ಬೆಂಗಳೂರು:ಪ್ರತಿ ಜಮೀನಿಗೂ ಹದ್ದುಬಸ್ತು ಅವಶ್ಯಕವಾಗಿ ಬೇಕೇಬೇಕು. ಭೂಮಾಪಕರು ಜಮೀನಿಗೆ ಬಂದು ಸರ್ವೆ ದಾಖಲೆಗಳ ಆಧಾರದ ಮೇಲೆ ಜಮೀನು ಅಳತೆ ಮಾಡಿ ಅಳಿಸಿ ಹೋಗಿರುವ ಗಡಿ ಭಾಗವನ್ನು ಪುನಃ ಪತ್ತೆ ಹಚ್ಚಿ ಗುರುತು ಮಾಡುವುದೇ ಹದ್ದುಬಸ್ತು.
ಪೋಡಿಯಾದ ಜಮೀನು ಅಥವಾ ಜಾಗವನ್ನು ಬೇರೆಯವರು ಒತ್ತುವರಿ ಮಾಡಿದ್ದರೆ ಅಳತೆ ಮಾಡಿ ನಿಖರ ಗಡಿ ಗುರುತಿಸಿ ಬಂದೋಬಸ್ತ್ ಮಾಡಿಕೊಳ್ಳುವುದೇ ಹದ್ದುಬಸ್ತು. ಒತ್ತುವರಿಯಾಗಿರುವ ಜಮೀನಿಗೆ ಅರ್ಜಿ ಹೇಗೆ ಸಲ್ಲಿಸಬೇಕು. ಯಾವಾಗ ಅರ್ಜಿ ಸಲ್ಲಿಸಬೇಕೆಂಬುದರ ಬಗ್ಗೆ ಮಾಹಿತಿ ಕೊರತೆ ಇರುತ್ತದೆ.
ಯಾವಾಗ ಅರ್ಜಿ ಸಲ್ಲಿಸಬಹುದು?: ಹದ್ದುಬಸ್ತಿಗೆ ಅರ್ಜಿ ಸಲ್ಲಿಸುವುದೆಲ್ಲಿ?, ಯಾವ ದಾಖಲೆಗಳು ಬೇಕು?. ಹದ್ದು ಬಸ್ತು ಹಾಕಿದರೆ ಲಾಭವೇನು? ಮತ್ತು ಹದ್ದುಬಸ್ತಿನ ಪ್ರಕ್ರಿಯೆ ಯಾವ ರೀತಿ ಇರುತ್ತದೆ ಎಂಬುದನ್ನು ಭೂಮಾಲೀಕರು ತಿಳಿದುಕೊಳ್ಳುವುದು ಉತ್ತಮ. ಜಮೀನಿನ ಹದ್ದುಬಸ್ತಿಗೆ ಅರ್ಜಿ ಸಲ್ಲಿಸಬೇಕೆಂದರೆ, ಜಮೀನಿನ ಸುತ್ತಲೂ ಇರುವ ಸರ್ವೆ ಕಲ್ಲುಗಳ ನಾಶವಾಗಿದ್ದಲ್ಲಿ, ಪಕ್ಕದ ಜಮೀನುದಾರರು ನಿಮ್ಮ ಜಮೀನನ್ನು ಒತ್ತುವರಿ ಮಾಡಿದ್ದಾರೆ ಎಂಬ ಅನುಮಾನ ಬಂದಾಗ, ಪಹಣಿಯಲ್ಲಿ ಇರುವುದಕ್ಕಿಂತ ಕಡಿಮೆ ಜಮೀನು ಇದೆ ಎಂದು ಅನಿಸಿದಾಗ ಅರ್ಜಿ ಸಲ್ಲಿಸಬಹುದು.
ಒಂದು ವೇಳೆ, ಅರ್ಜಿದಾರನಿಗಾಗಲಿ ಅಥವಾ ಪಕ್ಕದ ಜಮೀನುದಾರನಿಗಾಗಲಿ ಈ ಅಳತೆಯಿಂದ ಸಮಾಧಾನವಾಗಿಲ್ಲವೆಂದೂರು ಮತ್ತೆ ಮೇಲ್ಮನವಿ ಸಲ್ಲಿಸುವುದಕ್ಕೆ ಅವಕಾಶವಿದೆ ಎನ್ನುತ್ತಾರೆ ಸರ್ವೆ ಅಧಿಕಾರಿಗಳು. ಹದ್ದುಬಸ್ತಿಗೆ ಅರ್ಜಿ ಸಲ್ಲಿಸಿದರೆ ಭೂಮಾಪಕರು ಭೂಮಾಲೀಕನ ಜಮೀನಿಗೆ ಬರುತ್ತಾರೆ. ಸರ್ವೆ ದಾಖಲೆಗಳ ಆಧಾರದ ಮೇಲೆ ಜಮೀನಿನ ಅಳತೆ ಕಾರ್ಯ ಮಾಡಿ ಅಳಿಸಿ ಹೋಗಿರುವ ಗಡಿಭಾಗವನ್ನು ಪತ್ತೆ ಹಚ್ಚಿ ಜಮೀನಿಗೆ ಗಡಿ ಭಾಗಗಳನ್ನು ಗುರುತು ಮಾಡುತ್ತಾರೆ.
ಮಾಲೀಕರಿಗೆ ತಮ್ಮ ಜಮೀನು ಮತ್ತು ಜಾಗದ ವಿಸ್ತೀರ್ಣದ ಬಗ್ಗೆ ಸರಿಯಾಗಿ ಗೊತ್ತಿರುವುದಿಲ್ಲ. ಹಾಗಾಗಿ, ಹದ್ದು ಬಸ್ತು ಮಾಡಿಕೊಂಡರೆ ಜಮೀನಿನ ಯಾವ ಭಾಗ ಒತ್ತುವರಿಯಾಗಿದೆ, ಎಷ್ಟು ಪ್ರದೇಶ ಒತ್ತುವರಿಯಾಗಿದೆ. ಯಾರು ಒತ್ತುವರಿ ಮಾಡಿಕೊಂಡಿದ್ದಾರೆ ಎಂಬುದನ್ನು ಗುರುತು ಮಾಡಿ ಒತ್ತುವರಿಯಾಗಿರುವ ಜಾಗವನ್ನು ತೆರವು ಮಾಡಿ ನಿಖರವಾದ ಗಡಿ ಗುರುತಿಸುತ್ತಾರೆ.
ಹದ್ದುಬಸ್ತಿಗೆ ಬೇಕಿರುವ ದಾಖಲೆಗಳು : ಹದ್ದುಬಸ್ತಿಗೆ ಅರ್ಜಿ ಸಲ್ಲಿಸುವ ಜಮೀನುದಾರ ಆಧಾರ್ ಕಾರ್ಡ್ ಹೊಂದಿರಬೇಕು. ಇತ್ತೀಚಿನ ಪಹಣಿ/ ಆರ್ ಟಿಸಿ 3 ನಮೂನೆ ಬೇಕು.