ಕರ್ನಾಟಕ

karnataka

ETV Bharat / state

ಹುಳಿಮಾವು ಪೊಲೀಸರ ವಿರುದ್ಧ ಸುಲಿಗೆ ಆರೋಪ : ಗೃಹ ಇಲಾಖೆಗೆ ಹೈಕೋರ್ಟ್ ನೋಟಿಸ್ - ನ್ಯಾ. ಪಿ.ಎಸ್. ದಿನೇಶ್ ಕುಮಾರ್ ಅವರಿದ್ದ ಪೀಠ

ಮಧ್ಯಾಹ್ನ 3 ಗಂಟೆಗೆ ಹುಳಿಮಾವು ಠಾಣೆಗೆ ಕರೆದೊಯ್ದು, ಎಲ್ಲರ ಮೇಲೆ ಕಬ್ಬಿಣ ಕಳ್ಳತನದ ಕೇಸು ಹಾಕುತ್ತೇವೆ, 25 ಲಕ್ಷ ರೂ. ಕೊಟ್ಟರೆ ಎಲ್ಲರನ್ನೂ ಬಿಟ್ಟುಬಿಡುತ್ತೇವೆ ಎಂದು ಹೇಳುತ್ತ ಹಲ್ಲೆ ನಡೆಸಿದರು ಎಂದು ಅರ್ಜಿದಾರರು ಆರೋಪಿಸಿದ್ದಾರೆ..

Hulimavu charged with extortion against police news
ಹುಳಿಮಾವು ಪೊಲೀಸರ ವಿರುದ್ಧ ಸುಲಿಗೆ ಆರೋಪ

By

Published : Feb 6, 2021, 9:16 PM IST

ಬೆಂಗಳೂರು :ನಗರದ ಹುಳಿಮಾವು ಠಾಣೆ ಪೊಲೀಸರ ವಿರುದ್ಧ ಹಲ್ಲೆ, ಅಕ್ರಮ ಬಂಧನ ಹಾಗೂ 15 ಲಕ್ಷ ರೂಪಾಯಿ ಹಣ ಸುಲಿಗೆ ಆರೋಪ ಮಾಡಿ ಬೆಂಗಳೂರು ಗ್ರಾಮಾಂತರ ಹೊಸಕೋಟೆಯ ಸೂಲಿಬೆಲೆ ಗ್ರಾಮದ ನಾಲ್ವರು ಸಲ್ಲಿಸಿರುವ ಅರ್ಜಿ ಸಂಬಂಧ ಹೈಕೋರ್ಟ್ ಗೃಹ ಇಲಾಖೆಗೆ ನೋಟಿಸ್ ನೀಡಿದೆ.

ಓದಿ: ವಿಧವಾ ವೇತನ ಪಡೆಯುತ್ತಿದ್ದ ಪತ್ನಿ ವಿರುದ್ಧ ಪತಿ ದೂರು... ಇಂಥಾ ಹೆಂಡ್ತಿರೂ ಇರ್ತಾರಾ..!

ಠಾಣೆಯ ಸಬ್ ಇನ್ಸ್‌ಪೆಕ್ಟರ್ ಮಹಬೂಬ್ ಪಾಷಾ, ಕಾನ್ಸ್​ಸ್ಟೇಬಲ್‌ಗಳಾದ ಪ್ರವೀಣ್, ರಾಜಶೇಖರ್, ಶೈಲೇಶ್ ಹಾಗೂ ಎನ್.ಚಂದ್ರಶೇಖರ್ ವಿರುದ್ಧ ಸೂಲಿಬೆಲೆ ಗ್ರಾಮದ ಯಾರಬ್, ಮುಷ್ತಾಕ್ ಪಾಷಾ, ಅಫ್ರೋಜ್ ಹಾಗೂ ಸೈಯದ್ ಹೈಕೋರ್ಟ್‌ಗೆ ತಕರಾರು ಅರ್ಜಿ ಸಲ್ಲಿಸಿದ್ದಾರೆ.

ಈ ಅರ್ಜಿ ವಿಚಾರಣೆ ನಡೆಸಿದ ನ್ಯಾ. ಪಿ.ಎಸ್. ದಿನೇಶ್ ಕುಮಾರ್ ಅವರಿದ್ದ ಪೀಠ, ಗೃಹ ಇಲಾಖೆ ಪ್ರಧಾನ ಕಾರ್ಯದರ್ಶಿ, ಪೊಲೀಸ್ ವರಿಷ್ಠಾಧಿಕಾರಿ, ನಗರ ಪೊಲೀಸ್ ಆಯುಕ್ತ ಹಾಗೂ ಆರೋಪಿತ ಪೊಲೀಸರಿಗೆ ನೋಟಿಸ್ ಜಾರಿ ಮಾಡಿ, ಫೆ.24ಕ್ಕೆ ವಿಚಾರಣೆ ಮುಂದೂಡಿದೆ.

ಅರ್ಜಿದಾರರ ಆರೋಪ :ಕಳೆದ ಜ.14ರ ಬೆಳಗ್ಗೆ 9 ಗಂಟೆಗೆ ಕೆಂಪು ಬಣ್ಣದ ಸ್ಕಾರ್ಪಿಯೋ ಕಾರಿನಲ್ಲಿ ಮಫ್ತಿಯಲ್ಲಿ ಯಾರಬ್‌ನ ಗುಜರಿ ಅಂಗಡಿಗೆ ಬಂದ ಕಾನ್‌ಸ್ಟೇಬಲ್‌ಗಳು ಕಾಲಿನಿಂದ ಒದ್ದು, ಅವಾಚ್ಯ ಶಬ್ದಗಳಿಂದ ನಿಂದಿಸಿ ಎಳೆದೊಯ್ದಿದ್ದಲ್ಲದೆ, ಉಳಿದವರ ಮನೆಗಳಿಗೂ ತೆರಳಿ ಎಲ್ಲರನ್ನೂ ಕಾರಿನಲ್ಲಿ ಎಳೆದುಕೊಂಡು ಹೋದರು.

ಮಧ್ಯಾಹ್ನ 3 ಗಂಟೆಗೆ ಹುಳಿಮಾವು ಠಾಣೆಗೆ ಕರೆದೊಯ್ದು, ಎಲ್ಲರ ಮೇಲೆ ಕಬ್ಬಿಣ ಕಳ್ಳತನದ ಕೇಸು ಹಾಕುತ್ತೇವೆ, 25 ಲಕ್ಷ ರೂ. ಕೊಟ್ಟರೆ ಎಲ್ಲರನ್ನೂ ಬಿಟ್ಟುಬಿಡುತ್ತೇವೆ ಎಂದು ಹೇಳುತ್ತ ಹಲ್ಲೆ ನಡೆಸಿದರು ಎಂದು ಅರ್ಜಿದಾರರು ಆರೋಪಿಸಿದ್ದಾರೆ.

ಅಲ್ಲದೇ, ಪೊಲೀಸರು ನಮ್ಮ ಮನೆಯವರಿಗೆ ಕರೆ ಮಾಡಲು ಸೂಚಿಸಿ ಹಣ ತರುವಂತೆ ಹೇಳಿಸಿದರು. ರಾತ್ರಿ 9 ಗಂಟೆ ಸಮಯದಲ್ಲಿ ನಮ್ಮ ಕುಟುಂಬದವರು 15 ಲಕ್ಷ ರೂ. ಹೊಂದಿಸಿಕೊಂಡು ಠಾಣೆಗೆ ಬಂದರು.

ಸಬ್ ಇನ್ಸ್‌ಪೆಕ್ಟರ್ ಮಹಬೂಬ್ ಪಾಷಾ ಕಳುಹಿಸಿದ ಕಾನ್‌ಸ್ಟೇಬಲ್‌ವೊಬ್ಬರ ಕೈಗೆ ಹಣ ನೀಡಿದ ನಂತರ ರಾತ್ರಿ 2 ಗಂಟೆ ವೇಳೆಗೆ ನಮ್ಮನ್ನು ಮನೆಗೆ ಕಳುಹಿಸಲಾಯಿತು. ಇಷ್ಟೆಲ್ಲ ಆದ ನಂತರವೂ ಪೇದೆ ಚಂದ್ರಶೇಖರ್ ಫೋನ್ ಪೇ ಆ್ಯಪ್ ಮೂಲಕ 4 ಸಾವಿರ ರೂ. ಪಡೆದಿದ್ದಾರೆ ಎಂದು ಅರ್ಜಿದಾರರು ದೂರಿದ್ದಾರೆ.

ಘಟನೆ ಸಂಬಂಧ ಸಿಸಿ ಕ್ಯಾಮೆರಾ ದೃಶ್ಯ ಹಾಗೂ ಮೊಬೈಲ್ ಕರೆಗಳ ರೆಕಾರ್ಡ್ ಸಹಿತ ಎಸಿಬಿ ಹಾಗೂ ಬೆಂ.ಗ್ರಾ. ಎಸ್‌ಪಿಗೆ ದೂರು ಸಲ್ಲಿಸಿ, ಕಾನೂನು ಕ್ರಮ ಜರುಗಿಸುವಂತೆ ಕೋರಿದ್ದರೂ ಪ್ರಯೋಜನವಾಗಿಲ್ಲ. ಆದ್ದರಿಂದ, ತಮಗೂ, ತಮ್ಮ ಕುಟುಂಬ ಸದಸ್ಯರಿಗೂ ಕಿರುಕುಳ ನೀಡದಂತೆ ನಿರ್ದೇಶಿಸಬೇಕು, ಸುಲಿಗೆ ಮಾಡಿರುವ ಹಣ ಹಿಂದಿರುಗಿಸುವಂತೆ ಹಾಗೂ ತಮಗಾಗಿರುವ ಹಿಂಸೆಗೆ 2 ಕೋಟಿ ರೂ. ಪರಿಹಾರ ಪಾವತಿಸುವಂತೆ ಪೊಲೀಸರಿಗೆ ನಿರ್ದೇಶಿಸಬೇಕು ಎಂದು ಅರ್ಜಿದಾರರು ಕೋರಿದ್ದಾರೆ.

ABOUT THE AUTHOR

...view details