ಎರಡು ದಿನದ ಮಳೆಗೆ ನಗರದಲ್ಲಿ ಉರುಳಿ ಬಿದ್ದಿವೆ ನೂರಾರು ಮರಗಳು ಬೆಂಗಳೂರು : ರಾಜಧಾನಿ ಬೆಂಗಳೂರಿನಲ್ಲಿ ನಿನ್ನೆ ಸುರಿದ ಆಲಿಕಲ್ಲು ಸಹಿತ ಮಳೆ ಮತ್ತು ಇಂದು ಸುರಿದ ಮಳೆಗೆ 400ಕ್ಕೂ ಅಧಿಕ ಮರಗಳು ಧರೆಗೆ ಉರುಳಿದ್ದು, 1600ಕ್ಕೂ ಅಧಿಕ ರೆಂಬೆಗಳು ಮುರಿದು ರಸ್ತೆಗೆ ಬಿದ್ದಿವೆ. ಕಬ್ಬನ್ ಪಾರ್ಕ್ ಒಂದರಲ್ಲಿಯೇ 50ಕ್ಕೂ ಹೆಚ್ಚು ಮರಗಳು ಬಿದ್ದಿವೆ. ಎರಡು ದಿನದ ಮಳೆಗೆ ತತ್ತರಿಸುತ್ತಿರುವ ತ್ಯಾಜ್ಯ ವಿಲೇವಾರಿಗೆ ಪೌರಕಾರ್ಮಿಕರು ಪರದಾಟ ನಡೆಸುತ್ತಿದ್ದು, ಹಲವು ಪ್ರಮುಖ ರಸ್ತೆಗಳು ತಿಪ್ಪೆ ಗುಂಡಿಯಾಗಿ ಮಾರ್ಪಟ್ಟಿವೆ.
ಎರಡು ದಿನದ ಭಾರಿ ಮಳೆಗೆ ನಗರದಲ್ಲಿ 400ಕ್ಕೂ ಹೆಚ್ಚು ಮರಗಳು ಧರೆಗುರುಳಿವೆ. 1600ಕ್ಕೂ ಅಧಿಕ ಮರಗಳ ಕೊಂಬೆ ಮುರಿದಿವೆ. ರಸ್ತೆಗೆ ಬಿದ್ದ ಮರಗಳು ವಾಹನ ಸವಾರರು, ಸಾರ್ವಜನಿಕರು ಪರದಾಡುತ್ತಿದ್ದಾರೆ. ಈ ಸಂಬಂಧ ಬಿಬಿಎಂಪಿಗೆ 600ಕ್ಕೂ ಅಧಿಕ ದೂರುಗಳು ಬಂದಿವೆ.
ಎರಡು ದಿನದ ಮಳೆಗೆ ನಗರದ 70ಕ್ಕೂ ಅಧಿಕ ಮನೆಗಳಿಗೆ ಮಳೆ ನೀರು ನುಗ್ಗಿದೆ. ಮಹಾಲಕ್ಷ್ಮಿ ಲೇಔಟ್ ಒಂದರಲ್ಲೇ 20ಕ್ಕೂ ಅಧಿಕ ಕಡೆ ಮನೆಗಳಿಗ ನೀರು ನುಗ್ಗಿದೆ. ನಾಗರಿಕರು ದೂರು ನೀಡಿರುವ ಹಿನ್ನೆಲೆ ಈಗಾಗಲೇ ಬಿಬಿಎಂಪಿ 200 ಕ್ಕೂ ಹೆಚ್ಚು ಕಡೆ ಬಿಬಿಎಂಪಿ ಮರಗಳ ತೆರವು ಕಾರ್ಯಾಚರಣೆಗೆ ಇಳಿದಿದೆ. 50 ಕ್ಕೂ ಹೆಚ್ಚು ಅರಣ್ಯ ಸಿಬ್ಬಂದಿ ಕೆಲಸ ಮಾಡುತ್ತಿದ್ದಾರೆ.
ನಿನ್ನೆ ಕೆ ಆರ್ ಸರ್ಕಲ್ ಬಳಿ ಆಲಿಕಲ್ಲು ಮಳೆಗೆ ಗಾಳಿಯಿಂದ ಸಹಿತ ಭಾರಿ ಮಳೆಗೆ ಕೆ ಆರ್ ಸರ್ಕಲ್, ಸರ್ ಎಂ ವಿಶ್ವೇಶ್ವರಯ್ಯ ವಿಶ್ವವಿದ್ಯಾಲಯ ಬಳಿ ಬೃಹತ್ ಗಾತ್ರದ ಮರ ಧರೆಗೆ ಉರುಳಿತ್ತು. ಆನಂದ್ ರಾವ್ ಸರ್ಕಲ್ ವಿವಿಡಾಸ್ ಹೋಟೆಲ್ ಮುಂದೆಯೂ ಭಾರಿ ಗಾತ್ರದ ಮರ ಧರೆಗೆ ಉರುಳಿತ್ತು. ಐಷಾರಾಮಿ ಕಾರಿನ ಮೇಲೆ ಮರ ಉರುಳಿದ ಪರಿಣಾಮ ಸ್ಥಳದಲ್ಲಿ ಪಾರ್ಕ್ ಮಾಡಿದ್ದ ಐಷಾರಾಮಿ ಕಾರು ನಜ್ಜು ಗುಜ್ಜಾಗಿತ್ತು. ಅದೃಷ್ಟವಶಾತ್ ಯಾವುದೇ ಪ್ರಾಣಾಪಾಯ ಸಂಭವಿಸಿರಲಿಲ್ಲ.
ಕುಮಾರಕೃಪಾ ರಸ್ತೆಯಲ್ಲಿನ ಚಿತ್ರಕಲಾ ಪರಿಷತ್ ಮುಂದೆ ಕಾರು ಮತ್ತು ಬೈಕ್ ಮೇಲೆ ಭಾರೀ ಗಾತ್ರದ ಮರ ಬಿದ್ದು ವಾಹನಗಳು ಸಂಪೂರ್ಣ ಜಖಂ ಆಗಿತ್ತು. ಈ ವೇಳೆ, ಕಾರಿನಲ್ಲಿ ಇದ್ದವರಿಗೂ ಗಂಭೀರ ಗಾಯವಾಗಿತ್ತು.
ರಾತ್ರಿಯಿಡಿಕತ್ತಲು : ಇಲ್ಲಿನ ಆರ್‌ಟಿನಗರ ವ್ಯಾಪ್ತಿಯಲ್ಲಿ ನಿನ್ನೆ ಸಂಜೆ ಧಾರಾಕಾರ ಮಳೆ ಸುರಿದ ಪರಿಣಾಮ ರಾತ್ರಿಯಿಡಿ ನೃಪತುಂಗ ಲೇಔಟ್, ವಿಷ್ಣು ಗಾರ್ಡನ್ ಹೋಟೆಲ್ ರಸ್ತೆ, ಗಂಗಾನಗರ ಸೇರಿದಂತೆ ವಿವಿಧೆಡೆ ವಿದ್ಯುತ್ ಸಂಪರ್ಕ ಇಲ್ಲದೇ ಜಾಗರಣೆ ಮಾಡುವಂತೆ ಆಗಿದೆ. ಹಲವು ಬಾರಿ ಬೆಸ್ಕಾಂ, ಬಿಬಿಎಂಪಿಗೆ ದೂರು ನೀಡಿದರೂ, ಬಿದ್ದ ಮರಗಳನ್ನು ತೆರವುಗೊಳಿಸಲು ಮುಂದಾಗಿಲ್ಲ ಎಂದು ಇಲ್ಲಿನ ನಿವಾಸಿಗಳು ಬೇಸರ ವ್ಯಕ್ತಪಡಿಸಿದ್ದಾರೆ.
ಕಬ್ಬನ್ ಪಾರ್ಕ್‌ನಲ್ಲಿ ಉರುಳಿಬಿದ್ದಿವೆ 50 ಕ್ಕೂ ಹೆಚ್ಚು ಮರಗಳು: ಎರಡು ದಿನ ಸುರಿಯುತ್ತಿರುವ ಭಾರಿ ಮಳೆಗೆ ಕಬ್ಬನ್ ಪಾರ್ಕ್‌ಗೆ ತೆರಳುವ ಮಂದಿ ಎಚ್ಚರಿಕೆ ವಹಿಸಬೇಕಾಗಿದೆ. ಏಕೆಂದರೆ ಬೃಹತ್ ಗಾತ್ರದ ಮರಗಳು ಅಲ್ಲಿ ನೆಲಕ್ಕುರುಳಿವೆ.
ಕಬ್ಬನ್ ಪಾರ್ಕ್‌ನಲ್ಲಿ 2 ಸಾವಿರಕ್ಕೂ ಅಧಿಕ ಮರಗಳಿವೆ. 50ಕ್ಕೂ ಅಧಿಕ ಮರಗಳು ನಿನ್ನೆ ಮತ್ತು ಇಂದಿನ ಮಳೆಗೆ ಧರೆಗುರುಳಿವೆ. ಗಾಳಿಯ ತೀವ್ರತೆಗೆ ನೂರಾರು ವರ್ಷದ ಹಳೆಯ ಮರಗಳ ರೆಂಬೆ, ಕೊಂಬೆ ಸಹಿತ ಕಬ್ಬನ್ ಪಾರ್ಕ್‌ನಲ್ಲಿ ಮುರಿದು ಬೀಳುತ್ತಿವೆ. ಸಿಬ್ಬಂದಿ ಮಳೆಯಿಂದ ಮುರಿದು ಬಿದ್ದಿರುವ ಮರಗಳನ್ನು ಕತ್ತರಿಸಿ ತೆರವು ಕಾರ್ಯ ಮಾಡುತ್ತಿದ್ದಾರೆ ಎಂದು ತೋಟಗಾರಿಕಾ ಇಲಾಖೆಯ ಉಪ ನಿರ್ದೇಶಕ ಹೆಚ್ ಟಿ ಬಾಲಕೃಷ್ಣ ತಿಳಿಸಿದ್ದಾರೆ.
ಸಂಜೆಯಾಗುತ್ತಿದಂತೆ ನಗರದಲ್ಲಿ ಭಾರಿ ಮಳೆ ಶುರುವಾಗಿದೆ. ನಗರದ ಕಾರ್ಪೊರೇಷನ್, ವಿಧಾನಸೌದ, ಮೆಜೆಸ್ಟಿಕ್ ಸೇರಿದಂತೆ ಹಲವೆಡೆ ಮಳೆ ಸುರಿದಿದೆ. ಇನ್ನು ಎರಡ್ಮೂರು ದಿನ ಮಳೆ ಸಾಧ್ಯತೆ ಎಂದು ಹವಾಮಾನ ಇಲಾಖೆ ಮಾಹಿತಿ ನೀಡಿದೆ. ನಿನ್ನೆ ಬೆಂಗಳೂರಿನಲ್ಲಿ ಮಳೆರಾಯ ಆರ್ಭಟಿಸಿದ್ದ.
ಎಲೆಕ್ಟ್ರಾನಿಕ್ ಸಿಟಿ ಸಂಚಾರ ಪೊಲೀಸ್ ಠಾಣಾ ವ್ಯಾಪ್ತಿಯ ವೀರಸಂದ್ರ ಜಂಕ್ಷನ್ ನಲ್ಲಿ ಮಳೆಯಿಂದ ರಸ್ತೆಯು ಜಲಾವೃತಗೊಂಡಿದ್ದು, ನಗರದಿಂದ ಹೊರ ಹೋಗುವ ವಾಹನಗಳ ಸಂಚಾರವು ನಿಧಾನಗತಿಯಲ್ಲಿದ್ದು, ಸುಗಮ ಸಂಚಾರಕ್ಕೆ ಅನುವು ಮಾಡಿಕೊಡಲಾಗುತ್ತಿರುತ್ತದೆ ಎಂದು ಎಲೆಕ್ಟ್ರಾನಿಕ್ ಸಿಟಿ ಟ್ರಾಫಿಕ್ ಬಿಟಿಪಿ ಟ್ವೀಟ್ ಮಾಡಿದೆ.
ಇದನ್ನೂ ಓದಿ :ರಾಜ್ಯದ ಹಲವೆಡೆ ಧಾರಾಕಾರ ಮಳೆ : ರೈತರು ಬೆಳೆದ ಹೀರೇಕಾಯಿ, ಹೂ, ಬಾಳೆ ತೋಟ ನಾಶ