ಬೆಂಗಳೂರು : ಧರ್ಮ ಹಾಗೂ ಕಾನೂನಿನಲ್ಲಿ ಹೆಂಡತಿ ಮತ್ತು ಮಕ್ಕಳಿಗೆ ಜೀವನಾಂಶ ಪಾವತಿಸುವುದು ಗಂಡನ ಕರ್ತವ್ಯವಾಗಿರಲಿದೆ ಎಂದು ಅಭಿಪ್ರಾಯಪಟ್ಟಿರುವ ಹೈಕೋರ್ಟ್, ಪತ್ನಿ ಮಕ್ಕಳಿಗೆ ನಿರ್ವಹಣಾ ವೆಚ್ಚವನ್ನಾಗಿ 15 ಸಾವಿರ ರೂ.ಗಳ ಪಾವತಿ ಮಾಡುವಂತೆ ಕೌಟುಂಬಿಕ ನ್ಯಾಯಾಲಯದ ಆದೇಶದಲ್ಲಿ ಮಧ್ಯಪ್ರವೇಶಿಸಲು ನಿರಾಕರಿಸಿದೆ.
ಕೌಟುಂಬಿಕ ನ್ಯಾಯಾಲಯದ ಆದೇಶವನ್ನು ಪ್ರಶ್ನಿಸಿ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಹೊಸಕೋಟೆಯ ನಿವಾಸಿ ಶಿವಕುಮಾರ್ (ಹೆಸರು ಬದಲಿಸಲಾಗಿದೆ) ಎಂಬುವರು ಸಲ್ಲಿಸಿದ್ದ ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಕೃಷ್ಣ ಎಸ್. ದೀಕ್ಷಿತ್ ಅವರಿದ್ದ ನ್ಯಾಯಪೀಠ ಈ ಆದೇಶ ನೀಡಿದೆ. ಅಲ್ಲದೇ, ಪತ್ನಿ ಮಕ್ಕಳಿಗೆ ಜೀವನಾಂಶ ನೀಡುವುದು ಬ್ಯಾಂಕ್ ಮತ್ತು ಸಾಲಗಾರನ ನಡುವಿನ ಒಪ್ಪಂದವಲ್ಲ. ಮಹಿಳೆ ಮತ್ತು ಇಬ್ಬರು ಸುಂದರ ಮಕ್ಕಳ ಜೀವನದ ಪ್ರಶ್ನೆಯಾಗಿದೆ ಎಂದು ಪೀಠ ತಿಳಿಸಿದ್ದು, ಮಾಸಿಕ 15 ಸಾವಿರ ರೂ.ಗಳ ಜೀವನಾಂಶ ಪಾವತಿಸುವಂತೆ ನಿರ್ದೇಶನ ನೀಡಿ ಆದೇಶಿಸಿದೆ.
ಅಲ್ಲದೇ, ಪ್ರಕರಣದಲ್ಲಿ ಪ್ರತಿವಾದಿಯಾಗಿರುವ ಪತ್ನಿ ತನ್ನ ತವರು ಮನೆಗೆ ತೆರಳಿದ್ದು, ಇಬ್ಬರು ಮಕ್ಕಳನ್ನು ಸಾಕುತ್ತಿದ್ದಾರೆ. ಪ್ರಸ್ತುತ ದಿನಗಳಲ್ಲಿ ಮೂವರು ಜೀವನ ನಡೆಸುವುದಕ್ಕೆ 15 ಸಾವಿರ ರೂ.ಗಳು ಅತ್ಯಲ್ಪವಾಗಿವೆ ಎಂದು ಪೀಠ ತಿಳಿಸಿದೆ. ಅಷ್ಟೇ ಅಲ್ಲದೆ, ಪ್ರಕರಣದಲ್ಲಿ ಪತ್ನಿ ಯಾವುದೇ ಲಾಭದಾಯಕ ಹುದ್ದೆಯಲ್ಲಿ ಇಲ್ಲ. ಈ ಸಂಬಂಧ ಅರ್ಜಿದಾರರು ಯಾವುದೇ ದಾಖಲೆಗಳನ್ನೂ ಸಲ್ಲಿಸಿಲ್ಲ. ಹೀಗಾಗಿ ಪತ್ನಿ ಮತ್ತು ಮಕ್ಕಳನ್ನು ಸಾಕುವುದು ಪತಿಯ ಜವಾಬ್ದಾರಿಯಾಗಿದೆ ಎಂದು ಪೀಠ ಹೇಳಿದೆ.