ಬೆಂಗಳೂರು: ಪತಿ ಉತ್ತಮ ಜೀವನ ನಡೆಸುತ್ತಿದ್ದು, ಪತ್ನಿ ಮತ್ತು ಮಕ್ಕಳನ್ನು ಗಂಡನಿಗಿಂತಲೂ ಕಳಪೆ ಮಟ್ಟದ ಜೀವನ ನಡೆಸುವಂತೆ ಹೇಳಲಾಗುವುದಿಲ್ಲ ಎಂದು ತಿಳಿಸಿರುವ ಹೈಕೋರ್ಟ್, ವಿಚಾರಣಾ ನ್ಯಾಯಾಲಯ ಪತ್ನಿಗೆ ನಿಗದಿಪಡಿಸಿದ್ದ ನಿರ್ವಹಣಾ ವೆಚ್ಚ ದುಪ್ಪಟ್ಟು ನಿಗದಿಪಡಿಸಿ ಆದೇಶಿಸಿದೆ.
ಕೌಟುಂಬಿಕ ನ್ಯಾಯಾಲಯ ಮಾಸಿಕ 75 ಸಾವಿರ ರೂ. ನಿರ್ವಹಣಾ ವೆಚ್ಚ ಪಾವತಿ ಮಾಡುವಂತೆ ಪತಿಗೆ ಆದೇಶಿಸಿದ್ದ ಕ್ರಮ ಪ್ರಶ್ನಿಸಿ ಪತ್ನಿ ಹೈಕೋರ್ಟ್ ಮೆಟ್ಟಿಲೇರಿದ್ದರು. ಈ ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಎಂ ನಾಗಪ್ರಸನ್ನ ಅವರಿದ್ದ ನ್ಯಾಯಪೀಠ, ಪತಿ ಐಷಾರಾಮಿ ಜೀವನ ಶೈಲಿಯನ್ನು ಅನುಭವಿಸುತ್ತಿದ್ದಾಗ ಹೆಂಡತಿ ಹಾಗೂ ಮಗುವನ್ನು ಗೊಂದಲದಲ್ಲಿ ಬಿಡುವುದಕ್ಕೆ ಸಾಧ್ಯವಿಲ್ಲ ಎಂದು ತಿಳಿಸಿದೆ. ಒಟ್ಟು 1.5 ಲಕ್ಷ ರೂ.ಗಳ ನಿರ್ವಹಣಾ ವೆಚ್ಚ ಪಾವತಿ ಮಾಡುವಂತೆ ಸೂಚನೆ ನೀಡಿ ಆದೇಶಿಸಿದೆ. ಅಲ್ಲದೇ ಮಗುವಿನ ಶೈಕ್ಷಣಿಕ ವೆಚ್ಚವನ್ನು ಸಪೂರ್ಣವಾಗಿ ಪಾವತಿ ಮಾಡಬೇಕು. ಜತೆಗೆ, ಕೌಟುಂಬಿಕ ನ್ಯಾಯಾಲಯ ಹಾಗೂ ಹೈಕೋರ್ಟ್‌ನಲ್ಲಿನ ನ್ಯಾಯಾಂಗ ಹೋರಾಟದ ವೆಚ್ಚವನ್ನು ಪಾವತಿ ಮಾಡಬೇಕು ಎಂದು ಪೀಠ ಹೇಳಿದೆ.
ಪ್ರಕರಣಕ್ಕೆ ಸಂಬಂಧಿಸಿದ ದಾಖಲೆಗಳು ಹಾಗೂ ವಾದ-ಪ್ರತಿವಾದ ಆಲಿಸಿದ ನ್ಯಾಯಪೀಠ, ಪತಿ ಐದು ಕಂಪನಿಗಳನ್ನು ನಿರ್ವಹಣೆ ಮಾಡುತ್ತಿದ್ದು, ಉತ್ತಮ ರೀತಿಯಲ್ಲಿ ನಡೆಯುತ್ತಿವೆ ಎಂಬುದು ದಾಖಲೆಗಳಿಂದ ತಿಳಿದು ಬಂದಿದೆ. ಅಲ್ಲದೆ, ಪತಿ ಕಾರುಗಳ ಸಮೂಹವನ್ನು ನಿರ್ವಹಣೆ ಮಾಡುತ್ತಿದ್ದಾರೆ. ಪತಿ ವ್ಯವಹಾರಕ್ಕಾಗಿ ಸಾಲ ಮಾಡಿದ್ದು, ಇದಕ್ಕಾಗಿ 7.7 ಲಕ್ಷ ರೂ. ಇಎಂಐನ್ನು ಪಾವತಿ ಮಾಡುತ್ತಿದ್ದಾರೆ. ಆದ್ದರಿಂದ ಗಂಡ ಉತ್ತಮ ಜೀವನ ನಡೆಸುವಾಗ ಪತ್ನಿ ಮತ್ತು ಮಗನನ್ನೂ ನೋಡಿಕೊಳ್ಳಬೇಕಾದ ಜವಾಬ್ದಾರಿಯೂ ಇರಲಿದೆ ಎಂದು ಅಭಿಪ್ರಾಯಪಟ್ಟ ನ್ಯಾಯಪೀಠ, ಅರ್ಜಿ ಇತ್ಯರ್ಥ ಪಡಿಸಿ ಆದೇಶಿಸಿದೆ.