ಬೆಂಗಳೂರು:ಕೌಟುಂಬಿಕ ಕಲಹ ಹಿನ್ನೆಲೆ ಮದ್ಯದ ಅಮಲಿನಲ್ಲಿ ಪತ್ನಿಯ ತಲೆಗೆ ಸುತ್ತಿಗೆಯಿಂದ ಹೊಡೆದು, ಕೊಲೆ ಮಾಡಿದ ಆರೋಪದಡಿ ಪತಿಯನ್ನ ಕಾಮಾಕ್ಷಿಪಾಳ್ಯ ಪೊಲೀಸರು ಬಂಧಿಸಿದ್ದಾರೆ. ಪತ್ನಿ ಚಿಕ್ಕತಾಯಮ್ಮನನ್ನ ಹತ್ಯೆ ಮಾಡಿದ್ದ ಆರೋಪದಡಿ ಪೊಲೀಸರು ಪತಿ ನಾಗರತ್ನಂ ನನ್ನ ಬಂಧಿಸಿ ವಿಚಾರಣೆಗೊಳಪಡಿಸಿದ್ದಾರೆ.
ತಮಿಳುನಾಡು ಮೂಲದ ನಾಗರತ್ನಂ ಮತ್ತು ಚಿಕ್ಕತಾಯಮ್ಮ ದಂಪತಿ ಕಾಮಾಕ್ಷಿಪಾಳ್ಯ ಕರೆ ಕಲ್ಲು ಏರಿಯಾದಲ್ಲಿ ವಾಸ ಮಾಡುತ್ತಿದ್ದರು. ಇವರಿಗೆ ಮದುವೆಯಾಗಿ 29 ವರ್ಷಗಳಾಗಿವೆ. ದಂಪತಿಗೆ ಮೂವರು ಮಕ್ಕಳಿದ್ದು ಎಲ್ಲರಿಗೂ ವಿವಾಹವಾಗಿದೆ. ಆರೋಪಿ ನಾಗರತ್ನಂಗೆ ಕುಡಿತದ ಚಟ ಹೆಚ್ಚಾಗಿತ್ತು. ನಿತ್ಯ ಕುಡಿದು ಗಲಾಟೆ ಮಾಡುತ್ತಿದ್ದ. ನಾಗರತ್ನಂ ಶಾಲೆಯೊಂದರಲ್ಲಿ ಸೆಕ್ಯುರಿಟಿ ಗಾರ್ಡ್ಆಗಿ ಕೆಲಸ ಮಾಡುತ್ತಿದ್ದ.
ಪತ್ನಿಯೂ ಅದೇ ಶಾಲೆಯಲ್ಲಿ ಕೆಲಸ ಮಾಡಿ ಬಂದ ಹಣದಲ್ಲಿ ಮನೆ ನಡೆಸುತ್ತಿದ್ದರು. ನಿನ್ನೆ ರಾತ್ರಿ ಕುಡಿದು ಬಂದ ಪತಿ, ಪತ್ನಿಯೊಂದಿಗೆ ಜಗಳಕ್ಕೆ ನಿಂತಿದ್ದ. ಜಗಳ ವಿಕೋಪಕ್ಕೆ ತಿರುಗಿ ಮನೆಯಲ್ಲಿದ್ದ ಸುತ್ತಿಗೆಯಿಂದ ಆಕೆಯ ತಲೆ ಮೇಲೆ ಹಲ್ಲೆ ಮಾಡಿದ್ದಾನೆ. ತೀವ್ರ ರಕ್ತಸ್ರಾವವಾದ ಹಿನ್ನೆಲೆ ಮಹಿಳೆ ಸ್ಥಳದಲ್ಲೇ ಸಾವನ್ನಪ್ಪಿದ್ದಾಳೆ. ನಂತರ ಪತಿ ಪರಾರಿಯಾಗಿದ್ದ. ಮಾಹಿತಿ ತಿಳಿದು ಘಟನಾ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ ಪೊಲೀಸರು, ಪ್ರಕರಣ ದಾಖಲಿಸಿಕೊಂಡು ಆರೋಪಿಯನ್ನು ಕೆಲವೇ ಗಂಟೆಗಳಲ್ಲಿ ಬಂಧಿಸಿರುವುದಾಗಿ ಪಶ್ಚಿಮ ವಿಭಾಗದ ಡಿಸಿಪಿ ಲಕ್ಷ್ಮಣ್ ನಿಂಬರಗಿ ತಿಳಿಸಿದ್ದಾರೆ.
ರೌಡಿಶೀಟರ್ ಹತ್ಯೆ ಮಾಡಿದ ಐವರು ಆರೋಪಿಗಳ ಬಂಧನ:ಮತ್ತೊಂದೆಡೆ, ಹಳೆ ದ್ವೇಷದ ಹಿನ್ನೆಲೆಯಲ್ಲಿ ವ್ಯವಸ್ಥಿತವಾಗಿ ಸಂಚು ರೂಪಿಸಿ, ಕಳೆದ ಮೂರು ದಿನಗಳ ಹಿಂದೆ ಮಡಿವಾಳದ ರೌಡಿಶೀಟರ್ ಕಪಿಲ್ ಎಂಬವನನ್ನು ಮಾರಕಾಸ್ತ್ರಗಳಿಂದ ಬರ್ಬರವಾಗಿ ಕೊಲೆ ಮಾಡಿ ಪರಾರಿಯಾಗಿದ್ದರು. ಹೀಗೆ ಪರಾರಿಯಾಗಿದ್ದ ಐದು ಮಂದಿ ಆರೋಪಿಗಳನ್ನ ಬೆಂಗಳೂರಿನ ದೇವರಜೀವನಹಳ್ಳಿ ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದರು. ಕಳೆದ ಮಂಗಳವಾರ ರಾತ್ರಿ ಡಿ.ಜೆ.ಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ರೌಡಿಶೀಟರ್ ಕಪಿಲ್ನನ್ನು ಎರಡು ಸ್ಕೂಟರ್ನಲ್ಲಿ ಹಿಂಬಲಿಸಿಕೊಂಡು ಬಂದಿದ್ದ ಆರೋಪಿಗಳು ಹತ್ಯೆ ಮಾಡಿ ಎಸ್ಕೇಪ್ ಆಗಿದ್ದರು.
ನವೀನ್ ಕುಮಾರ್, ರಾಹುಲ್, ಪುನೀತ್ ಕುಮಾರ್, ಪವನ್ ಕುಮಾರ್ ಹಾಗೂ ಶಂಕರ್ ಬಂಧಿತ ಆರೋಪಿಗಳು. ಆರೋಪಿಗಳೆಲ್ಲರೂ ಆರ್.ಟಿ.ನಗರ ಹಾಗೂ ಹೆಬ್ಬಾಳ ನಿವಾಸಿಗಳಾಗಿದ್ದಾರೆ. ಪ್ರಕರಣದ ಪ್ರಮುಖ ಸೂತ್ರದಾರಿ ಸೇರಿದಂತೆ ಇತರ ನಾಲ್ವರು ಆರೋಪಿಗಳು ತಲೆಮರೆಸಿಕೊಂಡಿದ್ದು, ಅವರ ಪತ್ತೆಗೆ ಶೋಧ ಕಾರ್ಯ ನಡೆಸಲಾಗುತ್ತಿದೆ ಎಂದು ಪೂರ್ವ ವಿಭಾಗದ ಡಿಸಿಪಿ ಭೀಮಾಶಂಕರ್ ಗುಳೇದ್ ತಿಳಿಸಿದ್ದರು.
ರೌಡಿಶೀಟರ್ ಆಗಿದ್ದ ಕಪಿಲ್ ಮೇಲೆ ಕೊಲೆಯತ್ನ ಸೇರಿದಂತೆ ಐದು ಪ್ರಕರಣ ದಾಖಲಾಗಿದ್ದವು. ಈತನನ್ನು 2014ರಲ್ಲಿ ನಡೆದ ಕೊಲೆ ಕೇಸ್‌ನಲ್ಲಿ ಬಂಧಿಸಿದ್ದ ಮಡಿವಾಳ ಪೊಲೀಸರು ಕೋಕಾ ಕಾಯ್ದೆಯಡಿ ಪ್ರಕರಣ ದಾಖಲಿಸಿಕೊಂಡಿದ್ದರು. ಕೆಲ ವರ್ಷಗಳಿಂದ ಆರ್.ಟಿ.ನಗರದಲ್ಲಿ ವಾಸವಾಗಿದ್ದ ಕಪಿಲ್, ಹೆಬ್ಬಾಳ, ಆರ್.ಟಿ.ನಗರ, ಗೋವಿಂದಪುರ ಸೇರಿದಂತೆ ಸುತ್ತಮುತ್ತಲಿನ ಪ್ರದೇಶಗಳ ಮೇಲೆ ಹಿಡಿತ ಸಾಧಿಸಲು ಪ್ರಯತ್ನಿಸುತ್ತಿದ್ದ. ಈತನ ವಿರೋಧಿ ಬಣದವರು ಕೊಲೆ ಮಾಡಲು ಮೂರು - ನಾಲ್ಕು ದಿನಗಳಿಂದ ಕಪಿಲ್ನ ಚಲನವಲನ ಗಮನಿಸಿ ಜು.11ರ ರಾತ್ರಿ ಮಾರಕಾಸ್ತ್ರಗಳಿಂದ ಕೊಚ್ಚಿ ಹತ್ಯೆ ಮಾಡಿ ಪರಾರಿಯಾಗಿದ್ದರು ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದರು.
ಇದನ್ನೂ ಓದಿ:ನಟ ಮಾಸ್ಟರ್ ಆನಂದ್ ಪುತ್ರಿ ಹೆಸರು ಬಳಸಿ ಮೋಸದ ಆರೋಪ: ಆರೋಪಿ ಮಹಿಳೆ ಬಂಧನ