ಬೆಂಗಳೂರು: ದುಡಿಯಲು ಸಾಮರ್ಥ್ಯ ಹೊಂದಿರುವ ಪತಿ ಜೀವನಾಂಶ ನೀಡುವಂತೆ ಪತ್ನಿಗೆ ಆದೇಶಿಸಿದಲ್ಲಿ ಸೋಮಾರಿತನವನ್ನು ಬೆಂಬಲಿಸಿದಂತೆ ಎಂದು ಹೈಕೋರ್ಟ್ ಕೌಟುಂಬಿಕ ಪ್ರಕರಣವೊಂದರಲ್ಲಿ ಅಭಿಪ್ರಾಯ ಪಟ್ಟಿದೆ. ಸಾಂಕ್ರಾಮಿಕ ರೋಗ ಕೊರೋನಾದಿಂದ ಉದ್ಯೋಗ ಕಳೆದುಕೊಂಡು ಆದಾಯವಿಲ್ಲದ ಜೀವನ ನಡೆಸುವುದಕ್ಕೆ ಸಾಧ್ಯವಾಗುವುದಿಲ್ಲ. ಹೀಗಾಗಿ ಪತ್ನಿಯಿಂದ ಜೀವನಾಂಶ ಕೊಡಿಸುವಂತೆ ಕೋರಿ ಬೆಂಗಳೂರಿನ ಕನಕಪುರ ರಸ್ತೆಯ ನಿವಾಸಿಯೊಬ್ಬರು ಅರ್ಜಿ ಸಲ್ಲಿಸಿದ್ದರು. ಈ ಅರ್ಜಿಯನ್ನು ತಿರಸ್ಕರಿಸಿದ ನ್ಯಾಯಮೂರ್ತಿ ಎಂ. ನಾಗಪ್ರಸನ್ನ ಅವರ ನ್ಯಾಯಪೀಠ ಈ ಅಭಿಪ್ರಾಯ ವ್ಯಕ್ತಪಡಿಸಿದೆ.
ಪ್ರಕರಣದಲ್ಲಿ ಪತ್ನಿಯಿಂದ ಜೀವನಾಂಶ ಪಡೆದು ತುಂಬಾ ಆರಾಮಾಗಿ ಜೀವನ ನಡೆಸಲು ಪತಿ ನಿರ್ಧರಿಸಿದ್ದಾನೆ ಎಂಬುದಾಗಿ ತಿಳಿದುಕೊಳ್ಳಬಹುದಾಗಿದೆ. ಹಾಗಾಗಿ, ಪತ್ನಿಯಿಂದ ಜೀವನಾಂಶ ಕೋರಿದ ಪತಿಯ ಅರ್ಜಿಯನ್ನು ಪುರಸ್ಕರಿಸಲಾಗದು ಎಂದು ತಿಳಿಸಿದ ಹೈಕೋರ್ಟ್, ತನ್ನ ಮತ್ತು ಪತ್ನಿ ಮಗುವಿನ ಜೀವನ ನಿರ್ವಹಣೆ ಮಾಡುವುದು ದುಡಿಯಲು ಸಾಮಥ್ಯವಿರುವ ವ್ಯಕ್ತಿಯ ಆದ್ಯ ಕರ್ತವ್ಯ ಎಂದು ಸಲಹೆ ನೀಡಿದೆ.
ಅಲ್ಲದೆ, ಉದ್ಯೋಗ ಹಾಗೂ ಆದಾಯವಿಲ್ಲದ ಕಾರಣ ಪತ್ನಿಗೆ ಜೀವನಾಂಶ ನೀಡಲಾಗದ ಸ್ಥಿತಿಯಲ್ಲಿದ್ದೇನೆ. ಆದ್ದರಿಂದ ಪತ್ನಿಯೇ ಜೀವನಾಂಶ ನೀಡಬೇಕು ಎಂಬ ಪತಿಯ ವಾದ ಮೂಲತಃ ದೋಷಪೂರಿತವಾಗಿದ್ದು, ಒಪ್ಪಲು ಸಾಧ್ಯವಿಲ್ಲ. ಅರ್ಜಿದಾರ ಪತಿ ದುಡಿಯಲು ಸಾಮರ್ಥ್ಯವಿರುವ ವ್ಯಕ್ತಿ. ಯಾವುದೇ ಅಂಗವೈಕಲ್ಯ ಅಥವಾ ದೌರ್ಬಲ್ಯದಿಂದ ನರಳುತ್ತಿಲ್ಲ. ಹಿಂದೂ ವಿವಾಹ ಕಾಯ್ದೆಯ ಸೆಕ್ಷನ್ 24ರ ಅಡಿಯಲ್ಲಿ ಜೀವನಾಂಶ ಪಡೆಯಲು ಯಾವುದೇ ಲಿಂಗ ಭೇದವಿಲ್ಲ ಎಂಬ ಕಾರಣಕ್ಕೆ ದುಡಿಯಲು ಸಾಮರ್ಥ್ಯವಿರುವ ಪತಿ ಪತ್ನಿಯಿಂದ ಜೀವನಾಂಶ ವಿತರಣೆಗೆ ಆದೇಶಿಸಿದರೆ, ಸೋಮಾರಿತನಕ್ಕೆ ಪ್ರೋತ್ಸಾಹಿಸಿದಂತಾಗುತ್ತದೆ. ಕೋವಿಡ್-19ಯಿಂದ ಉದ್ಯೋಗ ಕಳೆದುಕೊಂಡ ಎಂಬ ಕಾರಣಕ್ಕೆ ಪತಿ ಆದಾಯ ಗಳಿಸಲು ಸಾಮರ್ಥ್ಯವಿಲ್ಲ ಎಂದು ಹೇಳಲಾಗದು ಎಂದು ಅಭಿಪ್ರಾಯಪಟ್ಟಿದೆ.
ಪ್ರಕರಣದ ಹಿನ್ನೆಲೆ ಏನು?:2017ರ ಫೆ. 6 ರಂದು ಮದುವೆಯಾಗಿದ್ದ ದಂಪತಿಯ ನಡುವಿನ ಸಣ್ಣ ಗೊಂದಲಗಳಿಂದಾಗಿ ಪತ್ನಿ ತವರು ಮನೆಯಲ್ಲಿದ್ದರು. ಇದಾದ ಬಳಿಕ ಪತಿಯು ವಿಚ್ಛೇದನ ಕೋರಿ ಕೌಟುಂಬಿಕ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದ್ದರು. ಅತ್ತ ವೈವಾಹಿಕ ಸಂಬಂಧ ಪುನರ್ ಸ್ಥಾಪಿಸುವಂತೆ ಕೋರಿ ಪತ್ನಿ ಅರ್ಜಿ ಸಲ್ಲಿಸಿದ್ದರು. ಹೀಗಿರುವಾಗ ಪತಿಯಿಂದ ಮಧ್ಯಂತರ ಜೀವನಾಂಶವಾಗಿ ಮಾಸಿಕ 25 ಸಾವಿರ ರು. ಮತ್ತು ವ್ಯಾಜ್ಯ ವೆಚ್ಚವೆಂದು ಒಂದು ಲಕ್ಷ ರು. ಕೊಡಿಸುವಂತೆ ಕೋರಿ ಪತ್ನಿ ಮಧ್ಯಂತರ ಅರ್ಜಿ ಸಲ್ಲಿಸಿ ಮನವಿ ಮಾಡಿದ್ದರು.