ಬೆಂಗಳೂರು:ಪತಿಯೊಂದಿಗೆ ವಿವಾಹೇತರ ಸಂಬಂಧ ಇರಿಸಿಕೊಂಡಿದ್ದಾರೆ ಎಂಬ ಆರೋಪದಡಿ ಕೌಟುಂಬಿಕ ದೌರ್ಜನ್ಯ ಪ್ರಕರಣದಲ್ಲಿ ಪ್ರತಿವಾದಿಯನ್ನಾಗಿ ಹೆಸರಿಸಲಾಗಿದ್ದ ಮಹಿಳೆಯನ್ನು ಪ್ರಕರಣದಿಂದ ಬಿಡುಗಡೆಗೊಳಿಸಿ ಹೈಕೋರ್ಟ್ ಮಹತ್ವದ ತೀರ್ಪು ನೀಡಿದೆ.
ಇಂತಹ ಸಂಬಂಧ ಹೊಂದಿದ್ದಾರೆ ಎನ್ನಲಾದ ಯಾವುದೇ ವ್ಯಕ್ತಿಯು ಕುಟುಂಬದ ಸದಸ್ಯರಾಗಿರುವುದಿಲ್ಲ. ಹೀಗಾಗಿ ಇಂತಹ ವ್ಯಕ್ತಿಗಳನ್ನು ಕೌಟುಂಬಿಕ ದೌರ್ಜನ್ಯ ಕಾಯ್ದೆ ಅಡಿ ಪ್ರಕರಣ ದಾಖಲಿಸಿದಾಗ ಪ್ರತಿವಾದಿಯಾಗಿ ಸೇರಿಸಲು ಬರುವುದಿಲ್ಲ ಎಂದು ಹೈಕೋರ್ಟ್ ಏಕಸದಸ್ಯ ಪೀಠ ಸ್ಪಷ್ಟಪಡಿಸಿದೆ.
ಅರಕಲಗೂಡಿನ ಜೆಎಂಎಫ್ಸಿ ನ್ಯಾಯಾಲಯದಲ್ಲಿ ದಾಖಲಿಸಿರುವ ಕೌಟುಂಬಿಕ ದೌರ್ಜನ್ಯ ಆರೋಪಕ್ಕೆ ಪ್ರಕರಣದಲ್ಲಿ ತಮ್ಮನ್ನು ಪ್ರತಿವಾದಿಯಾಗಿಸಿರುವ ಕ್ರಮ ಪ್ರಶ್ನಿಸಿ ರಾಮನಗರದ ಮಹಿಳೆಯೊಬ್ಬರು ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ನ್ಯಾ. ಹರೀಶ್ ಶ್ರೀನಿವಾಸ್ ಕುಮಾರ್ ಅವರಿದ್ದ ಏಕಸದಸ್ಯ ಪೀಠ ಆ ತೀರ್ಪು ಪ್ರಕಟಿಸಿದೆ.
ಪೀಠ ತನ್ನ ತೀರ್ಪಿನಲ್ಲಿ, ಅರ್ಜಿದಾರ ಮಹಿಳೆ ವಿರುದ್ಧ ''ಕೌಟುಂಬಿಕ ದೌರ್ಜನ್ಯದಿಂದ ಮಹಿಳೆಯರ ರಕ್ಷಣೆ ಕಾಯ್ದೆ-2005''ರ ಸೆಕ್ಷನ್ 12ರ ಅಡಿ ಮ್ಯಾಜಿಸ್ಟ್ರೇಟ್ ಕೋರ್ಟ್ಗೆ ಅರ್ಜಿ ಸಲ್ಲಿಸಲಾಗಿದೆ. ಆದರೆ, ಕಾಯ್ದೆಯ ಸೆಕ್ಷನ್ 2 (ಎಫ್) ಪ್ರಕಾರ ಅರ್ಜಿದಾರ ಮಹಿಳೆಯು ದೂರುದಾರ ಮಹಿಳೆಯ ಕುಟುಂಬದ ಸದಸ್ಯೆಯಲ್ಲ. ಪತಿಯೊಂದಿಗೆ ಸೇರಿ ಕಿರುಕುಳ ನೀಡಿದ್ದಾರೆ ಎಂದು ಆರೋಪಿಸಲು ಯಾವುದೇ ಸಾಕ್ಷ್ಯವಿಲ್ಲ. ಪತಿ ಮಹಿಳೆಯನ್ನು ಮನೆಗೆ ಕರೆತರುತ್ತಿದ್ದರು ಎಂಬುದನ್ನು ಬಿಟ್ಟರೆ ಬೇರೆ ಏನನ್ನೂ ಆರೋಪಿಸಿಲ್ಲ. ಹೀಗಾಗಿ ಕೌಟುಂಬಿಕ ದೌರ್ಜನ್ಯ ವ್ಯಾಖ್ಯಾನಿಸುವ 2(ಕ್ಯೂ) ವ್ಯಾಪ್ತಿಯಲ್ಲಿ ಮನೆಗೆ ಬರುತ್ತಿದ್ದರು ಎಂಬುದನ್ನು ದೌರ್ಜನ್ಯ ಎಂದು ಪರಿಗಣಿಸಲು ಸಾಧ್ಯವಿಲ್ಲ ಎಂದು ಅಭಿಪ್ರಾಯಪಟ್ಟಿದೆ. ಅಲ್ಲದೇ, ಅರ್ಜಿದಾರ ಮಹಿಳೆಯ ವಿರುದ್ಧ ಅರಕಲಗೂಡು ಜೆಎಂಎಫ್ ಸಿ ಕೋರ್ಟ್ ನಲ್ಲಿ ನಡೆಯುತ್ತಿದ್ದ ವಿಚಾರಣೆಯನ್ನು ರದ್ದುಪಡಿಸಿದೆ.
ಪ್ರಕರಣದ ಹಿನ್ನೆಲೆ:
ರಾಮನಗರ ಜಿಲ್ಲೆಯ ಕನಕಪುರ ತಾಲೂಕಿನ 24 ವರ್ಷ ವಯಸ್ಸಿನ ಮಹಿಳೆಯೊಬ್ಬರು ಅದೇ ವ್ಯಾಪ್ತಿಯ 35 ವರ್ಷದ ಮಹಿಳೆಯೊಬ್ಬರ ವಿರುದ್ಧ ಕೌಟುಂಬಿಕ ಹಿಂಸಾಚಾರದಿಂದ ಮಹಿಳೆಯರ ರಕ್ಷಣೆ ಕಾಯ್ದೆಯ ಸೆಕ್ಷನ್ 12ರ ಅಡಿ ಅಡಿ ಪರಿಹಾರ ಕೋರಿ ಅರಕಲಗೂಡು ಜೆಎಂಎಫ್ ಸಿ ನ್ಯಾಯಾಲಯದಲ್ಲಿ ಪ್ರಕರಣ ದಾಖಲಿಸಿದ್ದರು. ಮಹಿಳೆಯು ತನ್ನ ಪತಿಯೊಂದಿಗೆ ಅಕ್ರಮ ಸಂಬಂಧವಿರಿಸಿಕೊಂಡು ದೌರ್ಜನ್ಯ ಎಸಗಿದ್ದಾರೆ ಎಂದು ಆರೋಪಿಸಿದ್ದರು. ಈ ಪ್ರಕರಣದಲ್ಲಿ ತಮ್ಮನ್ನು ಅನಗತ್ಯವಾಗಿ ಸಿಲುಕಿಸಲಾಗಿದ್ದು, ತನ್ನ ವಿರುದ್ಧದ ವಿಚಾರಣೆಯನ್ನು ರದ್ದುಪಡಿಸಬೇಕು ಎಂದು ಆರೋಪಿ ಮಹಿಳೆ ಹೈಕೋರ್ಟ್ ಮೆಟ್ಟಿಲೇರಿದ್ದರು.
ಅರ್ಜಿ ವಿಚಾರಣೆ ವೇಳೆ ಆರೋಪಕ್ಕೆ ಒಳಗಾಗಿದ್ದ ಮಹಿಳೆ ಪರ ವಕೀಲರು ವಾದಿಸಿ, ದೂರುದಾರ ಮಹಿಳೆಯ ಪತಿ ಅರ್ಜಿದಾರರೊಂದಿಗ ವಿವಾಹೇತರ ಸಂಬಂಧ ಇರಿಸಿಕೊಂಡಿದ್ದಾರೆ ಎಂದು ಅನುಮಾನಿಸಿದ್ದಾರೆ. ಅದಕ್ಕಾಗಿಯೇ ಅರ್ಜಿದಾರರನ್ನು ಮನೆಗೆ ಕರೆದೊಯ್ದಿದ್ದಾರೆ ಎಂದು ಆರೋಪ ಮಾಡಿದ್ದಾರೆ. ಆದರೆ ಅವರ ಆರೋಪ ಕಾಯ್ದೆಯ ಸೆಕ್ಷನ 2(ಕ್ಯೂ) ವ್ಯಾಪ್ತಿಗೆ ಒಳಪಡುವುದಿಲ್ಲ. ಜತೆಗೆ ಪರಿಹಾರ ಕೋರಲು ಸಾಧ್ಯವಿಲ್ಲ. ಹೀಗಾಗಿ ಅರ್ಜಿ ವಜಾ ಮಾಡಬೇಕು ಎಂದು ವಾದಿಸಿದ್ದರು. ಇದೇ ವೇಳೆ ಆರೋಪ ಮಾಡಿದ್ದ ಮಹಿಳೆ ಪರ ವಾದಿಸಿದ್ದ ವಕೀಲರು, ಅರ್ಜಿದಾರ ಮಹಿಳೆಯು ದೂರುದಾರ ಮಹಿಳೆಯ ಪತಿಯೊಂದಿಗೆ ಅಕ್ರಮ ಸಂಬಂಧವಿರಿಸಿಕೊಳ್ಳುವ ಮೂಲಕ ಹಿಂಸೆ ನೀಡಿದ್ದಾರೆ. ಈ ಕಾರಣಕ್ಕಾಗಿ ಅವರನ್ನು ಪ್ರಕರಣದಲ್ಲಿ ಪ್ರತಿವಾದಿಯಾಗಿ ಸೇರಿಸಲಾಗಿದೆ ಎಂದಿದ್ದರು.