ಕರ್ನಾಟಕ

karnataka

By

Published : Aug 9, 2020, 4:50 PM IST

ETV Bharat / state

ಮತ್ತೆ ಪ್ರವಾಹದ ಭೀತಿ ; ಕಳೆದ ಬಾರಿಯ ಅತಿವೃಷ್ಟಿ ಪರಿಹಾರದ ಸ್ಥಿತಿಗತಿ ಹೀಗಿದೆ..

ರಾಜ್ಯದಲ್ಲಿ ವರುಣನ ಅಬ್ಬರಕ್ಕೆ ಜನರ ಮನೆ, ಬೆಳೆಗಳು ನೀರು ಪಾಲಾಗುತ್ತಿವೆ. ಇತ್ತ ಸರ್ಕಾರವನ್ನು ತರಾಟೆಗೆ ತೆಗೆದುಕೊಂಡಿರುವ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ, ಕಳೆದ ಬಾರಿಯ ಭೀಕರ ಅತಿವೃಷ್ಠಿ ಪರಿಹಾರ ಕಾಮಗಾರಿಯ ಲೆಕ್ಕ ಕೇಳುತ್ತಿದ್ದಾರೆ. ರಾಜ್ಯ ಸರ್ಕಾರ ನೀಡಿರುವ ಅಂಕಿ ಅಂಶದ ಪ್ರಕಾರ ಕಳೆದ ಬಾರಿಯ ಅತಿವೃಷ್ಠಿ ಪರಿಹಾರ ಕಾರ್ಯದ ಸ್ಥಿತಿಗತಿ ಹೇಗಿದೆ ಎಂಬುವುದರ ಮಾಹಿತಿ ಇಲ್ಲಿದೆ..

How much relief govt has distributed to the flood victims
ಕರ್ನಾಟಕ ನೆರೆ ಪರಿಹಾರದ ಮಾಹಿತಿ

ಬೆಂಗಳೂರು : ಕಳೆದ ವರ್ಷ ಆಗಸ್ಟ್-ಅಕ್ಟೋಬರ್ ತಿಂಗಳಲ್ಲಿ ರಾಜ್ಯ ಮಹಾ ಮಳೆಗೆ ತತ್ತರಿಸಿತ್ತು. ಅದರಲ್ಲೂ ಉತ್ತರಕರ್ನಾಟಕ ಭಾಗದಲ್ಲಿ ಮಳೆಯ ರೌದ್ರಾವತಾರಕ್ಕೆ ಸಾವಿರಾರು ಮಂದಿ ಮನೆ-ಮಠ, ಬೆಳೆದಿದ್ದ ಫಸಲನ್ನು ಕಳೆದುಕೊಂಡು ಜನ ಸಂತ್ರಸ್ತರಾಗಿದ್ದರು. ಒಟ್ಟು 22 ಜಿಲ್ಲೆಗಳು ಅತಿವೃಷ್ಠಿಯಿಂದ ಹಾನಿಗೊಳಗಾಗಿದ್ದವು. ಕಳೆದ ಬಾರಿಯ ಅತಿವೃಷ್ಠಿಗೆ ಒಟ್ಟು 35,160.81 ಕೋಟಿ ರೂ. ಹಾನಿಯಾಗಿತ್ತು. ಪ್ರವಾಹ ಪರಿಹಾರ ಮಾರ್ಗಸೂಚಿಯಂತೆ ರೂ. 3891.80 ಕೋಟಿ, ಆರ್ಥಿಕ ನೆರವನ್ನು ಕೋರಿ ರಾಜ್ಯ ಸರ್ಕಾರ ಕೇಂದ್ರಕ್ಕೆ ಮನವಿ ಸಲ್ಲಿಸಿತ್ತು. ಕೇಂದ್ರ ಸರ್ಕಾರದಿಂದ ಎಸ್​​ಡಿಆರ್​​ಎಫ್​ ಅಡಿ 1,869.85 ಕೋಟಿ ರೂ. ಬಿಡುಗಡೆ ಮಾಡಲಾಗಿದೆ.

ಕಳೆದ ವರ್ಷದ ನೆರೆ ಹಾವಳಿಯ ಕಡತ ದೃಶ್ಯ

ಮೃತಪಟ್ಟವರಿಗೆ ಕೊಟ್ಟ ಪರಿಹಾರ ಎಷ್ಟು?:ಕಳೆದ ಬಾರಿ ಪ್ರವಾಹಕ್ಕೆ 137 ಮಂದಿ ಮೃತಪಟ್ಟಿದ್ದರು. ಮೃತರ ವಾರಿಸುದಾರರಿಗೆ ತಲಾ 7 ಲಕ್ಷ ರೂ. ಪರಿಹಾರ ಧನ ವಿತರಿಸಲಾಗಿದೆ. ಎಸ್​​ಡಿಆರ್​​ಎಫ್ಮಾರ್ಗಸೂಚಿ ಅನುಸಾರ 4 ಲಕ್ಷ ರೂ. ಸಿಎಂ ಪರಿಹಾರ‌ ನಿಧಿಯಿಂದ, 1 ಲಕ್ಷ ರೂ. ಮತ್ತು 2 ಲಕ್ಷ ರೂ. ಪಿಎಂ ಪರಿಹಾರ ನಿಧಿಯಿಂದ ವಿತರಿಸಲಾಗಿದೆ ಎಂದು ಕಂದಾಯ ಇಲಾಖೆ ತಿಳಿಸಿದೆ.

ಮನೆ ಹಾನಿ ಪರಿಹಾರ ಪಾವತಿ ಎಷ್ಟು? :ನೆರೆ ಹಾವಳಿಯಿಂದ ಮನೆ ಕಳೆದುಕೊಂಡ ಸಂತ್ರಸ್ತರ ಪೂರ್ಣ ಹಾನಿಯಾದ ಮನೆಗಳಿಗೆ 5 ಲಕ್ಷ ರೂ. ತೀವ್ರ ಹಾನಿಯಾದ ಮನೆಗಳಿಗೆ 3 ಲಕ್ಷ ರೂ. ಹಾಗೂ ಭಾಗಶಃ ಹಾನಿಯಾದ ಮನೆಗಳಿಗೆ 50 ಸಾವಿರ ರೂ. ಪರಿಹಾರ ಘೋಷಿಸಲಾಗಿತ್ತು. ಆಗಸ್ಟ್​ನಲ್ಲಿ 1,01,558 ಮನೆ ಹಾಗೂ ಸೆಪ್ಟೆಂಬರ್ ಮತ್ತು ಅಕ್ಟೋಬರ್​ನಲ್ಲಿ 24,237 ಮನೆಗಳು ಹಾನಿಯಾಗಿವೆ. ಒಟ್ಟು 91.28 ಕೋಟಿ ರೂ. ಪರಿಹಾರ ಪಾವತಿಸಲಾಗಿದೆ. ಪೂರ್ಣ ಮನೆ ಹಾನಿಯಾದ 2,020 ಫಲಾನುಭವಿಗಳಿಗೆ ತಾತ್ಕಾಲಿಕ ಶೆಡ್ ನಿರ್ಮಾಣಕ್ಕೆ 50 ಸಾವಿರ ರೂ. ನಂತೆ 10.10 ಕೋಟಿ ರೂ. ಬಿಡುಗಡೆ ಮಾಡಲಾಗಿದೆ ಎಂದು ಸರ್ಕಾರ ಅಂಕಿ-ಅಂಶ ನೀಡಿದೆ. 5 ಲಕ್ಷ ಪರಿಹಾರಕ್ಕೆ ಅರ್ಹರಾದ ಕುಟುಂಬಗಳಿಗೆ ಗರಿಷ್ಠ 10 ತಿಂಗಳ ಅವಧಿಗೆ ಸೀಮಿತವಾಗಿ ಮಾಸಿಕ 5 ಸಾವಿರ ರೂ. ನಂತೆ ಬಾಡಿಗೆ ಮೊತ್ತ ಘೋಷಿಸಲಾಗಿತ್ತು. ಈವರೆಗೆ 5,180 ಕುಟುಂಬಗಳಿಗೆ 2.59 ಕೋಟಿ ರೂ. ಬಿಡುಗಡೆ ಮಾಡಲಾಗಿದೆ.

ಬೆಳೆ ನಷ್ಟ ಪರಿಹಾರ ಪಾವತಿ ಎಷ್ಟು? :ಕಳೆದ ಅತಿವೃಷ್ಠಿಗೆ ರಾಜ್ಯಾದ್ಯಂತ ಒಟ್ಟು 10,46,937 ಹೆಕ್ಟೇರ್ ಬೆಳೆ ಹಾನಿಯಾಗಿತ್ತು. ಅದರಂತೆ ಮಳೆ ಆಧಾರಿತ ಭೂಮಿಯಲ್ಲಿನ ಬೆಳೆ‌ ಹಾನಿಗೆ ಪ್ರತಿ ಹೆಕ್ಟೇರ್​ಗೆ 16,800 ರೂ., ತೋಟಗಾರಿಕೆ ಬೆಳೆಗೆ 23,500 ರೂ. ಹಾಗೂ ನೀರಾವರಿ ಬೆಳೆಗೆ 28,000 ರೂ. ಪರಿಹಾರ ಘೋಷಿಸಲಾಗಿತ್ತು. ಈ ಸಂಬಂಧ ಸರ್ಕಾರ ಬೆಳೆ ನಷ್ಟವಾದ ಸುಮಾರು 6,45,100 ರೈತರ ಬ್ಯಾಂಕ್ ಖಾತೆಗೆ ಈವರೆಗೆ ರೂ. 1185.40 ಕೋಟಿ ಜಮೆ‌‌‌ ಮಾಡಿದೆ ಎಂದು ಕಂದಾಯ ಇಲಾಖೆ ತಿಳಿಸಿದೆ. ಆದರೆ, ಇಲ್ಲೂ ಸಮಪರ್ಕವಾಗಿ ಫಲಾನುಭವಿಗಳಿಗೆ ಪರಿಹಾರ ಹಣ ಪಾವತಿಯಾಗಿಲ್ಲ ಎಂದು ರೈತ ನಾಯಕರು ಆರೋಪಿಸಿದ್ದಾರೆ.

ಆಗಿರುವ ರಸ್ತೆ, ಸೇತುವೆ ದುರಸ್ಠಿ ಎಷ್ಟು?:ಲೋಕೋಪಯೋಗಿ ಅಂಕಿ ಅಂಶದ ಪ್ರಕಾರ ನೆರೆಗೆ ಒಟ್ಟು 1,166 ಕಿ.ಮೀ. ರಾಜ್ಯ ಹೆದ್ದಾರಿ, 2,341 ಕಿ.ಮೀ. ಪ್ರಮುಖ ಜಿಲ್ಲಾ ರಸ್ತೆಗಳು ಹಾನಿಯಾಗಿವೆ. ಸುಮಾರು 1,293 ಸೇತುವೆಗಳು ಹಾನಿಯಾಗಿದ್ದವು. ಲೊಕೋಪಯೋಗಿ ಇಲಾಖೆ ಸುಮಾರು 7 ಸಾವಿರ ಕೋಟಿ ರೂ. ನಷ್ಟ ಅನುಭವಿಸಿತ್ತು. ಆದರೆ, ರಸ್ತೆ, ಸೇತುವೆ ದುರಸ್ಥಿಗಾಗಿ ರಾಜ್ಯ ಸರ್ಕಾರ 500 ಕೋಟಿ ರೂ.‌ ಹಂಚಿಕೆ ಮಾಡಿತ್ತು. 1,800 ನೆರೆ ಪೀಡಿತ ರಸ್ತೆ ಕಾಮಗಾರಿಗಳಲ್ಲಿ 1,700 ರಸ್ತೆ‌ ಕಾಮಗಾರಿ ಪೂರ್ಣಗೊಂಡಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಆದರೆ, ಸೇತುವೆ ನಿರ್ಮಾಣ, ದುರಸ್ಥಿ ಕಾಮಗಾರಿ ಇನ್ನೂ ಪ್ರಗತಿಯಲ್ಲಿದೆ. ಇದಕ್ಕಾಗಿ ಕೇವಲ 152.02 ಕೋಟಿ ರೂ. ಮಾತ್ರ ಬಿಡುಗಡೆ ಮಾಡಲಾಗಿದೆ. ನೆರೆಗೆ ಹಾನಿಯಾದ ಗ್ರಾಮೀಣ ರಸ್ತೆ, ಸೇತುವೆಗಳ ಮರು ನಿರ್ಮಾಣ, ದುರಸ್ಥಿಗಾಗಿ 1,067 ಕೋಟಿ ರೂ. ಬಿಡುಗಡೆಯಾಗಿದ್ದು, 897 ಕೋಟಿ ರೂ. ವೆಚ್ಚ ಭರಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಶಾಲೆ, ಅಂಗನವಾಡಿ ಕಟ್ಟಡ ದುರಸ್ತಿ ಹೇಗಿದೆ?:ಅತಿವೃಷ್ಠಿಯಿಂದ ಹಾನಿಯಾದ 6,072 ಪ್ರಾಥಮಿಕ ಶಾಲೆಗಳ ಕಟ್ಟಡಗಳ ತುರ್ತು ದುರಸ್ಥಿಗೆ 200 ಕೋಟಿ ರೂ. ಬಿಡುಗಡೆ ಮಾಡಲಾಗಿದೆ. ಅದೇ ರೀತಿ 2,958 ಅಂಗನವಾಡಿ ಕಟ್ಟಡಗಳ ತುರ್ತು ದುರಸ್ಥಿಗೆ 54.61 ಕೋಟಿ ರೂ. ಬಿಡುಗಡೆ ಮಾಡಲಾಗಿದೆ ಎಂದು ಸರ್ಕಾರ ತಿಳಿಸಿದೆ.

ಇತರೆ ನೆರೆ ಪರಿಹಾರದ ಸ್ಥಿತಿಗತಿ ಹೇಗಿದೆ?

  • ನೆರೆ ಹಾವಳಿಯಿಂದ ಮನೆ ಹಾನಿಯಾದ ಕುಟುಂಬಗಳಿಗೆ ಗೃಹೋಪಯೊಗಿ ಸಲಕರಣೆಗಳನ್ನು ಖರೀದಿಸಲು ತಲಾ 10,000 ರೂ. ಪರಿಹಾರ ಘೋಷಿಲಾಗಿತ್ತು. ಈ ಪೈಕಿ 2.07 ಲಕ್ಷ ಕುಟುಂಬಗಳಿಗೆ 207 ಕೋಟಿ ರೂ. ಪಾವತಿಸಲಾಗಿದೆ.
  • ಪ್ರವಾಹದಿಂದ ಹಾನಿಗೊಳಗಾದ ದೋಣಿಗಳಿಗೆ 7 ಸಾವಿರ ರೂ. ಹಾಗೂ ಬಲೆಗಳಿಗೆ ತಲಾ 1,850 ರೂ. ಪರಿಹಾರ ಘೋಷಿಸಿತ್ತು. ಅದರಂತೆ 661 ದೋಣಿಗಳಿಗೆ ಹಾಗೂ ಹಾನಿಗೊಳಗಾದ 1,421 ಬಲೆಗಳಿಗೆ ಒಟ್ಟು 85.89 ಲಕ್ಷ ರೂ. ಪಾವತಿಸಲಾಗಿದೆ.
  • ಕೆರೆಗಳ ದುರಸ್ಥಿಗೆ ಸಣ್ಣ ನೀರಾವರಿ ಇಲಾಖೆಯಿಂದ 151.02 ಕೋಟಿ ಬಿಡುಗಡೆ ಮಾಡಲಾಗಿದೆ. ಆದರೆ, ದುರಸ್ಥಿ ಕಾರ್ಯ ಇನ್ನೂ ಪ್ರಗತಿ ಹಂತದಲ್ಲಿದೆ.
  • ಪ್ರವಾಹದಿಂದ ಹಾನಿಯಾದ ಮೂಲಸೌಕರ್ಯಗಳ ದುರಸ್ಥಿಗಾಗಿ ವಿವಿಧ ಇಲಾಖೆಗಳ ವತಿಯಿಂದ ಒಟ್ಟು 6,108.70 ಕೋಟಿ ರೂ. ಹಂಚಿಕೆ ಮಾಡಿದ್ದು, 4,462.12 ಕೋಟಿ ರೂ. ಬಿಡುಗಡೆಯಾಗಿದೆ. ಈ ಪೈಕಿ 3,423.17 ಕೋಟಿ ರೂ. ವೆಚ್ಚವಾಗಿದೆ ಎಂದು ಕಂದಾಯ ಇಲಾಖೆ ಅಂಕಿ ಅಂಶ ನೀಡಿದೆ.

ABOUT THE AUTHOR

...view details