ಬೆಂಗಳೂರು: ರಾಜ್ಯಾದ್ಯಂತ ಶುಕ್ರವಾರ ಬೃಹತ್ ಕೋವಿಡ್ ಲಸಿಕೆ ಶಿಬಿರ ಆಯೋಜಿಸಲಾಗಿದೆ. ಬಿಬಿಎಂಪಿ ವ್ಯಾಪ್ತಿಯಲ್ಲು ನಾಳೆ ವಿಶೇಷವಾಗಿ ಲಸಿಕೆ ನೀಡಲಾಗುತ್ತದೆ. ಐದು ಲಕ್ಷ ಜನರಿಗೆ ಲಸಿಕೆ ನೀಡುವ ಗುರಿ ಇದೆ. ಒಂದೊಂದೂ ವಾರ್ಡಲ್ಲೂ ಸರಾಸರಿ ಹತ್ತು ಕೇಂದ್ರಗಳಲ್ಲಿ ಲಸಿಕೆ ನೀಡಲಾಗುತ್ತದೆ ಎಂದು ಬಿಬಿಎಂಪಿ ಮುಖ್ಯ ಆಯುಕ್ತ ಗೌರವ್ ಗುಪ್ತ ತಿಳಿಸಿದ್ದಾರೆ.
ಈ ಬಗ್ಗೆ ಗುರುವಾರ ಸಂಜೆ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ನಮಗೆ ರಾಜ್ಯದಿಂದ ಕೊಟ್ಟಿರುವ ಗುರಿ ಬಹಳ ಹೆಚ್ಚಾಗಿರುವುದರಿಂದ ಒಂದೊಂದು ವಾರ್ಡ್ನಲ್ಲಿ ಸರಾಸರಿ ಹತ್ತು ಕೇಂದ್ರಗಳನ್ನು ಸ್ಥಾಪಿಸುವ ನಿರ್ಧಾರ ಮಾಡಿಕೊಂಡಿದ್ದೇವೆ ಮತ್ತು ಅದರ ನಿಟ್ಟಿನಲ್ಲಿ ಸಿದ್ಧತೆ ಮಾಡಿಕೊಂಡಿದ್ದೇವೆ ಎಂದು ಗುಪ್ತ ತಿಳಿಸಿದ್ದಾರೆ.
ಈಗಾಗಲೇ ಲಸಿಕಾ ಮೇಳಕ್ಕೆ ಎಲ್ಲಾ ಸಿದ್ಧತೆ ಮಾಡಲಾಗಿದೆ. ಹೆಚ್ಚುವರಿ ಕೇಂದ್ರಕ್ಕೆ ಬೇಕಾದ ವ್ಯಾಕ್ಸಿನ್, ಸಿಬ್ಬಂದಿಗಳು, ಜನರನ್ನು ಒಟ್ಟು ಸೇರಿಸಲು ಕೆಲವು ಕಡೆ ಸಂಘಗಳ ಸಹಾಯ, ಎನ್ಜಿಒ ಜೊತೆ ಕೂಡಾ ಕೈ ಜೋಡಿಸಲಾಗಿದೆ. ಖಾಸಗಿ ಆಸ್ಪತ್ರೆಗಳ ಜೊತೆಯೂ ಕೈಜೋಡಿಸಲಾಗಿದ್ದು, ಸಿಬ್ಬಂದಿ ಸಹಾಯ ಪಡೆಯಲಿದ್ದೇವೆ. ಪಾಲಿಕೆ ಬ್ಯಾನರ್ ಅಡಿ, ಖಾಸಗಿ ಆಸ್ಪತ್ರೆಗಳಲ್ಲಿ ಉಚಿತವಾಗಿ ಸಿಗಲಿದೆ. ಬೆಳಗ್ಗೆ ಎಂಟರಿಂದ ಸಂಜೆ ಐದು ಗಂಟೆಯವರೆಗೆ ಹಾಗೂ ಆರೋಗ್ಯ ಕೇಂದ್ರಗಳಲ್ಲಿ ರಾತ್ರಿ 8 ರವರೆಗೆ ಲಸಿಕಾ ಕಾರ್ಯ ನಡೆಸಲಾಗುವುದು ಎಂದು ತಿಳಿಸಿದರು.
ಬೃಹತ್ ಲಸಿಕಾ ಅಭಿಯಾನದ ಬಗ್ಗೆ ಮಾಹಿತಿ ನೀಡಿದ ಬಿಬಿಎಂಪಿ ಆಯುಕ್ತ ಗೌರವ್ ಗುಪ್ತ ಹೋಟೆಲ್ ಕಾರ್ಮಿಕರು, ಗಾರ್ಮೆಂಟ್ ಕೆಲಸಗಾರರು ಸೇರಿದಂತೆ ಮೊದಲ ಡೋಸ್ ಪಡೆದಿರುವವರಿಗೆ ಆಯ್ದ ಗುಂಪುಗಳಿಗೆ ಮತ್ತೆ ಎರಡನೇ ಡೋಸ್‌ಗೆ ವಿಶೇಷ ವ್ಯವಸ್ಥೆಮಾಡಲಾಗಿದೆ.80% ರಷ್ಟು ಜನ ಮೊದಲ ಡೋಸ್ ಪಡೆದಿದ್ದಾರೆ. 19 ಲಕ್ಷ ಜನರಿಗೆ ಮೊದಲನೇ ಡೋಸ್ ಬೇಕಾಗಿದೆ. ಸದ್ಯ ಐಸಿಯುನಲ್ಲಿರುವವರು 32 ಮಂದಿ ಒಮ್ಮೆಯೂ ಲಸಿಕೆ ಪಡೆದಿಲ್ಲ. ಹಾಗಾಗಿ ಅವರ ಆರೋಗ್ಯ ಸ್ಥಿತಿ ಗಂಭೀರವಾಗಿದೆ. ಎರಡನೇ ಡೋಸ್ ಪಡೆದವರು ಯಾರೂ ಐಸಿಯುನಲ್ಲಿಲ್ಲ ಎಂದರು.