ಚರ್ಮರೋಗ ತಜ್ಞೆ ಡಾ.ಕಲಾ ವಿಮಲ್ ಬೆಂಗಳೂರು:ಪ್ರಖರ ಬೇಸಿಗೆ ಕಾಲದ ಅವಧಿಯಲ್ಲೇ ಮಳೆಗಾಲ ಬರುವ ಹಿನ್ನೆಲೆ ಮಾನ್ಸೂನ್ ಕಾಲದಲ್ಲಿ ಸರಿಯಾಗಿ ಮಳೆ ಸುರಿಯದಿದ್ದರೆ ಉರಿ ಬಿಸಿಲು ಜನರನ್ನು ಹೈರಾಣಾಗಿಸುತ್ತದೆ. ಸದ್ಯ ರಾಜ್ಯದಲ್ಲಿ ಕಂಡುಬರುತ್ತಿರುವ ವಾತಾವರಣವೂ ಅದೇ ಆಗಿದೆ. ಕೆಲ ಭಾಗದಲ್ಲಿ ಮಳೆ ಭಾರಿ ಪ್ರಮಾಣದಲ್ಲಿ, ಮತ್ತೆ ಕೆಲ ಭಾಗದಲ್ಲಿ ಮಧ್ಯಮ ಪ್ರಮಾಣದಲ್ಲಿ ಸುರಿದಿದೆ. ಕೆಲವೆಡೆ ಮಳೆ ಆಗಿಯೇ ಇಲ್ಲ. ಆದರೆ ಮುಂದಿನ ಎರಡು ತಿಂಗಳು ಮಳೆಗಾಲವೇ ಇರಲಿದ್ದು, ಈ ಸಂದರ್ಭದಲ್ಲಿ ನಿರೀಕ್ಷಿತ ಪ್ರಮಾಣದಲ್ಲಿ ಮಳೆಯಾಗುವ ಸಾಧ್ಯತೆ ಕಡಿಮೆ ಎನ್ನಲಾಗುತ್ತಿದೆ.
ಮಾನ್ಸೂನ್ ಅಂದರೆ ವಾತಾವರಣದಲ್ಲಿ ಬದಲಾವಣೆ, ವಿವಿಧ ರೋಗಗಳು ಕಾಡುವ ಸಮಯವೂ ಹೌದು. ಈ ಮಧ್ಯೆ ಬಿಸಿಲು - ಮಳೆ ಆಟ ಮುಂದುವರಿದರೆ ಜನ ಸಾಕಷ್ಟು ಸಮಸ್ಯೆಗೆ ಒಳಗಾಗುತ್ತಾರೆ. ಮಳೆಗಾಲದಲ್ಲಿ ಆಮ್ಲೀಯ ಮಳೆ ಸುರಿಯುವುದರಿಂದ ಮಹಿಳೆಯರಿಗೆ ಇದು ಸಾಕಷ್ಟು ಕಿರಿ ಕಿರಿ ಉಂಟುಮಾಡುತ್ತದೆ. ಉದ್ಯೋಗ ಇಲ್ಲವೇ ಅನ್ಯ ಕಾರಣಗಳಿಂದ ಮನೆಯಿಂದ ಹೊರ ಬರುವ ಮಹಿಳೆಯರು ಮಳೆಯನ್ನು ಎದುರಿಸಲೇಬೇಕು.
ಈ ಮಳೆ ಮಧ್ಯೆ ಬಿಸಿಲು ಸಹ ಕಾಡಿದರೆ ಸಾಕಷ್ಟು ಮಾದರಿಯ ಕೂದಲು ಹಾಗೂ ಚರ್ಮದ ಸಮಸ್ಯೆಗಳು ಸಹ ಕಾಣಿಸಿಕೊಳ್ಳುತ್ತವೆ. ಮಳೆ ನೀರಿನ ಆಮ್ಲೀಯ ಗುಣದಿಂದ ರಕ್ಷಣೆ ಪಡೆಯಲು ತ್ವಚೆ ಮತ್ತು ಕೂದಲಿನ ಕಾಳಜಿ ವಹಿಸುವುದು ಮುಖ್ಯ. ಅದಕ್ಕಾಗಿ ಸೂಕ್ತವಾದ ಆರೈಕೆ ಬಗ್ಗೆ ತಿಳಿದುಕೊಳ್ಳುವುದು ಒಳ್ಳೆಯದು.
ಮಾನ್ಸೂನ್ ಋತುವಿನಲ್ಲಿ ತ್ವಚೆ ಎದುರಿಸುವ ಸವಾಲುಗಳು:
1. ಫಂಗಲ್ ಸೋಂಕುಗಳು: ಹೆಚ್ಚಿದ ಆರ್ದ್ರತೆ ಮತ್ತು ಬೆವರಿನಿಂದ ದೇಹದ ಕೆಲವು ಮಡಿಕೆಗಳಲ್ಲಿ ಅಂದರೆ ತೊಡೆಸಂದು, ಕಂಕುಳು ಮತ್ತು ಸ್ತನಗಳ ಅಡಿಯಲ್ಲಿ ಶಿಲೀಂಧ್ರಗಳ ಸೋಂಕು ಕಾಣಿಸಿಕೊಳ್ಳುತ್ತದೆ. ಈ ಜಾಗಗಳಿಗೆ ಆಂಟಿಫಂಗಲ್ ಪೌಡರ್ ಅನ್ನು ನಿಯಮಿತವಾಗಿ ಅನ್ವಯಿಸುವ ಮೂಲಕ ಈ ಸಮಸ್ಯೆಯನ್ನು ಪರಿಹರಿಸಬಹುದು.
2. ಮೊಡವೆ ಬ್ರೇಕ್ ಔಟ್: ಮಾನ್ಸೂನ್ ಸಮಯದಲ್ಲಿ ಹೆಚ್ಚಿದ ಆರ್ದ್ರತೆಯಿಂದ ಹೆಚ್ಚು ಬೆವರುತ್ತದೆ. ಇದರಿಂದ ಬ್ಯಾಕ್ಟೀರಿಯಾಗಳು ಬೆಳೆಯುತ್ತವೆ ಮತ್ತು ಮೊಡವೆ ಹುಟ್ಟಲು ಸೂಕ್ತವಾದ ವಾತಾವರಣ ಸಿದ್ಧಗೊಳ್ಳುತ್ತದೆ. ಕೊಳಕು, ಹೆಚ್ಚುವರಿ ಎಣ್ಣೆ ಮತ್ತು ಬೆವರನ್ನು ತೊಡೆದುಹಾಕಲು ನಿಮ್ಮ ಮುಖವನ್ನು ಸ್ವಚ್ಛಗೊಳಿಸುತ್ತಿರಬೇಕು. ಮೊಡವೆಗಳಿಗೆ ಸರಿಯಾದ ಮುಖದ ಕ್ಲೆನ್ಸರ್ ಅನ್ನು ಬಳಸುವುದರಿಂದ ಅದು ಕಡಿಮೆಯಾಗುತ್ತದೆ ಮತ್ತು ಎಣ್ಣೆಯಂಶವನ್ನು ಪರಿಣಾಮಕಾರಿಯಾಗಿ ಕಡಿಮೆ ಮಾಡುತ್ತದೆ.
3. ಆಕ್ಸಿಲರಿ ಬ್ರೋಮಿಡ್ರೋಸಿಸ್ (ಮಾಲೋಡೋರಸ್ ಆರ್ಮ್ಪಿಟ್ಸ್): ಬೆವರು ಗ್ರಂಥಿಗಳಿಗೆ ತಡೆ ಉಂಟಾದಾಗ ಆರ್ಮ್ಪಿಟ್ಸ್ಗಳಿಂದ ಅಹಿತಕರ ವಾಸನೆ ಹೊರಹೊಮ್ಮಬಹುದು. ಆಂಟಿಬ್ಯಾಕ್ಟೀರಿಯಲ್ ಸೋಪ್, ಆಕ್ಸಿಲರಿ ಡಿಯೋಡರೆಂಟ್‌ಗಳು, ಆಂಟಿಸೆಪ್ಟಿಕ್ ವಾಶ್‌ಗಳು ಮತ್ತು ಶಿಫಾರಸು ಮಾಡಲಾದ ಆಂಟಿ ಬಯೋಟಿಕ್ ಆಯಿಂಟ್ ಮೆಂಟ್ಗಳನ್ನು ನಿಮ್ಮ ನೈರ್ಮಲ್ಯ ದಿನಚರಿಯಲ್ಲಿ ಸೇರಿಸುವ ಮೂಲಕ ಈ ಸಮಸ್ಯೆಯನ್ನು ಪರಿಹರಿಸಬಹುದು.
4. ಬ್ರೋಮಿಡ್ರೋಸಿಸ್ ಪಾದಗಳು (ದುರ್ಗಂಧದ ಪಾದಗಳು): ಮಳೆ ನೀರಿಗೆ ಒಡ್ಡಿಕೊಳ್ಳುವುದರಿಂದ ಒದ್ದೆಯಾಗುವ ನಿಮ್ಮ ಪಾದಗಳು ಅಹಿತಕರ ವಾಸನೆಯನ್ನು ಉಂಟುಮಾಡಬಹುದು. ಇದನ್ನು ಕಡಿಮೆ ಮಾಡಲು ಮಳೆಯಿಂದ ಮರಳಿದ ಬಳಿಕ ನಿಮ್ಮ ಪಾದಗಳನ್ನು ಸಾಬೂನು ಮತ್ತು ನೀರಿನಿಂದ ಚೆನ್ನಾಗಿ ತೊಳೆಯಿರಿ. ಅದೇ ರೀತಿ ನಿಮ್ಮ ಬೂಟುಗಳು ಮತ್ತು ಸಾಕ್ಸ್‌ಗಳಿಗೆ ಆಂಟಿಫಂಗಲ್ ಪೌಡರ್ ಬಳಸಿ. ನಿಗದಿಪಡಿಸಿದ ಅವಧಿಗೆ ಆಂಟಿಬಯೋಟಿಕ್ ಜೆಲ್ಅನ್ನು ಅನ್ವಯಿಸಿ.
ಚರ್ಮದ ಆರೈಕೆ:
1. ಸೌಮ್ಯವಾದ, ಕ್ಲೆನ್ಸರ್ ಮುಕ್ತ ಸೋಪ್ ಬಳಸಿ: ತ್ವಚೆಯ ನೈಸರ್ಗಿಕ ಎಣ್ಣೆಯಂಶಗಳನ್ನು ಸಂರಕ್ಷಿಸಲು ಹಾಗೂ ತ್ವಚೆಯನ್ನು ಸ್ವಚ್ಛಗೊಳಿಸಲು, ಕಠಿಣ ರಾಸಾಯನಿಕಗಳಿಲ್ಲದ ಸೌಮ್ಯವಾದ ಕ್ಲೆನ್ಸರ್ ಸೋಪ್ ಆಯ್ಕೆಮಾಡಿ.
2. ಸೂರ್ಯನ ಕಿರಣಗಳಿಂದ ರಕ್ಷಣೆ ಪಡೆಯಿರಿ:ಮಾನ್ಸೂನ್ ಸಮಯದಲ್ಲಿ, ನಿಮ್ಮ ದೇಹದ ಉಡುಪಿನಿಂದ ಹೊರಬರುವ ಭಾಗಗಳಿಗೆ ಕನಿಷ್ಠ 30 SPF ನ ಸನ್‌ಸ್ಕ್ರೀನ್ ಅನ್ನು ಬಳಸುವ ಮೂಲಕ ಹಾನಿಕಾರಕ ಯುವಿ ಕಿರಣಗಳಿಂದ ನಿಮ್ಮ ತ್ವಚೆಯನ್ನು ರಕ್ಷಿಸಿ.
3. ಹೈಡ್ರೇಟ್ ಮತ್ತು ಮಾಯಿಶ್ಚರೈಸ್: ಮೊಡವೆ ಮುಕ್ತ ಮಾಯಿಶ್ಚರೈಸರ್ ಅನ್ನು ಬಳಸಿ, ನಿಮ್ಮ ತ್ವಚೆ ಮತ್ತು ತುಟಿಗಳನ್ನು ತೇವಗೊಳಿಸಿ. ಇದರಿಂದ ನಿರ್ಜಲೀಕರಣದ ಸಮಸ್ಯೆಗಳಿಂದ ದೂರವಿರಿ. ಇದು ನಿಮ್ಮ ತ್ವಚೆಯನ್ನು ಪೋಷಿಸುತ್ತದೆ ಮತ್ತು ನೈಸರ್ಗಿಕ ತೇವಾಂಶದ ಸಮತೋಲನವನ್ನು ಉಳಿಸಿಕೊಳ್ಳುತ್ತದೆ.
4. ಸಾಕಷ್ಟು ನೀರಿನಂಶ ಇರುವಂತೆ ನೋಡಿಕೊಳ್ಳಿ: ನಿಮ್ಮ ತ್ವಚೆಯನ್ನು ಸಮರ್ಪಕವಾಗಿ ಹೈಡ್ರೀಕರಿಸಲು, ದಿನವಿಡೀ ಸಾಕಷ್ಟು ಪ್ರಮಾಣದ ನೀರು ಕುಡಿಯಿರಿ. ಇದು ತ್ವಚೆಯನ್ನು ಪೋಷಿಸುವುದು ಮಾತ್ರವಲ್ಲ, ದೇಹದ ವಿಷವನ್ನು ಹೊರಹಾಕುತ್ತದೆ. ತ್ವಚೆಯ ಸಮಸ್ಯೆಗಳ ಅಪಾಯವನ್ನು ಕಡಿಮೆ ಮಾಡುತ್ತದೆ.
5. ದೈನಂದಿನ ಸ್ನಾನಕ್ಕೆ ಒತ್ತು ನೀಡಿ: ಆರ್ದ್ರ ಸ್ಥಿತಿಯಲ್ಲಿ ಬೆಳೆಯುವ ಶಿಲೀಂಧ್ರಗಳ ಸೋಂಕನ್ನು ತಡೆಗಟ್ಟಲು ನಿಯಮಿತ ಸ್ನಾನವು ನೆರವಾಗುತ್ತದೆ. ಸ್ನಾನ ಮಾಡುವಾಗ ಸೌಮ್ಯವಾದ ಸೋಪ್ ಉಪಯೋಗಿಸಿ ಮತ್ತು ಸ್ನಾನದ ನಂತರ ನಿಮ್ಮ ದೇಹವನ್ನು ಸಂಪೂರ್ಣವಾಗಿ ಒಣಗಿಸಿ.
ಕೂದಲು ಮತ್ತು ನೆತ್ತಿಯ ಆರೈಕೆ:
1. ಡ್ಯಾಂಡ್ರಫ್ ತಡೆಗಟ್ಟುವಿಕೆ: ಮಳೆಗಾಲದಲ್ಲಿ ಹೆಚ್ಚಿದ ಆರ್ದ್ರತೆ ಮತ್ತು ಬೆವರು ಶೇಖರಣೆಯಿಂದ ತಲೆಹೊಟ್ಟು ಹೆಚ್ಚಾಗುತ್ತದೆ. ಕೆಟೋಕೊನಜೋಲ್ ಶಾಂಪೂವನ್ನು ಬಳಸುವ ಮೂಲಕ ಈ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಿ. ನಿಯಮಿತವಾಗಿ ನಿಮ್ಮ ಕೂದಲನ್ನು ಸ್ವಚ್ಛಗೊಳಿಸಿ, ಅದನ್ನು ಸಂಪೂರ್ಣವಾಗಿ ಒಣಗಿಸಿ. ತಲೆಹೊಟ್ಟು ಕಡಿಮೆ ಮಾಡಲು ಮತ್ತು ಶಿಲೀಂಧ್ರಗಳ ಸೋಂಕನ್ನು ನಿವಾರಿಸಲು ಒದ್ದೆಯಾದ ಕೂದಲನ್ನು ಕಟ್ಟದಿರಿ.
2. ಲೈಸ್ ಇನ್ಫೆಸ್ಟೇಷನ್ ನಿಭಾಯಿಸಿ:ಮಳೆಗಾಲದಲ್ಲಿ ಒದ್ದೆಯಾದ ಕೂದಲು ಮತ್ತು ನೈರ್ಮಲ್ಯದ ಕೊರತೆಯಿಂದ ಲೈಸ್ ಇನ್ ಫೆಸ್ಟೇಷನ್ಗಳು ಬಾಧಿಸುತ್ತವೆ. ಈ ನಿರಂತರ ಸಮಸ್ಯೆಯನ್ನು ನಿರ್ವಹಿಸಲು ವಿಶೇಷವಾಗಿ ವಿನ್ಯಾಸಗೊಳಿಸಲಾದ ಆಂಟಿ-ಲೈಸ್ ಶಾಂಪೂಗಳನ್ನು ಬಳಸಿ ಮತ್ತು ಈ ಸಮಸ್ಯೆಗೆ ಮುಕ್ತಿ ಹೇಳಿ.
3. ನೆತ್ತಿಯ ಫಂಗಲ್ ಸೋಂಕುಗಳನ್ನು ಪರಿಹರಿಸುವುದು: ಮಾನ್ಸೂನ್ ಸಮಯದಲ್ಲಿ ನೆತ್ತಿಯ ಮೇಲೆ ಫಂಗಲ್ ಸೋಂಕು ಕಾಣಿಸಿಕೊಳ್ಳುವುದು ಸಾಮಾನ್ಯವಾಗಿದೆ. ಆಂಟಿಫಂಗಲ್ ಶಾಂಪೂಗಳನ್ನು ಬಳಸುವ ಮೂಲಕ ಈ ಸಮಸ್ಯೆಗೆ ವಿದಾಯ ಹಾಡಬಹುದು. ಅಗತ್ಯವಿದ್ದರೆ ಆಂಟಿಫಂಗಲ್ ಮಾತ್ರೆಗಳನ್ನು ಶಿಫಾರಸು ಮಾಡುವ ಚರ್ಮರೋಗ ವೈದ್ಯರನ್ನು ಸಂಪರ್ಕಿಸಿ.
4. ಕೂದಲು ಉದುರುವಿಕೆಯನ್ನು ಕಡಿಮೆ ಮಾಡುವುದು:ಸರಿಯಾದ ಸ್ವಚ್ಛತಾ ಕ್ರಮ ಅನುಸರಿಸದಿರುವುದು, ಮಳೆನೀರು ನೆತ್ತಿಯ ಮೇಲೆ ಉಳಿಯುವಂತೆ ಮಾಡುವುದು ಕೂದಲು ಉದುರುವಿಕೆಗೆ ಕಾರಣವಾಗಬಹುದು. ಕೂದಲಿನ ಎಳೆಗಳನ್ನು ಪೋಷಿಸುವ ಮತ್ತು ಬಲಪಡಿಸುವ ಸೌಮ್ಯವಾದ ಶ್ಯಾಂಪೂಗಳು ಮತ್ತು ಕಂಡಿಷನರ್‌ಗಳನ್ನು ಬಳಸಿಕೊಂಡು ನಿಮ್ಮ ಕೂದಲಿನ ಆರೋಗ್ಯವನ್ನು ಕಾಪಾಡಿ.
ಚರ್ಮ, ಕೂದಲು ರಕ್ಷಣೆಗೆ ಆದ್ಯತೆ ಕೊಡಿ:ಹೇರ್ ಲೈನ್ ಇಂಟರ್ ನ್ಯಾಷನಲ್ ಹೇರ್ ಮತ್ತು ಸ್ಕಿನ್ ರಿಸರ್ಚ್ ಮತ್ತು ಟ್ರೀಟ್ಮೆಂಟ್ ಸೆಂಟರ್ನ ಟ್ರೈಕಾಲಜಿಸ್ಟ್ ಮತ್ತು ಚರ್ಮರೋಗ ತಜ್ಞೆ ಡಾ. ಕಲಾ ವಿಮಲ್ ಚರ್ಮ ಹಾಗೂ ಕೂದಲು ಸಂರಕ್ಷಣೆ ಕುರಿತು ಮಾತನಾಡಿ, ಅತಿಯಾದ ನೊರೆ ಬರಿಸುವ ಶ್ಯಾಂಪುಗಳನ್ನು ಬಳಸಬೇಡಿ, ಏಕೆಂದರೆ ಅವು ನೈಸರ್ಗಿಕ ತೈಲದ ಅಂಶಗಳನ್ನು ತೆಗೆದುಹಾಕುತ್ತವೆ. ಇದು ಶುಷ್ಕತೆ ಮತ್ತು ಹಾನಿಗೆ ಕಾರಣವಾಗುತ್ತದೆ ಎಂದು ತಿಳಿಸಿದ್ದಾರೆ.
ಹೇರ್ ಡ್ರೈಯರ್‌ಗಳ ಬಳಕೆಯನ್ನು ಕಡಿಮೆ ಮಾಡಿ ಮತ್ತು ನಿಮ್ಮ ಕೂದಲಿಗೆ ಅತಿಯಾದ ಶಾಖಕ್ಕೆ ಒಡ್ಡಿಕೊಳ್ಳುವ ಬದಲು ಸಾಧ್ಯವಾದಾಗಲೆಲ್ಲಾ ಗಾಳಿಯಲ್ಲೇ ಒಣಗಿಸಿ. ನಿಮ್ಮ ಚರ್ಮ ಮತ್ತು ಕೂದಲಿನ ಒಟ್ಟಾರೆ ಆರೋಗ್ಯಕ್ಕಾಗಿ ಜೀವಸತ್ವಗಳು, ಖನಿಜಗಳು ಮತ್ತು ಉತ್ಕರ್ಷಣ ನಿರೋಧಕಗಳು ಸಮೃದ್ಧವಾಗಿರುವ ಸಮತೋಲಿತ ಆಹಾರವನ್ನು ಸೇವಿಸಿ. ನಿಯಮಿತವಾಗಿ ನಿಮ್ಮ ಕೈಗಳನ್ನು ತೊಳೆಯುವ ಮೂಲಕ ಮತ್ತು ನಿಮ್ಮ ಸುತ್ತಮುತ್ತಲಿನ ಪರಿಸರವನ್ನು ಸ್ವಚ್ಛವಾಗಿಟ್ಟುಕೊಳ್ಳುವ ಮೂಲಕ ಉತ್ತಮ ನೈರ್ಮಲ್ಯವನ್ನು ಕಾಪಾಡಿ ಎಂದು ಸಲಹೆ ನೀಡಿದ್ದಾರೆ.
ಇದು ಚರ್ಮ ಮತ್ತು ನೆತ್ತಿಯ ಸೋಂಕಿನ ಅಪಾಯವನ್ನು ಕಡಿಮೆ ಮಾಡುತ್ತದೆ. ಸರಿಯಾದ ಗಾಳಿಯ ಪ್ರಸರಣಕ್ಕೆ ಅನುವು ಮಾಡಿಕೊಡಿ. ಬೆವರು ಮತ್ತು ಅಸ್ವಸ್ಥತೆಯನ್ನು ಕಡಿಮೆ ಮಾಡಲು ಸಡಿಲವಾದ, ಗಾಳಿಯಾಡುವ ಬಟ್ಟೆಗಳನ್ನು ಧರಿಸಿ ಎಂದು ಮಾಹಿತಿ ನೀಡಿದ್ದಾರೆ.
ಇದನ್ನೂ ಓದಿ:ರಾತ್ರಿ ಉತ್ತಮ ನಿದ್ದೆ ಮಾಡಲು ಸಾಧ್ಯವಾಗುತ್ತಿಲ್ವಾ: ಹಾಗಾದ್ರೆ ನಿಮ್ಮ ಜೀವನಶೈಲಿ ಬದಲಾಯಿಸಿಕೊಳ್ಳಿ! ಏಕೆಂದರೆ?