ಬೆಂಗಳೂರು: ಮದ್ಯಪಾನದ ದುಶ್ಚಟ ಅಂಟಿಸಿಕೊಂಡಿದ್ದ ಪತಿಯನ್ನು ಅಪಹರಿಸಿ ಮೂರು ತಿಂಗಳ ಕಾಲ ಪುನರ್ವಸತಿ ಕೇಂದ್ರದಲ್ಲಿ ಅಕ್ರಮವಾಗಿ ಗೃಹಬಂಧನದಲ್ಲಿ ಇರಿಸಿರುವ ಆರೋಪ ಪತ್ನಿ ವಿರುದ್ಧ ಕೇಳಿಬಂದಿದ್ದು, ಈ ಸಂಬಂಧ ಪತ್ನಿ ವಿರುದ್ಧ ಕೊತ್ತನೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಕಾಕ್ಸ್ ಟೌನ್ ನಿವಾಸಿ ದೀಪಕ್ ಜೋಸೆಫ್ ಕ್ಲೇವಿಯರ್ ನೀಡಿದ ದೂರಿನ ಮೇರೆಗೆ ಪತ್ನಿ ದೀಪಾಲಕ್ಷ್ಮಿ, ಯುಟೈಲ್ ಫೌಂಡೇಷನ್ ಸದ್ಯಸರಾದ ರವೀಂದ್ರ ಹಾಗೂ ಅಂತೋಣಿ ಸೇರಿದಂತೆ ನಾಲ್ವರ ವಿರುದ್ಧ ಎಫ್ಐಆರ್ ಪ್ರಕರಣ ದಾಖಲಿಸಿಕೊಂಡು ಪೊಲೀಸರು ತನಿಖೆ ಕೈಗೊಂಡಿದ್ದಾರೆ. ದೀಪಕ್ ಹಾಗೂ ದೀಪಾಲಕ್ಷ್ಮಿ ಕಾಕ್ಸ್ ಟೌನ್ನಲ್ಲಿ ವಾಸವಾಗಿದ್ದು, 2021ರಲ್ಲಿ ವಿವಾಹವಾಗಿದ್ದರು.
ದಂಪತಿಗೆ ನಾಲ್ಕು ತಿಂಗಳ ಹೆಣ್ಣು ಮಗುವಿದೆ. ಕ್ಷುಲ್ಲಕ ಕಾರಣಕ್ಕಾಗಿ ಇಬ್ಬರ ನಡುವೆ ಜಗಳ ನಡೆಯುತಿತ್ತು. ಪತಿ ಮದ್ಯ ಸೇವಿಸಿ ಮನೆಗೆ ಬಂದು ಗಲಾಟೆ ಮಾಡುತ್ತಿದ್ದ. ಇದರಿಂದ ರೋಸಿ ಹೋಗಿದ್ದ ಪತ್ನಿ ಪುನರ್ವಸತಿ ಕೇಂದ್ರಕ್ಕೆ ಕರೆ ಮಾಡಿ ಸದಸ್ಯರನ್ನು ಕರೆಯಿಸಿಕೊಂಡಿದ್ದರು. ಬಳಿಕ ತಮ್ಮ ಮೇಲೆ ಸದಸ್ಯರು ಹಲ್ಲೆ ಮಾಡಿ ಕಾರಿನಲ್ಲಿ ಅಪಹರಿಸಿದ್ದಾರೆ. ಮೂರು ತಿಂಗಳ ಕಾಲ ಪುನರ್ವಸತಿ ಕೇಂದ್ರದಲ್ಲಿ ಕೂಡಿಹಾಕಿ ದೊಣ್ಣೆಯಿಂದ ಕೈ-ಕಾಲುಗಳಿಗೆ ಹೊಡೆದು ಗಾಯ ಮಾಡಿದ್ದಾರೆ.
ಮೂರು ತಿಂಗಳ ಬಳಿಕ ವಿಷಯ ತಿಳಿದುಕೊಂಡ ದೀಪಕ್ ತಾಯಿ ಪುನರ್ವಸತಿ ಕೇಂದ್ರಕ್ಕೆ ಹೋಗಿ ಕರೆದುಕೊಂಡು ಬಂದು ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಿದ್ದಾರೆ. ಸದ್ಯ ಕೊತ್ತನೂರು ಪೊಲೀಸ್ ಠಾಣೆಯಲ್ಲಿ ಪತ್ನಿ ಸೇರಿದಂತೆ ನಾಲ್ವರ ವಿರುದ್ಧ ಪ್ರಕರಣ ದಾಖಲಾಗಿದೆ.
ಇದನ್ನೂ ಓದಿ:15 ದಿನದ ಹಿಂದೆ ಬೇರೆ ಯುವಕನ ಜೊತೆ ಮದುವೆ: ತವರಿಗೆ ಬಂದ ಪ್ರೇಯಸಿಗೆ 20 ಬಾರಿ ಚಾಕು ಚುಚ್ಚಿ, ವಿಷ ಕುಡಿದ ಪ್ರೇಮಿ