ಬೆಂಗಳೂರು:ರಾಜ್ಯ ವಿಧಾನಸಭಾ ಚುನಾವಣಾ ಕಣ ರಂಗೇರುತ್ತಿದ್ದಂತೆ ಹೆಲಿಕಾಪ್ಟರ್ಗಳಿಗೆ ಬೇಡಿಕೆ ಹೆಚ್ಚಾಗಿದೆ. ಚುನಾವಣೆ ಸಮೀಪಿಸುತ್ತಿರುವುದರಿಂದ ನಾಯಕರುಗಳು ತುರ್ತು ಪ್ರಚಾರ, ಪ್ರವಾಸಕ್ಕೆ ಹೆಲಿಕಾಪ್ಟರ್ಗಳತ್ತ ಮುಖ ಮಾಡಲಾರಂಭಿಸಿದ್ದಾರೆ.
ರಾಜ್ಯದಲ್ಲಿ 100ಕ್ಕೂ ಅಧಿಕ ಹೆಲಿಕಾಪ್ಟರ್ಗಳು ಹಾಗೂ ಮಿನಿ ವಿಮಾನಗಳಿವೆ. ಚುನಾವಣೆ ಪ್ರಚಾರ ಮತ್ತು ಸ್ಟಾರ್ ಪ್ರಚಾರಕರಿಗಾಗಿ ಹೆಲಿಕಾಪ್ಟರ್ಗಳಿಗೆ ಬೇಡಿಕೆ ಬಂದಿದ್ದು, ರಾಜಕಾರಣಿಗಳು ಹೊರ ರಾಜ್ಯಗಳಿಂದ ಕರ್ನಾಟಕಕ್ಕೆ ಹೆಲಿಕಾಪ್ಟರ್ಗಳನ್ನು ತರಿಸಲಾರಂಭಿಸಿದ್ದಾರೆ. ನೆರೆಯ ಗೋವಾ, ಮಹಾರಾಷ್ಟ್ರ, ಆಂಧ್ರಪ್ರದೇಶ, ಜೈಪುರ, ದೆಹಲಿ, ಕೋಲ್ಕತಾ ಹಾಗೂ ಕೊಚ್ಚಿಯಿಂದ ಹೆಲಿಕಾಪ್ಟರ್ಗಳನ್ನು ತರಿಸಿಕೊಳ್ಳಲಾಗ್ತಿದೆ. ಈಗಾಗಲೇ ಸರಿಸುಮಾರು 150 ಹೆಲಿಕಾಪ್ಟರ್ಗಳು ಹಾಗೂ ಮಿನಿ ವಿಮಾನಗಳನ್ನ ರಾಜಕಾರಣಿಗಳು ಬುಕ್ಕಿಂಗ್ ಮಾಡಿದ್ದಾರೆ ಎಂದು ಹೇಳಲಾಗುತ್ತಿದೆ.