ಬೆಂಗಳೂರು:ವಿಶ್ವದೆಲ್ಲೆಡೆ ಹಬ್ಬಿರುವ ಕೊರೊನಾ ಭೀತಿಗೆ ರಾಜ್ಯದ ಕೋಳಿ ಸಾಕಾಣಿಕಾ ರೈತರು, ಉದ್ಯಮಿಗಳು ತೀವ್ರ ನಷ್ಟಕ್ಕೆ ಸಿಲುಕಿದ್ದಾರೆ ಎಂದು ಕುಕ್ಕುಟ ಮಹಾಮಂಡಳಿ ಅಧ್ಯಕ್ಷ ಡಿ.ಕೆ.ಕಾಂತರಾಜು ತಿಳಿಸಿದ್ದಾರೆ.
ಈ ಬಗ್ಗೆ ಮಾತನಾಡಿದ ಅವರು, ಫೆಬ್ರವರಿ ತಿಂಗಳಿಂದ ಇಂದಿನವರೆಗೆ ಒಂದು ಸಾವಿರ ಕೋಟಿ ರೂಪಾಯಿ ಕೋಳಿ ಉದ್ಯಮದಲ್ಲಿ ನಷ್ಟವಾಗಿದೆ ಎಂದರು. ಅಲ್ಲದೇ ಕರ್ನಾಟಕದಲ್ಲಿ ಒಟ್ಟು 15 ಸಾವಿರ ರೈತರು ಕೋಳಿ ಸಾಕಾಣಿಕೆ ಮಾಡುತ್ತಿದ್ದು, ಹದಿನೈದು ಲಕ್ಷ ಕುಟುಂಬಗಳು ಇದರ ಮೇಲೆ ಅವಲಂಬಿತವಾಗಿವೆ. ರೈತರು ಕೋಳಿ ಸಾಕಾಣಿಕೆ ಮಾಡಿ ಮಾರಾಟವಾಗದೆ, ಸಾಲ ಮರುಪಾವತಿಯೂ ಮಾಡಲಾಗದೆ ಸಂಕಷ್ಟ ಎದುರಿಸುತ್ತಿದ್ದಾರೆ ಎಂದರು.
ಈಟಿವಿ ಭಾರತದೊಂದಿಗೆ ಮಾತನಾಡಿದ ಕುಕ್ಕುಟ ಮಹಾಮಂಡಳಿ ಅಧ್ಯಕ್ಷ ಡಿ.ಕೆ.ಕಾಂತರಾಜು ಮಾರುಕಟ್ಟೆಯಲ್ಲಿ 80 ರೂಪಾಯಿ ಒಂದು ಕೆಜಿ ಕೋಳಿಯ ಬೆಲೆಯಾದ್ರೆ 10 ರೂಪಾಯಿ, 15 ರೂಪಾಯಿಗೆ ಮಾರಾಟವಾಗ್ತಿದೆ. ಬೆಂಗಳೂರು ಒಂದರಲ್ಲೇ ದಿನವೊಂದಕ್ಕೆ ನಾಲ್ಕು ಲಕ್ಷ ಕೆಜಿ ಕೋಳಿ ಮಾರಾಟವಾಗ್ತಿತ್ತು. ರಾಜ್ಯದಲ್ಲಿ ಒಟ್ಟು ಹತ್ತು ಲಕ್ಷ ಕೆಜಿ ದಿನಕ್ಕೆ ಮಾರಾಟವಾಗ್ತಿತ್ತು. ಆದ್ರೆ ಕೋಳಿ ಮಾಂಸ ಕೊಳ್ಳುವವರ ಸಂಖ್ಯೆ ಗಣನೀಯವಾಗಿ ಇಳಿದು ಹೋಗಿದ್ದು, ಕುಕ್ಕುಟೋದ್ಯಮ ಚೇತರಿಸಿಕೊಳ್ಳಲು ಬಹಳ ಸಮಯ ಬೇಕು. ಜನರು ತಪ್ಪು ಮಾಹಿತಿಯಿಂದ ಕೋಳಿ ಖರೀದಿಸುತ್ತಿಲ್ಲ ಎಂದು ಅಧ್ಯಕ್ಷರು ಬೇಸರ ವ್ಯಕ್ತಪಡಿಸಿದರು.
ಅಲ್ಲದೆ ಸಾಮಾಜಿಕ ಜಾಲತಾಣಗಳಲ್ಲಿ ಕೋಳಿಯಿಂದ ಕೊರೊನಾ ಎಂದು ಸುಳ್ಳು ಸುದ್ದಿ ಹಬ್ಬಿಸಿದವರ ಮೇಲೆ ಪ್ರಕರಣ ದಾಖಲಿಸಲಾಗಿದೆ ಎಂದರು. ಕೋಳಿಯಿಂದ ಈವರೆಗೆ ಯಾರೂ ಸಾವನ್ನಪ್ಪಿಲ್ಲ. ಸುಳ್ಳು ಸುದ್ದಿಯಿಂದ ಜನರು ಭಯಗೊಂಡು ಕೋಳಿ ಕೊಂಡು ತಿನ್ನುತ್ತಿಲ್ಲ. ಹಕ್ಕಿಜ್ವರ ಬಂದಾಗಲೂ ಇಷ್ಟು ನಷ್ಟವಾಗಿರಲಿಲ್ಲ. ಇತಿಹಾಸದಲ್ಲೇ ಇದೇ ಮೊದಲ ಬಾರಿಗೆ ಇಷ್ಟೊಂದು ಪ್ರಮಾಣದಲ್ಲಿ ನಷ್ಟವಾಗಿದೆ ಎಂದರು.