ಬೆಂಗಳೂರು:ತ್ರಿವಳಿ ತಲಾಖ್ ಪದ್ಧತಿಯನ್ನು ಕೇಂದ್ರ ಸರ್ಕಾರ ನಿಷೇಧಿಸಿದರೂ ಸಹ ತೆರೆಮರೆಯಲ್ಲಿ ಇನ್ನೂ ಜೀವಂತವಾಗಿದ್ದು, ವರದಕ್ಷಿಣೆ ತಂದಿಲ್ಲವೆಂಬ ಕಾರಣಕ್ಕೆ ಪತಿರಾಯನೋರ್ವ ಹೆಂಡತಿಗೆ ಕಿರುಕುಳ ಕೊಟ್ಟು, ತಲಾಖ್ ನೀಡಿರುವ ಘಟನೆ ನಗರದಲ್ಲಿ ನಡೆದಿದೆ.
ಈ ಬಗ್ಗೆ ಬಸವನಗುಡಿ ಮಹಿಳಾ ಠಾಣೆಯಲ್ಲಿ ದೂರು ನೀಡಿರುವ ಪತ್ನಿ, ತನ್ನ ಅಳಲನ್ನು ಪೊಲೀಸರ ಮುಂದೆ ತೋಡಿಕೊಂಡಿದ್ದಾಳೆ. ಚಾಮರಾಜಪೇಟೆಯ ದುಬಾಯಿ ಕಾಲೋನಿ ವಾಸಿ ಸಯ್ಯದ್ ಅಜ್ಮಲ್ ಎಂಬಾತ 2004ರಲ್ಲಿ ಮುಸ್ಲಿಂ ಸಂಪ್ರದಾಯದಂತೆ ನನ್ನನ್ನು ಮದುವೆ ಮಾಡಿಕೊಂಡಿದ್ದ. ಆರಂಭದ ವರ್ಷಗಳಲ್ಲಿ ಅನ್ಯೋನ್ಯವಾಗಿದ್ದ ಪತಿ ಮೂರು ಮಕ್ಕಳ ತಂದೆಯೂ ಆಗಿದ್ದ. ಇದಾದ ಬಳಿಕ ಕಾಲಕ್ರಮೇಣ ನನಗೆ ಕ್ಷುಲ್ಲಕ ಕಾರಣಗಳಿಗೆ ಕಿರುಕುಳ ನೀಡಲು ಆರಂಭಿಸಿದ್ದ, ನಂತರ ವರದಕ್ಷಿಣೆ ಹಣ ತರುವಂತೆ ಪ್ರತಿನಿತ್ಯ ಪೀಡಿಸುತ್ತಿದ್ದ. ಇದರಿಂದ ಬೇಸತ್ತ ನಾನು, ಕಾಟ ತಾಳಲಾರದೆ ನನ್ನ ಬಳಿ ಇದ್ದ ಒಡವೆಗಳನ್ನೆಲ್ಲಾ ಮಾರಿ ಹಣ ತಂದು ಕೊಟ್ಟಿದ್ದೆ ಎಂದು ತಿಳಿಸಿದ್ದಾಳೆ.