ಬೆಂಗಳೂರು: ಜನತೆಯಲ್ಲಿ ಕೊರೊನಾ ಭೀತಿ ಎಷ್ಟರ ಮಟ್ಟಿಗೆ ಆವರಿಸಿದೆ ಎಂದರೆ, ಇಲ್ಲೊಬ್ಬ ವ್ಯಕ್ತಿ 2 ವರ್ಷದ ಹಿಂದೆ ಪ್ರೀತಿಸಿ ಮದುವೆಯಾಗಿದ್ದ ತನ್ನ ಪತ್ನಿಗೆ ಕೊರೊನಾ ಪಾಸಿಟಿವ್ ಎಂದು ತಿಳಿದ ಬಳಿಕ ಆಕೆಯನ್ನು ಬಿಟ್ಟು ಪರಾರಿಯಾಗಿದ್ದಾನೆ. ಕೊನೇ ಪಕ್ಷ ಆಕೆಯ ಅಂತ್ಯ ಸಂಸ್ಕಾರಕ್ಕೂ ಬಂದಿಲ್ಲ.
ಇಂತಹದ್ದೊಂದು ಘಟನೆ ನಡೆದಿರುವುದು ನಗರದ ಮಹಾಲಕ್ಷ್ಮೀ ಲೇಔಟ್ನ ಶಂಕರಮಠ ವಾರ್ಡ್ ಜೆ.ಸಿ.ನಗರದಲ್ಲಿ. ಗಂಡ ಕಾರು ಚಾಲಕನಾಗಿ ದುಡಿಯುತ್ತಿದ್ದ, ಹೆಂಡತಿ ಒರಾಯನ್ ಮಾಲ್ನಲ್ಲಿ ಸೇಲ್ಸ್ ಗರ್ಲ್ ಆಗಿ ಕೆಲಸ ಮಾಡುತ್ತಿದ್ದಳು. ಕಳೆದ ನಾಲ್ಕೈದು ದಿನಗಳ ಹಿಂದೆ ಆರೋಗ್ಯ ಹದಗೆಟ್ಟಿದ್ದರಿಂದ ಅದಿಚುಂಚನಗಿರಿ ಆಸ್ಪತ್ರೆಯಲ್ಲಿ ಪತ್ನಿಗೆ ಗಂಟಲು ದ್ರವ ಪರೀಕ್ಷೆ ಮಾಡಿಸಿದ್ದ. ವರದಿಯಲ್ಲಿ ಕೊರೊನಾ ಪಾಸಿಟಿವ್ ಬಂದಿತ್ತು. ಇದರಿಂದ, ನನಗೆಲ್ಲಿ ಕೊರೊನಾ ಬಂದು ಬಿಡುತ್ತೋ ಎಂಬ ಭಯದಿಂದ ಪ್ರೀತಿಸಿ ಮದುವೆಯಾಗಿದ್ದ ತನ್ನ ಹೆಂಡತಿಯನ್ನೇ ಬಿಟ್ಟು ರಾತ್ರೋರಾತ್ರಿ ಪಲಾಯನ ಮಾಡಿದ್ದಾನೆ.
ಮೃತ ಮಹಿಳೆಯ ಅಂತ್ಯ ಸಂಸ್ಕಾರ ನೆರವೇರಿಸಿದ ಆರೋಗ್ಯ ಸಿಬ್ಬಂದಿ ಗಂಡ ಪರಾರಿಯಾದ ಬಳಿಕ ಹೆಂಡತಿ ರಾತ್ರಿ ನಿಧನ ಹೊಂದಿದ್ದಳು. ಬೆಳಗ್ಗೆ ಮನೆ ಮಾಲೀಕ ಬಿಬಿಎಂಪಿ ಸದಸ್ಯ ಎಂ. ಶಿವರಾಜು ಅವರ ಗಮನಕ್ಕೆ ತಂದಿದ್ದರು. ಮೃತಳ ಗಂಡನಿಗೆ ಕರೆ ಮಾಡಿದರೆ ಮೊಬೈಲ್ ಸ್ವಿಚ್ ಆಫ್ ಬರುತ್ತಿತ್ತು. ಹೀಗಾಗಿ, ಪೊಲೀಸರಿಗೆ ಮಾಹಿತಿ ನೀಡಿ, ಆ್ಯಂಬುಲೆನ್ಸ್ ತರಿಸಿ ಕೋವಿಡ್ ಮಾರ್ಗಸೂಚಿ ಪ್ರಕಾರ ಅಂತ್ಯಸಂಸ್ಕಾರ ಮಾಡಲಾಯಿತು. ಕೋವಿಡ್ ಸೋಂಕು ದೃಢಪಟ್ಟ ಬಳಿಕ ಯುವತಿ ಮೃತಪಟ್ಟಿದ್ದು, ಆಕೆಯ ಜೊತೆ ಇದ್ದ ಗಂಡನಿಗೂ ಸೋಂಕು ತಗುಲಿರುವ ಸಾಧ್ಯತೆಯಿದೆ. ಆದರೆ, ಯಾವುದಕ್ಕೂ ಆತ ಸಂಪರ್ಕಕ್ಕೆ ಸಿಗುತ್ತಿಲ್ಲ.
ಕೊರೊನಾ ಆವರಿಸಿಕೊಂಡ ಬಳಿಕ ಸಂಬಂಧಗಳಿಗೆ ಬೆಲೆ ಇಲ್ಲದಂತಾಗಿದೆ. ಭಯಪಡುವ ಬದಲು ಆತ್ಮಸ್ಥೈರ್ಯ ತಂದುಕೊಳ್ಳಿ. ದೇಹದಲ್ಲಿ ರೋಗ ಉಲ್ಬಣಗೊಂಡರೆ ವೈದ್ಯರೂ ಏನೂ ಮಾಡಲು ಸಾಧ್ಯವಿಲ್ಲ. ಆದ್ದರಿಂದ, ಕೋವಿಡ್ ಗುಣಲಕ್ಷಣಗಳಿರುವವರು ಕೂಡಲೇ ತಪಾಸಣೆ ಮಾಡಿಸಿಕೊಳ್ಳಿ. ಸೂಕ್ತ ಸಮಯದಲ್ಲಿ ಚಿಕಿತ್ಸೆ ಪಡೆಯಿರಿ ಎಂದು ಬಿಬಿಎಂಪಿ ಸದಸ್ಯ ಶಿವರಾಜು ಮನವಿ ಮಾಡಿದ್ದಾರೆ.