ಬೆಂಗಳೂರು:10 ಲಕ್ಷ ರೂ ಹಣ ಹಾಗೂ ವೇತನ ನೀಡದಿದ್ದರೆ ಖಾಸಗಿ ಕ್ಷಣಗಳನ್ನು ಸಾಮಾಜಿಕ ಜಾಲತಾಣದಲ್ಲಿ ಪ್ರಕಟಿಸುವುದಾಗಿ ಪತ್ನಿಗೆ ಪತಿಯೇ ಬೆದರಿಕೆ ಹಾಕಿದ ವಿಚಿತ್ರ ಪ್ರಕರಣವೊಂದು ತಡವಾಗಿ ಬೆಳಕಿಗೆ ಬಂದಿದೆ. ಬೆಂಗಳೂರಿನ 28 ವರ್ಷದ ಮಹಿಳೆಯೊಬ್ಬರು ನೀಡಿರುವ ದೂರಿನ ಅನ್ವಯ ಆಕೆಯ ಪತಿ ಹಾಗೂ ಆತನ ಪೋಷಕರ ವಿರುದ್ಧ ಬಸವನಗುಡಿ ಮಹಿಳಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ದೂರಿನಲ್ಲಿ ಇರುವುದೇನು?:ದೂರು ಕೊಟ್ಟ ಮಹಿಳೆ ಜೊತೆಗೆ ಆಕೆಯ ಪತಿ 2022 ನವೆಂಬರ್ನಲ್ಲಿ ವಿವಾಹವಾಗಿದ್ದ ನಂತರ ನವ ವಿವಾಹಿತರು ಹನಿಮೂನ್‌ಗೆ ಥಾಯ್ಲೆಂಡ್ಗೆ ಹೋಗಿದ್ದಾಗ, ಮೊಬೈಲ್‌ನಲ್ಲಿ ಅಶ್ಲೀಲ ವಿಡಿಯೋ ತೋರಿಸುತ್ತಿದ್ದ ಆತ, ಅದೇ ರೀತಿಯಲ್ಲಿ ತನ್ನೊಂದಿಗೆ ವರ್ತಿಸುವಂತೆ ದೂರುದಾರಳಿಗೆ ಕಿರುಕುಳ ಕೊಟ್ಟಿದ್ದ ನಂತೆ. ಅಲ್ಲದೇ ಬಲವಂತವಾಗಿ ಮದ್ಯಪಾನ ಮಾಡಿಸಿದ್ದ. ಅಲ್ಲದೇ ಚಿಕ್ಕಮಗಳೂರಿನ ತನ್ನ ಮನೆಯಲ್ಲಿ ಪೋಷಕರಿಲ್ಲದ ಸಮಯದಲ್ಲಿ ಪತ್ನಿಯೊಂದಿಗೆ ದೈಹಿಕ ಸಂಪರ್ಕ ಹೊಂದಲು ಇಚ್ಚಿಸಿದ್ದ. ಆ ಸಂದರ್ಭದಲ್ಲಿ ಆಕೆಗೆ ತಿಳಿಯದಂತೆ ಖಾಸಗಿ ದೃಶ್ಯಗಳನ್ನು ಸೆರೆ ಹಿಡಿದಿದ್ದ.
ವಿವಾಹಕ್ಕೂ ಮೊದಲು ತಾನು ಸ್ವಂತ ಕನಸ್ಟ್ರಕ್ಷನ್ ಕಂಪನಿ ಹೊಂದಿದ್ದೇನೆ ಎಂದಿದ್ದ ಆರೋಪಿಯ ಮಾತು ನಂಬಿದ್ದ ದೂರುದಾರೆ ಮಹಿಳೆ ಮದುವೆಯಾಗಿದ್ದಳು. ಕೆಲ ದಿನಗಳ ನಂತರ ಆರೋಪಿ ನಿರುದ್ಯೋಗಿ ಎಂಬುದು ಪತ್ನಿಗೆ ತಿಳಿದು ಬಂದಿದೆ. ಆದರೆ, ಅದರ ಬಗ್ಗೆ ಪ್ರಶ್ನಿಸಿದಾಗ ಆತ ಸೂಕ್ತ ರೀತಿಯಲ್ಲಿ ಸ್ಪಂದಿಸಿರಲಿಲ್ಲ. ಈ ನಡುವೆ ಪತ್ನಿಯ ವೇತನವನ್ನು ತನ್ನ ಖಾತೆಗೆ ವರ್ಗಾವಣೆ ಮಾಡುವಂತೆ ಹಾಗೂ ತವರು ಮನೆಯಿಂದ 10 ಲಕ್ಷ ರೂ. ತರುವಂತೆ ಪೀಡಿಸಿದ್ದ. ಇಲ್ಲದಿದ್ದರೆ, ಖಾಸಗಿ ದೃಶ್ಯವನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಾಕುವುದಾಗಿ ಬೆದರಿಸಿದ್ದ. ಜೊತೆಗೆ ಖಾಸಗಿ ದೃಶ್ಯ ಸೆರೆ ಹಿಡಿದಿರುವುದನ್ನು ಯಾರ ಬಳಿಯೂ ಹೇಳದಂತೆ ಬೆದರಿಸಿದ್ದ ಎಂದು ನೊಂದ ಮಹಿಳೆ ತನ್ನ ದೂರಿನಲ್ಲಿ ಆರೋಪ ಮಾಡಿದ್ದಾಳೆ.