ಬೆಂಗಳೂರು: ಜೈಲುಗಳಲ್ಲಿರುವ ಅಪರಾಧಿಗಳು ಮತ್ತು ವಿಚಾರಣಾಧೀನ ಕೈದಿಗಳ ಆರೋಗ್ಯ ಸ್ಥಿತಿ ಕ್ಷೀಣಿಸದಂತೆ ನೋಡಿಕೊಳ್ಳುವ ಸಲುವಾಗಿ ಪ್ರತಿ ತಿಂಗಳು ಎಲ್ಲ ಕೈದಿಗಳ ಆರೋಗ್ಯ ಪರೀಕ್ಷೆ ನಡೆಸಿ, ಆರೋಗ್ಯ ಕಾರ್ಡ್‌ಗಳನ್ನು ಸಿದ್ದಪಡಿಸಬೇಕು ಎಂದು ರಾಜ್ಯ ಮಾನವ ಹಕ್ಕುಗಳ ಆಯೋಗ ರಾಜ್ಯ ಸರ್ಕಾರಕ್ಕೆ ಸೂಚಿಸಿದೆ.
ಅಲ್ಲದೆ, ಮನೋವೈದ್ಯರಿಂದ ಆಪ್ತಸಮಾಲೋಚನೆ ನಡೆಸಬೇಕು. ಧನಾತ್ಮಕ ಒತ್ತಡ ಕಾಪಾಡಲು ದೈಹಿಕ ಮತ್ತು ಮಾನಸಿಕ ಚಟುವಟಿಕೆಗಳನ್ನು ಹಮ್ಮಿಕೊಳ್ಳಬೇಕು. ಜೈಲಿನ ಬ್ಯಾರಕ್ ಮತ್ತು ಹೊರಭಾಗಗಳಲ್ಲಿ ಕೆಲವು ಕ್ರೀಡೆಗಳನ್ನು ಆಯೋಜಿಸಬೇಕು ಎಂದು ಗೃಹ ಇಲಾಖೆ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಅವರಿಗೆ ಆಯೋಗ ಶಿಫಾರಸು ಮಾಡಿದೆ.
ಜತೆಗೆ, ಓದುವ ಹವ್ಯಾಸ ಇರುವವರಿಗೆ ಅಗತ್ಯ ಸಾಮಗ್ರಿಗಳನ್ನು ಒದಗಿಸಬೇಕು. ವಾರಕ್ಕೆ ಕೆಲವು ದಿನಗಳಲ್ಲಿ ಯೋಗಾ ಮತ್ತು ವ್ಯಾಯಾಮಗಳಿಗಾಗಿ ಸಮಯಾವಕಾಶ ಒದಗಿಸಿ ಪ್ರೋತ್ಸಾಹ ನೀಡಬೇಕು ಎಂದು ಆಯೋಗ ಶಿಫಾರಸು ಮಾಡಿದೆ.
ಆರೋಗ್ಯವಂತ 21 ವರ್ಷದ ವ್ಯಕ್ತಿಯೊಬ್ಬರು ಪೋಕ್ಸೊ ಪ್ರಕರಣದಲ್ಲಿ ವಿಚಾರಣಾಧೀನ ಕೈದಿಯಾಗಿ ಜೈಲು ಸೇರಿದ ಮೂರೇ ವರ್ಷದಲ್ಲಿ ಕ್ಷಯರೋಗ ಮತ್ತು ಮೂತ್ರಪಿಂಡಗಳ ಸಮಸ್ಯೆಯಂತಹ ಗಹನವಾದ ಕಾಯಿಲೆಗಳಿಗೆ ತುತ್ತಾಗಿ ಮೃತಪಟ್ಟ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿರುವ ಆಯೋಗದ ಅಧ್ಯಕ್ಷ ಡಿ.ಎಚ್.ವಘೇಲಾ, ಸದಸ್ಯರಾದ ಕೆ.ಬಿ.ಚಂಗಪ್ಪ ಮತ್ತು ಆರ್.ಕೆ.ದತ್ತ ಅವರಿದ್ದ ಪೀಠ, ಸರ್ಕಾರಕ್ಕೆ ಹಲವು ಶಿಫಾರಸುಗಳನ್ನು ನೀಡಿದೆ.
ಕೈದಿಗಳ ಆರೋಗ್ಯದ ಮೇಲೆ ನಿಗಾ ಇಡಬೇಕು. ಯಾವುದೇ ಕೈದಿ ಅನಾರೋಗ್ಯಕ್ಕೆ ತುತ್ತಾಗುವ ಮುನ್ನವೇ ಚಿಕಿತ್ಸೆ ಕೊಡಿಸಿ ಗುಣಮುಖರಾಗುವಂತೆ ಮಾಡಬೇಕು ಎಂದು ಸೂಚನೆ ನೀಡಿದೆ. ಆರೋಪಿಗಳು ಕಾರಣಾಂತರಗಳಿಂದ ಜೈಲು ಸೇರಿರಬಹುದು. ಆದರೆ, ಅವರ ವಿರುದ್ಧದ ಆರೋಪ ಸಾಬೀತಾಗುವ ಮುನ್ನವೇ ಮೃತಪಟ್ಟಿದ್ದಾರೆ. ಅವರಿಗೆ ಸೂಕ್ತ ಚಿಕಿತ್ಸೆ ನೀಡಿದಲ್ಲಿ ಬದುಕುಳಿಯುತ್ತಿದ್ದರು. ಆದರೆ, ಈ ರೀತಿಯ ಸಾವು ಸಹಜ ಎಂದು ಊಹಿಸಲಾಗದು ಎಂದು ಆಯೋಗ ತನ್ನ ಆದೇಶದಲ್ಲಿ ತಿಳಿಸಿದೆ.
ಪ್ರಕರಣದ ಹಿನ್ನೆಲೆ:ಜೈಲಿನಲ್ಲಿ ವಿಚಾರಣಾಧೀನ ಕೈದಿಯಾಗಿದ್ದ ಅರವಿಂದ ಕುಮಾರ್(21) ಅಪ್ರಾಪ್ತೆಯೊಬ್ಬಳನ್ನು ಪ್ರೀತಿಸುತ್ತಿದ್ದನು. ಈ ಸಂಬಂಧ ಆಕ್ಷೇಪ ವ್ಯಕ್ತಪಡಿಸಿದ್ದ ಆಕೆಯ ಪೋಷಕರು ರಾಜಾಜಿನಗರದ ಪೊಲೀಸ್ ಠಾಣೆಯಲ್ಲಿ ಪೋಕ್ಸೋ ಕಾಯಿದೆಯಡಿ ದೂರು ದಾಖಲಿಸಿದ್ದರು. ಪ್ರಕರಣ ದಾಖಲಿಸಿಕೊಂಡಿದ್ದ ಪೊಲೀಸರು ಆರೋಪಿಯನ್ನು 2018ರ ಜನವರಿ 26ರಂದು ನ್ಯಾಯಾಧೀಶರ ಮುಂದೆ ಹಾಜರುಪಡಿಸಿ ಕೇಂದ್ರ ಕಾರಾಗೃಹಕ್ಕೆ ರವಾನಿಸಿದ್ದರು.
ಈ ನಡುವೆ ಆರೋಪಿಯ ಆರೋಗ್ಯದಲ್ಲಿ ಕೆಲ ಬದಲಾವಣೆಗಳಾದ ಹಿನ್ನೆಲೆಯಲ್ಲಿ ನಗರದ ವಿವಿಧ ಸರ್ಕಾರಿ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಕೊಡಿಸಲಾಗಿತ್ತು. ಆದರೆ, 2021ರ ಜನವರಿ 5 ರಂದು ಅರವಿಂದ ಕುಮಾರ್‌ಗೆ ಕ್ಷಯರೋಗ ಮತ್ತು ಮೂತ್ರಪಿಂಡ ಸಮಸ್ಯೆ ಇರುವುದು ದೃಢಪಟ್ಟಿತ್ತು. ತಕ್ಷಣ ಬೋರಿಂಗ್ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗುತ್ತಿತ್ತು. ಆದರೆ, ಚಿಕಿತ್ಸೆ ಫಲಕಾರಿಯಾಗದೇ 2021ರ ಫೆಬ್ರವರಿ 4 ರಂದು ಮೃತಪಟ್ಟಿದ್ದನು.
ದಾಖಲೆ ಒದಗಿಸದ ಜೈಲು ಅಧಿಕಾರಿಗಳು:ಪ್ರಕರಣ ಸಂಬಂಧ ವಿಚಾರಣೆಗಾಗಿ ಆಯೋಗಕ್ಕೆ ಹಾಜರಾಗಿದ್ದ ಜೈಲು ಅಧೀಕ್ಷಕರಾಗಿದ್ದ ರಂಗನಾಥ್ ಅವರು, ಆರೋಪಿ ಅರವಿಂದ ಕುಮಾರ್ ಅವರಿಗೆ 2020ರಿಂದಲೇ ಕ್ಷಯರೋಗ ಕಾಣಿಸಿಕೊಂಡಿತ್ತು. ಈ ಸಂಬಂಧ ಹಲವು ರೀತಿಯಲ್ಲಿ ಚಿಕಿತ್ಸೆ ಕೊಡಿಸಲಾಗಿದೆ ಎಂದು ವಿವರಿಸಿದ್ದರು. ಆದರೆ, ಚಿಕಿತ್ಸೆ ಕೊಡಿಸಿರುವುದಕ್ಕೆ ಸಂಬಂಧಿಸಿದಂತೆ ಯಾವುದೇ ದಾಖಲೆಗಳನ್ನು ಒದಗಿಸಿರಲಿಲ್ಲ. ಅಲ್ಲದೆ, ಆರೋಗ್ಯವಂತರಾಗಿದ್ದ ಆರೋಪಿಗೆ ಯಾವ ಕಾರಣಕ್ಕೆ ಈ ಕಾಯಿಲೆಗಳು ಬಂದವು ಎಂಬುದಕ್ಕೂ ಸೂಕ್ತ ಪುರಾವೆಗಳನ್ನು ಒದಗಿಸಿರಲಿಲ್ಲ.
ಹತ್ತು ಲಕ್ಷ ಪರಿಹಾರ :ಅನಾರೋಗ್ಯಕ್ಕೆ ತುತ್ತಾಗಿ ಮೃತಪಟ್ಟಿದ್ದ ವಿಚಾರಣಾಧೀನ ಕೈದಿ ಅರವಿಂದ ಕುಮಾರ ಅವರ ಕುಟುಂಬ ಒಬ್ಬ ದುಡಿಯುವಂತಹ ವ್ಯಕ್ತಿಯನ್ನು ಕಳೆದುಕೊಂಡಿದೆ. ಅಪರಾಧ ಸಾಬೀತಾಗುವ ಮುನ್ನವೇ ಸಾವನ್ನಪ್ಪಿರುವುದರಿಂದ ನಿರಪರಾಧಿಗೆ ಸೂಕ್ತ ಚಿಕಿತ್ಸೆ ಲಭ್ಯತೆಯ ಕೊರತೆ ಎದ್ದು ಕಾಣುತ್ತಿದ್ದು, ಕುಟುಂಬದ ಸದಸ್ಯರಿಗೆ 10 ಲಕ್ಷ ರೂ.ಗಳ ಪರಿಹಾರ ನೀಡಬೇಕು ಎಂದು ಆಯೋಗ ಸರ್ಕಾರಕ್ಕೆ ಸೂಚನೆ ನೀಡಿದೆ.
ಇದನ್ನೂ ಓದಿ:ಆಸ್ಪತ್ರೆ ಸಿಬ್ಬಂದಿ ಎಡವಟ್ಟಿನಿಂದ ಮಕ್ಕಳಿಗೆ ಅಂಟಿದ ಹೆಚ್‌ಐವಿ: ಮಹಾ ಸರ್ಕಾರಕ್ಕೆ ಎನ್ಹೆಚ್ಆರ್ಸಿ ನೋಟಿಸ್