ಕರ್ನಾಟಕ

karnataka

ETV Bharat / state

ಹುಳಿಮಾವು ಕೆರೆದಂಡೆ ಒಡೆದ ಪ್ರಕರಣ: ಬಿಬಿಎಂಪಿ ಆಯುಕ್ತರ ವಿರುದ್ಧ ಕ್ರಮಕ್ಕೆ ಶಿಫಾರಸು - ಹುಳಿಮಾವು ಕೆರೆದಂಡೆ ಒಡೆದ ಪ್ರಕರಣ

ಶಾಸಕ ಆರಗ ಜ್ಞಾನೇಂದ್ರರವರು ಹುಳಿಮಾವು ಕರೆದಂಡೆ ಒಡೆದ ಪ್ರಕರಣದಲ್ಲಿ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳುವಲ್ಲಿ ಬಿಬಿಎಂಪಿ ಆಯುಕ್ತರು ವಿಫಲರಾಗಿದ್ದಾರೆ. ಅವರ ಮೇಲೆ ಸೂಕ್ತ ಕ್ರಮಕ್ಕೆ ಆಗ್ರಹಿಸಿದರು.

Arrag Jnanendra
ಆರಗ ಜ್ಞಾನೇಂದ್ರ

By

Published : Mar 16, 2020, 5:09 PM IST

Updated : Mar 16, 2020, 6:44 PM IST

ಬೆಂಗಳೂರು: ಹುಳಿಮಾವು ಕೆರೆ ದಂಡೆ ಒಡೆದ ಪ್ರಕರಣ ಸಂಬಂಧ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳುವಲ್ಲಿ ಬಿಬಿಎಂಪಿ ಆಯುಕ್ತರು ವಿಫಲರಾಗಿದ್ದಾರೆ. ಅವರ ವಿರುದ್ಧ ಕ್ರಮ ಕೈಗೊಳ್ಳುವಂತೆ ಶಿಫಾರಸು ಮಾಡಲಾಗಿದೆ ಎಂದು ವಿಧಾನಮಂಡಲದ ಸ್ಥಳೀಯ ಸಂಸ್ಥೆ ಮತ್ತು ಪಂಚಾಯತ್ ರಾಜ್ ಸಂಸ್ಥೆಗಳ ಸಮಿತಿ ಅಧ್ಯಕ್ಷ ಆರಗ ಜ್ಞಾನೇಂದ್ರ ತಿಳಿಸಿದರು.

ಶಾಸಕ ಆರಗ ಜ್ಞಾನೇಂದ್ರ

ವಿಧಾನಸೌಧದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಹುಳಿಮಾವು ಕೆರೆಯ ದಂಡೆಯನ್ನು ಅಧಿಕಾರಿಗಳ ಬೇಜವಾಬ್ದಾರಿಯಿಂದ ಒಡೆದು ಹಾಕಲಾಗುತ್ತಿದೆ. ಆದರೆ, ಯಾವೊಬ್ಬ ಅಧಿಕಾರಿಗಳ ಮೇಲೂ ಎಫ್ಐಆರ್ ದಾಖಲಾಗಿಲ್ಲ. ತಪ್ಪು ಮಾಡಿದ ಅಧಿಕಾರಿ ವಿರುದ್ಧ ಯಾವುದೇ ಕ್ರಮ ಕೈಗೊಂಡಿಲ್ಲ. ತಪ್ಪಿತಸ್ಥ ಅಧಿಕಾರಿ ಬಂಧನವೂ ಆಗಿಲ್ಲ. ಆ ಅಧಿಕಾರಿಯನ್ನು ಕೇವಲ ವರ್ಗಾವಣೆ ಮಾಡಲಾಗಿದೆಯಷ್ಟೇ‌ ಎಂದು ಆಕ್ರೋಶ ವ್ಯಕ್ತಪಡಿಸಿದರು.

ತಪ್ಪಿತಸ್ಥ ಎಂಜಿನಿಯರ್ ಮೇಲೆ ಕ್ರಮ ಕೈಗೊಳ್ಳುವುದಾಗಿ ಪಾಲಿಕೆ ಆಯುಕ್ತರು ಸಮಿತಿ ಮುಂದೆ ಭರವಸೆ ನೀಡಿದ್ರು. ಆದ್ರೆ, ಈವರೆಗೆ ಯಾವುದೇ ಕ್ರಮ ಕೈಗೊಂಡಿಲ್ಲ. ಹೀಗಾಗಿ ಬಿಬಿಎಂಪಿ ಆಯುಕ್ತರ ವಿರುದ್ಧವೂ ಕ್ರಮ ಕೈಗೊಳ್ಳುವಂತೆ ಶಿಫಾರಸು ಮಾಡಲಾಗಿದೆ ಎಂದರು.

ಸಿಎಜಿ ಕೆರೆಗಳ ಸಂರಕ್ಷಣೆ ಕುರಿತ ವರದಿ ಆಧಾರದಲ್ಲಿ ಬಿಬಿಎಂಪಿ ಕೆರೆಗಳ ಸಂರಕ್ಷಣೆ ಮತ್ತು ಅವುಗಳ ಜೀರ್ಣೋದ್ಧಾರ ಬಗ್ಗೆ ಸಮಗ್ರವಾಗಿ ಚರ್ಚಿಸಲಾಗಿದೆ‌. ಬಳಿಕ ಸ್ಥಳ ಪರಿಶೀಲನೆಯನ್ನೂ ನಡೆಸಲಾಗಿದೆ‌. ಒಟ್ಟು ರಾಜ್ಯದಲ್ಲಿ 36,568 ಕೆರೆಗಳಿವೆ. ಈ ಪೈಕಿ 211 ಕೆರೆಗಳು ಬೆಂಗಳೂರಿನಲ್ಲಿವೆ. 167 ಕೆರೆಗಳು ಬಿಬಿಎಂಪಿ ವ್ಯಾಪ್ತಿಯಲ್ಲಿವೆ. 148 ಜೀವಂತ ಕೆರೆಗಳಿವೆ. 19 ಕೆರೆಗಳು ನಿರುಪಯುಕ್ತವಾಗಿವೆ‌ ಎಂದು ವಿವರಿಸಿದರು.

ಬೆಂಗಳೂರು ನಗರ ವ್ಯಾಪ್ತಿಯ ಕೆರೆಗಳ ಸಂರಕ್ಷಣೆ ಮತ್ತು ಪುನಶ್ಚೇತನ ಕಾರ್ಯದಲ್ಲಿ ನಗರಾಭಿವೃದ್ಧಿ ಇಲಾಖೆ, ಸಣ್ಣ ನೀರಾವರಿ ಮತ್ತು ಅರಣ್ಯ ಇಲಾಖೆ ಅಧಿಕಾರಿಗಳು ಪರಸ್ಪರ ಸಹಯೋಗದೊಂದಿಗೆ ಕರ್ತವ್ಯ ನಿರ್ವಹಿಸುವಲ್ಲಿ ವಿಫಲವಾಗಿದೆ. ಬಫರ್ ಝೋನ್ ಲೆಕ್ಕಿಸದೆ ಅಕ್ರಮವಾಗಿ ಕಟ್ಟಡ ನಿರ್ಮಿಸಲಾಗಿದೆ. ಕೆರೆಗಳಿಗೆ ಮಣ್ಣನ್ನು ಹಾಕಿ ಅದನ್ನು ಕಬಳಿಕೆ ಮಾಡಲಾಗುತ್ತಿದೆ ಎಂದು ತಿಳಿಸಿದರು.

ಎರೆಮಲ್ಲಪ್ಪಚೆಟ್ಟಿ ಕೆರೆಯನ್ನು ಒಂದು ತಿಂಗಳೊಳಗಾಗಿ ಸರ್ವೆ ಮಾಡಿಸಿ ಒತ್ತುವರಿ ತೆರವುಗೊಳಿಸಲು ಅಗತ್ಯ ಕ್ರಮ ಕೈಗೊಂಡು ವರದಿ ನೀಡುವುದಾಗಿ ಸಮಿತಿಗೆ ನೀರಾವರಿ ಇಲಾಖೆ ಕಾರ್ಯದರ್ಶಿ ಭರವಸೆ ನೀಡಿದ್ದರು. ಆದರೆ, ಯಾವುದೇ ಅಗತ್ಯ ಕ್ರಮ ವಹಿಸಿಲ್ಲ. ಕೆರೆಗಳ ಒತ್ತುವರಿ ಮಾಡಿಕೊಂಡಿರುವ ಖಾಸಗಿ ಕಂಪನಿಗಳ ಮಾಲೀಕರು ಅಥವಾ ಸಾರ್ವಜನಿಕರ ವಿರುದ್ಧ ತಹಶೀಲ್ದಾರ್ ಯಾವ ಕ್ರಮವನ್ನೂ ಕೈಗೊಂಡಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.

Last Updated : Mar 16, 2020, 6:44 PM IST

ABOUT THE AUTHOR

...view details