ಬೆಂಗಳೂರು:ಸರ್ಕಾರದ ವಿರುದ್ದ ಬಂಡೆದ್ದ ಅಂಗನವಾಡಿ ಕಾರ್ಯಕರ್ತೆಯರು ಸಹಸ್ರಾರು ಸಂಖ್ಯೆಯ ಮಹಿಳೆಯರು ಬೆಂಗಳೂರು ಚಲೋ ನಡೆಸಿದ್ದಾರೆ. ರಾಜ್ಯ ಅಂಗನವಾಡಿ ಕಾರ್ಯಕರ್ತೆಯರು ಮತ್ತು ಸಹಾಯಕಿಯರ ಫೆಡರೇಶನ್ ಎಐಟಿಯುಸಿ ವತಿಯಿಂದ ಪ್ರತಿಭಟನೆ ನಡೆಸುತ್ತಿದ್ದಾರೆ.
ಸಂಗೊಳ್ಳಿ ರಾಯಣ್ಣ ರೈಲ್ವೇ ನಿಲ್ದಾಣದಿಂದ ಫ್ರೀಡಂಪಾರ್ಕ್ ವರೆಗೆ ಪ್ರತಿಭಟನಾ ರ್ಯಾಲಿ ನಡೆಸಿದ್ದಾರೆ. ವಿವಿಧ ಜಿಲ್ಲೆಗಳ ಸಹಸ್ರಾರು ಕಾರ್ಯಕರ್ತೆಯರು ರ್ಯಾಲಿ ನಡೆಸಿದ ಹಿನ್ನೆಲೆ ಸಂಗೊಳ್ಳಿ ರಾಯಣ್ಣ ಮೇಲ್ಸೇತುವೆ ಮೇಲೆ ವಾಹನ ದಟ್ಟಣೆ ಉಂಟಾಯಿತು. ರ್ಯಾಲಿ ಬಳಿಕ ಮಾತನಾಡಿದ ಸಂಘದ ಪ್ರಧಾನ ಕಾರ್ಯದರ್ಶಿ, ಎಮ್ ಜಯಮ್ಮ, ಪಿಂಚಣಿ ಸೌಲಭ್ಯ ನೀಡಬೇಕು, ಗೌರವ ಧನ ಹೆಚ್ಚಿಸಬೇಕು ಎಂದು ಆಗ್ರಹಿಸಿದರು. ತಕ್ಷಣವೇ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖಾ ಸಚಿವೆ ಶಶಿಕಲಾ ಜೊಲ್ಲೆ ಸ್ಥಳಕ್ಕೆ ಭೇಟಿ ನೀಡಿ ಮನವಿ ಸ್ವೀಕರಿಸಬೇಕೆಂದು ಒತ್ತಾಯಿಸಿದರು.
ಅಂಗನವಾಡಿ ಕಾರ್ಯಕರ್ತೆಯರ ಬೇಡಿಕೆಗಳು:
1)ಪಿಂಚಣಿ ಸೌಲಭ್ಯ- 2011 ರಲ್ಲಿ ಜಾರಿಗೆ ತಂದ ಎನ್ಪಿಎಸ್ ಯೋಜನೆಗೆ 2015 ರಿಂದ ನೇಮಕಾತಿಯಾದವರನ್ನು ಯಾರಿಗೂ ಈ ಯೋಜನೆಗೆ ನೋಂದಾಯಿಸಿಲ್ಲ. 2015 ರ ನಂತರ ನಿವೃತ್ತಿಯಾದ 2250 ಕಾರ್ಯಕರ್ತೆಯರಿಗೆ ಮತ್ತು ಸಹಾಯಕಿಯರಿಗೆ ಇಲ್ಲಿಯವರೆಗೆ ಇಡಿಗಂಟು ಹಣವನ್ನೂ ಬಿಡುಗಡೆ ಮಾಡಿಲ್ಲ. ಹಾಗೂ ಈ ನಿವೃತ್ತ ಕಾರ್ಯಕರ್ತೆ ಮತ್ತು ಸಹಾಯಕಿಯರಿಗೆ ತಿಂಗಳ ಕನಿಷ್ಠ ರೂ. 5000 ಪಿಂಚಣಿ ಸೌಲಭ್ಯ ನೀಡಬೇಕು, ಎಲ್ಐಸಿ ಆಧಾರಿತ ಪಿಂಚಣಿ ಸೌಲಭ್ಯ ನೀಡಬೇಕೆಂದು ಒತ್ತಾಯಿಸಿದರು.
2) ಸೇವಾ ಹಿರಿತನ ಆಧಾರದಲ್ಲಿ ಗೌರವಧನ ದೀರ್ಘ ಸೇವೆ ಸಲ್ಲಿಸಿದವರು, ಹಾಗೂ ಹೊಸದಾಗಿ ಸೇವೆಗೆ ಸೇರಿದವರಿಗೆ ಒಂದೇ ಮೊತ್ತದ ಗೌರವಧನ ನೀಡಲಾಗ್ತಿದ್ದು, ಗೋವಾ ಮಾದರಿಯಲ್ಲಿ ಸೇವಾ ಹಿರಿತನದ ಆಧಾರದಲ್ಲಿ ಗೌರವ ಧನ ಜಾರಿ ಮಾಡಬೇಕೆಂದು ಬೇಡಿಕೆ ಸಲ್ಲಿಸಿದರು.