ಬೆಂಗಳೂರು:ಹಿಂದೂ ದೇವಾಲಯಗಳ ಹಣದಲ್ಲಿ ಒಂದೇ ಒಂದು ಪೈಸೆ ಅನ್ಯಧರ್ಮೀಯ ಸಂಸ್ಥೆಗಳಿಗೆ ನೀಡುವುದಿಲ್ಲ. ಹಿಂದೂ ದೇವಾಲಯಗಳ ಹುಂಡಿಯ ಹಣ ಹಿಂದೂ ದೇವಾಲಯಗಳ ಅಭಿವೃದ್ಧಿಗೆ ಮಾತ್ರವೇ ಸೀಮಿತವಾಗಿದೆ ಎಂದು ಮುಜರಾಯಿ ಇಲಾಖೆ ಸಚಿವ ಕೋಟ ಶ್ರೀನಿವಾಸ ಪೂಜಾರಿ ಸ್ಪಷ್ಟಪಡಿಸಿದ್ದಾರೆ.
ನಮ್ಮ ಸರ್ಕಾರದ ಅವಧಿಯಲ್ಲಿ ಅನೇಕ ದೇವಾಲಯಗಳನ್ನು ಅಭಿವೃದ್ಧಿಪಡಿಸಲು ಇಲಾಖೆಯ ಹಣ ಉಪಯೋಗಿಸಲಾಗಿದ್ದು, ಯಾವುದೇ ಕಾರಣಕ್ಕೂ ದುರುಪಯೋಗವಾಗಲಾರದು ಎಂದು ತಿಳಿಸಿದ್ದಾರೆ. ಇತ್ತೀಚೆಗೆ ಸಾಮಾಜಿಕ ಜಾಲತಾಣ ಮತ್ತು ಮಾಧ್ಯಮಗಳಲ್ಲಿ ಹಿಂದೂ ಧಾರ್ಮಿಕ ಸಂಸ್ಥೆಗಳು ಮತ್ತು ಧರ್ಮಾದಾಯ ದತ್ತಿ ಇಲಾಖೆಯಲ್ಲಿನ ಅನುದಾನ ಇತರ ಧರ್ಮದ ಪ್ರಾರ್ಥನಾ ಮಂದಿರಗಳಿಗೆ ತಸ್ತೀಕ್ ರೂಪದಲ್ಲಿ ತಲುಪಿದೆ ಎಂಬ ಸುದ್ದಿ ಹರಿದಾಡಿತ್ತು. ಈ ಬಗ್ಗೆ ಹಿಂದೂ ಧಾರ್ಮಿಕ ಮುಖಂಡರು ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದರು. ಈ ಸಂಬಂಧ ರಾಜ್ಯ ಹಿಂದೂ ಧಾರ್ಮಿಕ ಮತ್ತು ಧರ್ಮಾದಾಯ ದತ್ತಿ ಇಲಾಖೆ ಸಚಿವರು ಪ್ರಕಟಣೆ ಮೂಲಕ ಸ್ಪಷ್ಟೀಕರಣ ನೀಡಿದ್ದಾರೆ.
ರಾಜ್ಯದಲ್ಲಿ ನಮ್ಮ ಸರ್ಕಾರ ಬರುವ ಮುಂಚೆ ಇಲಾಖೆಯ ಮೂಲಕ ಮಂಜೂರಾಗುತ್ತಿರುವ ತಸ್ತೀಕ್ ಹಣ ಅನ್ಯ ಧರ್ಮೀಯ ಪ್ರಾರ್ಥನಾ ಮಂದಿರಗಳಿಗೆ ಕೂಡ ಬಿಡುಗಡೆ ಮಾಡುತ್ತಿರುವ ಬಗ್ಗೆ ಮಾಹಿತಿ ಒದಗಿದ್ದು, ತಕ್ಷಣ ಹಿಂದೂ ಧಾರ್ಮಿಕ ಸಂಸ್ಥೆಗಳು ಮತ್ತು ಧರ್ಮದಾಯ ದತ್ತಿ ಇಲಾಖೆಯ ಮೂಲಕ ಹಿಂದೂ ಧರ್ಮವನ್ನು ಹೊರತುಪಡಿಸಿ ಅನ್ಯ ಉದ್ದೇಶಗಳಿಗೆ ಬಳಸುತ್ತಿರುವುದನ್ನು ತಡೆಹಿಡಿಯಲು ಸೂಚಿಸಿದ್ದಾರೆ. ಇತರೆ ಯಾವುದೇ ಧರ್ಮದ ಧಾರ್ಮಿಕ ಕೇಂದ್ರಗಳಿಗೆ ಹಣದ ಅವಶ್ಯಕತೆಯಿದ್ದಲ್ಲಿ, ಆಯಾ ಇಲಾಖೆಯ ಜವಾಬ್ದಾರಿ ಹಾಗೂ ಆಯಾ ಇಲಾಖೆಯ ಹಣ ಬಿಡುಗಡೆ ಮಾಡಲು ಕ್ರಮ ಕೈಗೊಳ್ಳಲು ಸೂಚಿಸಲಾಗುವುದು ಎಂದು ತಿಳಿಸಿದ್ದಾರೆ.
ರಾಜ್ಯದಲ್ಲಿ 27 ಸಾವಿರಕ್ಕೂ ಹೆಚ್ಚು ಹಿಂದೂ ದೇವಸ್ಥಾನಗಳಿಗೆ ತಸ್ತೀಕ್ ನೀಡಲಾಗುತ್ತಿದ್ದು, ಸುಮಾರು 133 ಕೋಟಿ ರೂಪಾಯಿ ಸರ್ಕಾರ ವಾರ್ಷಿಕ ಅನುದಾನ ಹಂಚುತ್ತಿದೆ. ಈ ಪೈಕಿ ಸುಮಾರು 764 ಅನ್ಯ ಧರ್ಮೀಯ ಪ್ರಾರ್ಥನಾ ಮಂದಿರಗಳು ಇಲಾಖೆಯಿಂದ ತಸ್ತೀಕ್ ಪಡೆಯುತ್ತಿದ್ದು, ಮಂತ್ರಿಗಳ ಸೂಚನೆ ಮೇರೆಗೆ ಅನ್ಯ ಧರ್ಮೀಯ ಪ್ರಾರ್ಥನಾ ಮಂದಿರಗಳಿಗೆ ಹಣ ಬಿಡುಗಡೆ ಮಾಡುವುದನ್ನು ನಿಲ್ಲಿಸುವ ಬಗ್ಗೆ ಕ್ರಮ ಕೈಗೊಳ್ಳಲಾಗುವುದು ಎಂದು ಹಿಂದೂ ಧಾರ್ಮಿಕ ಮತ್ತು ಧರ್ಮಾದಾಯ ದತ್ತಿ ಇಲಾಖೆಯ ಆಯುಕ್ತರು ತಮ್ಮ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಇದನ್ನೂ ಓದಿ:2020ರ ಅತಿವೃಷ್ಟಿಗೆ ಕೊಚ್ಚಿಹೋದ ಮನೆ ಮಾಲೀಕರ ಕೈ ಸೇರದ ಹಣ: ಹೇಗಿದೆ ಪರಿಹಾರ ಪಾವತಿ ಸ್ಥಿತಿಗತಿ?