ಬೆಂಗಳೂರು: ನೀವೇನಾದರೂ ಸಿನಿಮಾಗಳಲ್ಲಿ ನಟಿಸುವ ಆಸೆ ಹೊಂದಿದ್ದೀರಾ. ಅಲ್ಲದೆ ಸಿನಿಮಾ ನಂಟಿನ ಜೊತೆಗೆ ವಿದೇಶಗಳಲ್ಲಿ ಕೈತುಂಬಾ ಹಣ ಸಂಪಾದಿಸಬೇಕು ಅಂದುಕೊಂಡಿದ್ದರೆ ಈ ಸ್ಟೋರಿಯನ್ನು ಓದಲೇಬೇಕು. ರಾಜಧಾನಿಯಲ್ಲಿ ಜ್ಯೂನಿಯರ್ ಆರ್ಟಿಸ್ಟ್‌ಗಳಾಗಿ ನಟಿಸಲು ಸಿದ್ಧರಿರುವ ಯುವತಿಯರನ್ನೇ ಗುರಿಯಾಗಿಸಿಕೊಂಡು ಹಣದ ಆಮಿಷವೊಡ್ಡಿ ವಿದೇಶಗಳಲ್ಲಿ ಕೆಲಸ ಕೊಡಿಸುವುದಾಗಿ ನಂಬಿಸಿ ಅನೈತಿಕ ಚಟುವಟಿಕೆಯಲ್ಲಿ ತೊಡಗಿಸುತ್ತಿದ್ದ ಮಾನವ ಕಳ್ಳಸಾಗಾಣಿಕೆ ಜಾಲವನ್ನು ಸಿಸಿಬಿ ಪೊಲೀಸರು ಪತ್ತೆ ಹಚ್ಚಿದ್ದಾರೆ.
ಹಲವು ವರ್ಷಗಳಿಂದ ಈ ದಂಧೆಯಲ್ಲಿ ತೊಡಗಿಸಿಕೊಂಡಿದ್ದ ಕೊಪ್ಪಳ ಮೂಲದ ಪ್ರಮುಖ ಆರೋಪಿ ಬಸವರಾಜ ಶಂಕರಪ್ಪ, ಸಹಚರರಾದ ಆದರ್ಶ, ರಾಜೇಂದ್ರ ನಾಚಿಮುತ್ತು, ಮಾರಿಯಪ್ಪನ್, ಚಂದ್ರು, ಅಶೋಕ್ ಹಾಗೂ ರಾಜೀವ್ ಗಾಂಧಿಯನ್ನು ಬಂಧಿಸಿ 17 ಯುವತಿಯರ ಪಾಸ್‌ಪೋರ್ಟ್‌ಗಳನ್ನು ವಶಪಡಿಸಿಕೊಂಡಿದ್ದು, ವಿದೇಶಕ್ಕೆ ತೆರಳಲು ಸಿದ್ಧರಾಗಿದ್ದ ಅಮಾಯಕ ಮಹಿಳೆಯರನ್ನು ಪೊಲೀಸರು ರಕ್ಷಿಸಿದ್ದಾರೆ.
ಇದನ್ನೂ ಓದಿ:ಅಪ್ಪಾ ಬೇಡಪ್ಪ.. ಪ್ಲೀಸ್ ಬೇಡಪ್ಪ ಅಂತಾ ಗೋಗರಿದ್ರೂ ಕರಗದ ಮನಸ್ಸು.. ಮಗನಿಗೆ ಬೆಂಕಿ ಹಚ್ಚಿ ತಂದೆ ಕ್ರೌರ್ಯ!
ಲಕ್ಷ ಲಕ್ಷ ಹಣದ ಆಮಿಷ: ಆರೋಪಿಗಳ ಪೈಕಿ ಇಬ್ಬರು ಕರ್ನಾಟಕದವರಾದರೆ, ಇನ್ನುಳಿದವರು ತಮಿಳುನಾಡು ಮೂಲದವರಾಗಿದ್ದಾರೆ. ಇವರು ಒಟ್ಟಾಗಿ ಈವೆಂಟ್ ಮ್ಯಾನೆಜ್ಮೆಂಟ್ ನಡೆಸುತ್ತಿದ್ದರು. ಜ್ಯೂನಿಯರ್ ಕಲಾವಿದರಾಗಿ ನಟಿಸುವ ಕರ್ನಾಟಕ, ತಮಿಳುನಾಡು, ಆಂಧ್ರ, ಮಹಾರಾಷ್ಟ್ರ ಹಾಗೂ ಪಂಜಾಬ್ ಮೂಲದ ಯುವತಿಯರಿಗೆ ಗಾಳ ಹಾಕುತ್ತಿದ್ದ ಆರೋಪಿಗಳು ದುಬೈಗೆ ಹೋದರೆ ಲಕ್ಷ ಲಕ್ಷ ಹಣ ಸಂಪಾದಿಸಬಹುದು ಎಂದು ಪುಸಲಾಯಿಸುತ್ತಿದ್ದರಂತೆ. ಅಲ್ಲಿಯೂ ಕೂಡ ಡ್ಯಾನ್ಸ್, ಆಕ್ಟಿಂಗ್ ಕೆಲಸ ಇರುತ್ತೆ ಅಂತ ಹೇಳಿ ಯುವತಿಯರುಗೆ 50 ಸಾವಿರ ಅಡ್ವಾನ್ಸ್ ಕೊಟ್ಟು ವೀಸಾ, ಪಾಸ್‌ಪೋರ್ಟ್ ಮಾಡಿ ದುಬೈ ವಿಮಾನ ಹತ್ತಿಸುತ್ತಿದ್ದರು.
ಸುಂದರ ಕನಸು ಮಾಂಸ ದಂಧೆಯಲ್ಲಿ ಭಗ್ನ:ಹೀಗೆ ಕನಸು ಕಟ್ಟಿಕೊಂಡು ದುಬೈನ ಎಂಟ್ರಿ ಆದ ಯುವತಿಯರಿಗೆ ಡ್ಯಾನ್ಸ್ ಬಾರ್‌ನಲ್ಲಿ ಡ್ಯಾನ್ಸ್, ಬಲವಂತವಾಗಿ ಅನೈತಿಕ ಚಟುವಟಿಕೆಗೂ ಬಳಸಿಕೊಳ್ಳುತ್ತಿದ್ದರು. ದುಬೈನ ಡ್ಯಾನ್ಸ್ ಬಾರ್ ಮಾಲೀಕರ ಸಂಪರ್ಕ ಹೊಂದಿದ್ದ ಆರೋಪಿಗಳು ಅವರಿಂದಲೂ ಸಹ ಕಮಿಷನ್ ರೂಪದಲ್ಲಿ ಹಣ ಪಡೆದುಕೊಳ್ಳುತ್ತಿದ್ದರು ಎನ್ನಲಾಗಿದೆ. ಈ ಮಾಹಿತಿ ಅರಿತ ಸಿಸಿಬಿ ಇನ್‌ಸ್ಪೆಕ್ಟರ್ ಹಜರೇಶ್ ನೇತೃತ್ವದ ತಂಡ ದುಬೈಗೆ ಶಿಫ್ಟ್ ಆಗಬೇಕಿದ್ದ 17 ಯುವತಿಯರನ್ನು ರಕ್ಷಿಸಿದ್ದಾರೆ ಎಂದು ಸಿಸಿಬಿ ಪೊಲೀಸ್ ಜಂಟಿ ಆಯುಕ್ತ ರಮಣ್ ಗುಪ್ತ ಮಾಹಿತಿ ನೀಡಿದರು. ಇದುವರೆಗೂ 95 ಯುವತಿಯರನ್ನು ದುಬೈಗೆ ಕಳುಹಿಸಿರುವ ಮಾಹಿತಿ ಲಭ್ಯವಾಗಿದೆ. ಇನ್ನೂ ಇಂತಹ ಜಾಲದಲ್ಲಿ ಯಾರಾದ್ರೂ ಸಿಲುಕಿಕೊಂಡಿದ್ರೆ ಸಿಸಿಬಿ ಮಾಹಿತಿ ನೀಡಲು ಅಧಿಕಾರಿಗಳು ತಿಳಿಸಿದ್ದಾರೆ.