ಬೆಂಗಳೂರು: ಮಹಿಳೆಯರಿಗೆ ಸುರಕ್ಷತೆ ಹಾಗೂ ಮೂಲಸೌರ್ಕಯ ಒದಗಿಸುವ ನಿಟ್ಟಿನಲ್ಲಿ 2013 ರಲ್ಲಿ ರಚಿತವಾಗಿದ್ದ ನಿರ್ಭಯಾ ಫಂಡ್ ನಿಧಿ ಯೋಜನೆಯನ್ನು ರಾಜ್ಯ ಸರ್ಕಾರ ಸದ್ಬಳಕೆ ಮಾಡಿಕೊಳ್ಳುವಲ್ಲಿ ವಿಫಲವಾಗಿದೆ.
ಉತ್ತರ ಪ್ರದೇಶದ ಹತ್ರಾಸ್ನಲ್ಲಿ ನಡೆದ ಸಾಮೂಹಿಕ ಅತ್ಯಾಚಾರ ದೇಶದೆಲ್ಲೆಡೆ ತೀವ್ರ ಚರ್ಚೆಗೆ ಗ್ರಾಸವಾಗಿದೆ. ನಾಗರಿಕ ಸಮಾಜದಲ್ಲಿ ಯುವತಿಯ ಮೇಲೆ ಹಾಡಹಾಗಲೇ ಕಾಮುಕರು ಅತ್ಯಾಚಾರ ಕೃತ್ಯದಲ್ಲಿ ಭಾಗಿಯಾಗಿರುವ ಆರೋಪಿಗಳಿಗೆ ಗಲ್ಲುಶಿಕ್ಷೆ ನೀಡಬೇಕೆಂಬ ಒತ್ತಾಯ ಎಲ್ಲೆಡೆ ಕೇಳಿ ಬರುತ್ತಿದೆ. ಈ ಹಿನ್ನೆಲೆಯಲ್ಲಿ 2013 ರಲ್ಲಿ ರಚಿತವಾಗಿದ್ದ ನಿರ್ಭಯಾ ಫಂಡ್ ನಿಧಿ ಯೋಜನೆ ಮತ್ತೆ ಮುನ್ನೆಲೆಗೆ ಬಂದಿದೆ. ಮಹಿಳೆಯರ ಸುರಕ್ಷತೆ ಹಾಗೂ ಮೂಲಸೌರ್ಕಯ ಒದಗಿಸುವುದೇ ಈ ಯೋಜನೆಯ ಪ್ರಮುಖ ಆಶಯವಾಗಿತ್ತು. ಆಶಯಕ್ಕೆ ತಕ್ಕಂತೆ ರಾಜ್ಯವಾರು ಪ್ರಕಾರ ಕೇಂದ್ರ ಸರ್ಕಾರ ಹಣ ಮೀಸಲಿರಿಸಿದೆ. ವಿಪಯಾರ್ಸವೆಂದರೆ ದೇಶದ ಬಹುತೇಕ ರಾಜ್ಯಗಳು ನಿರ್ಭಯಾ ಫಂಡ್ ಹಣವನ್ನೇ ಸದ್ಬಳಕೆ ಮಾಡಿಕೊಂಡಿಲ್ಲ. ಕರ್ನಾಟಕದಲ್ಲಿ ಶೇ.7 ರಷ್ಟು ಮಾತ್ರ ಹಣ ಖರ್ಚು ಮಾಡಿರುವುದು ಈಗಿನ ಹಿಂದಿನ ಸರ್ಕಾರಗಳ ವೈಫಲ್ಯಕ್ಕೆ ಹಿಡಿದ ಕೈಗನ್ನಡಿಯಾಗಿದೆ ಎಂದು ಹೇಳಬಹುದಾಗಿದೆ.
ಪ್ರಧಾನಿ ನರೇಂದ್ರ ಮೋದಿ ನೇತೃತ್ವ ಸರ್ಕಾರ ನಿರ್ಭಯಾ ನಿಧಿಗೆ 1,649 ಕೋಟಿ ರೂ. ಬಿಡುಗಡೆ ಮಾಡಿತ್ತು. ಇದರಂತೆ ಐದು ವರ್ಷಗಳಿಗೆ ಕರ್ನಾಟಕಕ್ಕೆ 191 ಕೋಟಿ ರೂ. ಅನುದಾನ ಮೀಸಲಿರಿಸಿತ್ತು. ಆದರೆ ಮೀಸಲಿರಿಸಿದ ಅನುದಾನದಲ್ಲಿ 13 ಕೋಟಿ ರೂ. ಮಾತ್ರ ರಾಜ್ಯ ಸರ್ಕಾರ ಖರ್ಚು ಮಾಡಿದೆ. ಈ ಮೂಲಕ ಶೇ.7 ರಷ್ಟು ಅನುದಾನ ಬಳಕೆ ಮಾಡಿದೆ. ರಾಷ್ಟ್ರ ರಾಜಧಾನಿ ದೆಹಲಿಗೆ ಮೀಸಲಿಟ್ಟ 390 ಕೋಟಿ ರೂ. ಹಣದಲ್ಲಿ 19 ಕೋಟಿ ರೂ. ಮಾತ್ರ ಖರ್ಚು ಮಾಡಿದೆ. ಅದೇ ರೀತಿ ಮಹಾರಾಷ್ಟ್ರ, ದಿಯು, ದಮನ್, ಸಿಕ್ಕಿಂ ಸೇರಿದಂತೆ ಹಲವು ರಾಜ್ಯಗಳಲ್ಲಿ ಒಂದು ಪೈಸೆಯಷ್ಟು ಖರ್ಚು ಮಾಡಿಲ್ಲ ಎಂಬ ಕಳವಳಕಾರಿ ಸಂಗತಿ ಬಯಲಾಗಿದೆ.