ಬೆಂಗಳೂರು: ಪತಿಯ ಕುಟುಂಬವನ್ನು ಗುರಿಯಾಗಿಸಿ ಮಾನಸಿಕ ಹಿಂಸೆ ನೀಡಿದ್ದಲ್ಲದೆ ಮನೆಯಲ್ಲಿದ್ದ 10 ಲಕ್ಷ ರೂ ನಗದು ಹಾಗೂ ಲಕ್ಷಾಂತರ ರೂಪಾಯಿ ಮೌಲ್ಯದ ಚಿನ್ನಾಭರಣ ದೋಚಿರುವುದಾಗಿ ಆರೋಪಿಸಿ ಪೊಲೀಸ್ ಠಾಣೆಯಲ್ಲಿ ಸೊಸೆ ವಿರುದ್ಧ ಅತ್ತೆ ದೂರು ನೀಡಿದ್ದಾರೆ. ಪದ್ಮನಾಭನಗರದ ನಿವಾಸಿ ಕಮಲ ಎಂಬುವರು ನೀಡಿದ ದೂರಿನ ಮೇರೆಗೆ ಗೌತಮಿ ವಿರುದ್ಧ ಪ್ರಕರಣ ದಾಖಲಿಸಿಕೊಂಡು ಬನಶಂಕರಿ ಪೊಲೀಸರು ತನಿಖೆ ಕೈಗೊಂಡಿದ್ದಾರೆ.
ಕೌಟುಂಬಿಕ ಕಲಹದಿಂದ ನಿಶ್ಚಿತಾರ್ಥ ರದ್ದು:ಕಮಲ ತನ್ನ ಮಗನಿಗೆ ಈ ಹಿಂದೆ ಯುವತಿಯೊಂದಿಗೆ ಎಂಗೇಜ್ಮೆಂಟ್ ನಿಗದಿ ಮಾಡಿದ್ದರು. ಕೌಟುಂಬಿಕ ಕಲಹದಿಂದ ಈ ಎಂಗೇಜ್ಮೆಂಟ್ ರದ್ದಾಗಿತ್ತು. ಇದಾದ ಬಳಿಕ ಕಳೆದ ಜುಲೈ 10 ರಂದು ಬನಶಂಕರಿಯಲ್ಲಿ ಬೇರೆ ಯುವತಿ ಜತೆ ಮದುವೆ ಮಾಡಿಸಿದ್ದರು.
ಗಂಡನ ಕುಟುಂಬವೇ ಪತ್ನಿಯ ಟಾರ್ಗೆಟ್: ಸೊಸೆಗೆ ಲಕ್ಷಾಂತರ ರೂಪಾಯಿ ಮೌಲ್ಯದ ಚಿನ್ನಾಭರಣವನ್ನು ವರನ ಕಡೆಯವರು ನೀಡಿದ್ದರು. ಆದರೆ ಮದುವೆಯಾದ ಮೊದಲ ದಿನದಿಂದಲೂ ಗೌತಮಿ ಅತ್ತೆ ಮನೆಯಲ್ಲಿ ಕಿರಿಕ್ ಮಾಡಿಕೊಂಡಿದ್ದಾಳೆ. ಮೊದಲೇ ನಿರ್ಧರಿಸಿದಂತೆ ಪತ್ನಿಯನ್ನು ಅಮೆರಿಕಕ್ಕೆ ಕರೆದೊಯ್ಯಲು ಸಿದ್ಧತೆ ನಡೆಸುವಾಗಲೇ ತನ್ನ ವರಸೆ ಶುರುಮಾಡಿಕೊಂಡಿದ್ದಳು ಎಂಬ ಆರೋಪಿಸಲಾಗಿದೆ.
ಇದನ್ನೂ ಓದಿ:ತಾಯಿ ಮನೆಯಲ್ಲಿದ್ದ ಹೆಂಡತಿ ಕರೆಸಿ ಹತ್ಯೆ; ಗಂಡನೂ ಆತ್ಮಹತ್ಯೆ
ನಗದು, ಚಿನ್ನದೊಂದಿಗೆ ಪರಾರಿ: ಮೆಡಿಕಲ್ ವೀಸಾದಡಿ ವಿದೇಶಕ್ಕೆ ಬರುತ್ತೇನೆ ಎಂದಿದ್ದಕ್ಕೆ ಪತಿಯ ಕುಟುಂಬಸ್ಥರು 50 ಸಾವಿರ ರೂಪಾಯಿ ಖರ್ಚು ಮಾಡಿ ವೀಸಾ ಮಾಡಿಸಿದ್ದರು. ಅಮೆರಿಕಕ್ಕೆ ತೆರಳಲು 1.25 ಲಕ್ಷ ರೂಪಾಯಿ ವಿಮಾನ ಟಿಕೆಟ್ ಕೂಡ ಬುಕ್ ಮಾಡಿದ್ದರು. ಮೈ ಹುಷಾರಿಲ್ಲ ಎಂದು ಸಬೂಬು ನೀಡಿ ಮನೆಯಲ್ಲಿದ್ದ 10 ಲಕ್ಷ ಹಣ, 18 ಲಕ್ಷ ಮೌಲ್ಯದ ಚಿನ್ನಾಭರಣ ಸಮೇತ ಮಹಿಳೆ ತವರು ಮನೆ ಸೇರಿದ್ದಾಳೆ ಎಂದು ಗಂಡನ ಕುಟುಂಬಸ್ಥರು ಆರೋಪಿಸಿದ್ದಾರೆ.
ಗಂಡನ ಕುಟುಂಬಸ್ಥರಿಗೆ ಬೆದರಿಕೆ: ಈ ಬಗ್ಗೆ ಗಂಡನ ಕುಟುಂಬಸ್ಥರು ಮಹಿಳೆಯ ಕುಟುಂಬಸ್ಥರೊಂದಿಗೆ ಮಾತುಕತೆ ನಡೆಸಿದ್ದಾರೆ. ಈ ವೇಳೆ ಗಂಡನ ಕುಟುಂಬಸ್ಥರಿಗೆ ಮಹಿಳೆ ಮತ್ತು ಆಕೆಯ ಪೋಷಕರು ಧಮ್ಕಿ ಹಾಕಿದ್ದಾರೆ. ನೀವು ನನಗೆ ಕಿರುಕುಳ ನೀಡುತ್ತಿರುವುದಾಗಿ ಪೊಲೀಸ್ ಠಾಣೆಯಲ್ಲಿ ದೂರು ನೀಡುತ್ತೇನೆ ಎಂದು ಗಂಡನಿಗೆ ಹೆಂಡ್ತಿ ಬೆದರಿಕೆ ಹಾಕಿದ್ದಾಳೆ. ಮಗಳಿಗೆ ಬುದ್ದಿ ಹೇಳುವಂತೆ ಆಕೆಯ ಪೋಷಕರಿಗೆ ಹೇಳಿದ್ದಕ್ಕೆ ಪ್ರತಿರೋಧ ವ್ಯಕ್ತಪಡಿಸಿದ ಕುಟುಂಬಸ್ಥರು ವರದಕ್ಷಿಣೆ ಕಿರುಕುಳ ಪ್ರಕರಣ ದಾಖಲಿಸುವುದಾಗಿ ಬೆದರಿಸಿದ್ದಾರೆ.
ಸೊಸೆಯ ವಿರುದ್ಧ ಅತ್ತೆಯಿಂದ ದೂರು:ಇದರಿಂದ ಬೇಸರಗೊಂಡ ಗಂಡನ ಕುಟುಂಬಸ್ಥರು ಪೊಲೀಸ್ ಠಾಣೆ ಮೆಟ್ಟಿಲೇರಿದ್ದಾರೆ. ಇದಕ್ಕೆ ಪ್ರತಿಯಾಗಿ ಗೌತಮಿ ತನ್ನ ಹುಟ್ಟೂರಾದ ತಿರುಪತಿಯಲ್ಲಿ ಗಂಡನ ಮನೆಯವರ ವಿರುದ್ಧ ವರದಕ್ಷಿಣೆ ಕಿರುಕುಳ ಆರೋಪದಡಿ ಸ್ಥಳೀಯ ಪೊಲೀಸ್ ಠಾಣೆಯಲ್ಲಿ ದೂರು ನೀಡಿರುವುದಾಗಿ ತಿಳಿದುಬಂದಿದೆ.
ಇದನ್ನೂ ಓದಿ:ತರಕಾರಿ ತನ್ನಿ ಎಂದು ಹೇಳಿದ್ದೇ ತಪ್ಪಾಯ್ತು: ನಡುರಸ್ತೆಯಲ್ಲೇ ಪತ್ನಿ ಮೇಲೆ ಅಮಾನುಷ ಹಲ್ಲೆ