ನೆಲಮಂಗಲ:ಕೆಲ ದಿನಗಳಿಂದ ಸುರಿಯುತ್ತಿರುವ ಮಳೆಯಿಂದ ಮನೆಯ ಮೇಲೆ ಬೃಹತ್ ಕಾಂಪೌಂಡ್ ಗೋಡೆ ಕುಸಿದು ಅಣ್ಣ - ತಂಗಿ ಸಾವನ್ನಪ್ಪಿದ್ದು, ಮತ್ತೋರ್ವ ಗಂಭೀರವಾಗಿ ಗಾಯಗೊಂಡಿರುವ ಘಟನೆ ಬಿನ್ನಮಂಗಲ ಗ್ರಾಮದಲ್ಲಿ ಘಟನೆ ಮುಂಜಾನೆ ನಡೆದಿದೆ.
ಕಾಂಪೌಂಡ್ ಕುಸಿದು ಮನೆಯ ಮೇಲೆ ಬಿದ್ದಿದ್ದರಿಂದ ಅವಶೇಷಗಳಡಿ ಸಿಲುಕಿ ಅಣ್ಣ - ತಂಗಿ ಸಾವನ್ನಪ್ಪಿದ್ದಾರೆ. ಮೃತರು ತುಮಕೂರು ಜಿಲ್ಲೆ ಸಿ.ಎಸ್. ಪುರ ಮೂಲದ ವೇಣುಗೋಪಾಲ (22), ಕಾವ್ಯ(20) ಎಂದು ಗುರುತಿಸಲಾಗಿದೆ. ತೀವ್ರ ಗಾಯಗೊಂಡಿದ್ದ ಸಂಪತ್ ಅವರನ್ನು ನೆಲಮಂಗಲ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.
ಮನೆ ಮೇಲೆ ಬೃಹತ್ ಕಾಂಪೌಂಡ್ ಕುಸಿದು ಅಣ್ಣ - ತಂಗಿ ಬಲಿ ತಂಗಿ ಕಾವ್ಯ ಬಿಕಾಂ ವ್ಯಾಸಂಗ ಮಾಡುತ್ತಿದ್ದು, ಆಕೆಯ ವಿದ್ಯಾಭ್ಯಾಸಕ್ಕಾಗಿ ವೇಣು ಗೋಪಾಲ್ ನೆಲಮಂಗಲದ ಬಿನ್ನಮಂಗಲದಲ್ಲಿ ಬಾಡಿಗೆ ಮನೆ ಮಾಡಿಕೊಂಡಿದ್ದ. ವೇಣುಗೋಪಾಲ್ ಖಾಸಗಿ ಕಂಪನಿಯೊಂದರಲ್ಲಿ ಕೆಲಸ ಮಾಡುತ್ತಿದ್ದ ಎಂದು ತಿಳಿದು ಬಂದಿದೆ.
ಕಾಂಪೌಂಡ್ ಪಕ್ಕದಲ್ಲಿ ಎಂಸ್ಯಾಂಡ್ ತುಂಬಿಸಲಾಗಿತ್ತು, ಕಳೆದ ಕೆಲವು ದಿನಗಳಿಂದ ಸುರಿಯುತ್ತಿರುವ ಮಳೆಯಿಂದಾಗಿ ಕಾಂಪೌಂಡ್ ಕುಸಿದು ಶೀಟ್ ಮನೆ ಮೇಲೆ ಬಿದ್ದಿದೆ. ಅವಶೇಷಗಳ ಸಿಲುಕಿದ್ದ ಇಬ್ಬರ ಶವಗಳನ್ನು ಅಗ್ನಿಶಾಮಕ ದಳದ ಸಿಬ್ಬಂದಿ ಹೊರತೆಗೆದಿದ್ದಾರೆ. ನೆಲಮಂಗಲ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.