಸತಿ ಕಲ್ಪಿಸುವುದಾಗಿ ತಿಳಿಸಿತ್ತು. ಕಾರ್ಮಿಕರು ಹಾಗೂ ಅರ್ಜಿದಾರರು ಒಪ್ಪದ ಹಿನ್ನೆಲೆಯಲ್ಲಿ ಪುನರ್ ವಸತಿಗೆ ಅಂದಾಜಿಸಿದ್ದ 29 ಸಾವಿರ ಹಣವನ್ನು ಪರಿಹಾರವಾಗಿ ಸಂತ್ರಸ್ತರಿಗೆ ನೀಡುವಂತೆ ಆದೇಶಿಸಿತ್ತು. ಅದರಂತೆ ಪರಿಹಾರ ವಿತರಿಸಲಾಗುತ್ತಿದೆ.