ಬೆಂಗಳೂರು: ಕಳೆದ ಕೆಲವು ದಿನಗಳಿಂದ ರಾಜ್ಯದಲ್ಲಿ ಕಾಡು ಪ್ರಾಣಿಗಳ ದಾಳಿಯಿಂದ ಮೃತಪಡುತ್ತಿರುವವರ ಸಂಖ್ಯೆ ಅಧಿಕವಾಗಿರುವ ಬಗ್ಗೆ ಕಳವಳ ವ್ಯಕ್ತಪಡಿಸಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ, ವನ್ಯ ಮೃಗಗಳು ನಾಡಿಗೆ ಬಾರದ ರೀತಿಯಲ್ಲಿ ಅರಣ್ಯದೊಳಗೆ ಅವುಗಳಿಗೆ ಸಾಕಷ್ಟು ಪ್ರಮಾಣದ ಆಹಾರ ಮತ್ತು ನೀರು ಲಭ್ಯವಾಗುವಂತೆ ಕ್ರಮ ಕೈಗೊಳ್ಳುವಂತೆ ಸೂಚನೆ ನೀಡಿದರು.
ವನ್ಯ ಮೃಗ ಮಾನವ ಸಂಘರ್ಷ ಪ್ರಕರಣಗಳು ಹೆಚ್ಚುತ್ತಿರುವ ಹಿನ್ನೆಲೆ ನಿನ್ನೆ (ಮಂಗಳವಾರ) ಅರಣ್ಯ ಸಚಿವ ಈಶ್ವರ ಖಂಡ್ರೆ ಮತ್ತು ಹಿರಿಯ ಅರಣ್ಯಾಧಿಕಾರಿಗಳೊಂದಿಗೆ ಗೃಹ ಕಚೇರಿ ಕೃಷ್ಣಾದಲ್ಲಿಂದು ಉನ್ನತ ಮಟ್ಟದ ಸಭೆ ನಡೆಸಿದ ಅವರು, ಮಳೆಯ ಅಭಾವ ಇರುವ ಕಾರಣ ವನ್ಯ ಜೀವಿಗಳು ನಾಡಿಗೆ ಬರುತ್ತವೆ. ಇದನ್ನು ನಿಯಂತ್ರಿಸಲು ಎಲ್ಲ ಸಾಧ್ಯ ಕ್ರಮ ಕೈಗೊಳ್ಳಬೇಕು ಎಂದು ಸ್ಪಷ್ಟ ನಿರ್ದೇಶನ ನೀಡಿದರು.
ಹೆಚ್ಚಿನ ಅನುದಾನಕ್ಕೆ ಮನವಿ: ಆನೆಗಳ ದಾಳಿಯಿಂದ ಕಳೆದ ಐದೂವರೆ ವರ್ಷಗಳಲ್ಲಿ 148 ಜನರು ಮೃತಪಟ್ಟಿರುವ ವಿಷಯವನ್ನು ಮುಖ್ಯಮಂತ್ರಿಗಳ ಗಮನಕ್ಕೆ ತಂದ ಅರಣ್ಯ ಸಚಿವ ಈಶ್ವರ ಖಂಡ್ರೆ ಅವರು, ಆನೆಗಳು ನಾಡಿಗೆ ಲಗ್ಗೆ ಇಡದಂತೆ ತಡೆಯಲು ರೈಲ್ವೆ ಬ್ಯಾರಿಕೇಡ್ ಮತ್ತು ಸೌರ ತಂತಿಬೇಲಿ ಹಾಕುವ ಹಾಗೂ ಆನೆ ಕಂದಕ ತೋಡುವ ಅಗತ್ಯವಿದೆ. ಹಾಗಾಗಿ ಇಲಾಖೆಗೆ ಹೆಚ್ಚಿನ ಅನುದಾನ ನೀಡುವಂತೆ ಮನವಿ ಮಾಡಿದರು. ಇದಕ್ಕೆ ಸ್ಪಂದಿಸಿದ ಮುಖ್ಯಮಂತ್ರಿಗಳು ಬಜೆಟ್ನಲ್ಲಿ ಈಗಾಗಲೇ ರೈಲ್ವೆ ಬ್ಯಾರಿಕೇಡ್ ನಿರ್ಮಾಣಕ್ಕೆ ಹಣ ಹಂಚಿಕೆ ಮಾಡಲಾಗಿದೆ. ಈಗ ಹೆಚ್ಚುವರಿ 100 ಕೋಟಿ ರೂ. ವೆಚ್ಚದಲ್ಲಿ ಕಾಮಗಾರಿ ಆರಂಭಿಸಿ ಎಂದು ಸೂಚನೆ ನೀಡಿದರು.