ಕರ್ನಾಟಕ

karnataka

ETV Bharat / state

ತೀವ್ರ ಚರ್ಚೆಗೆ ಗ್ರಾಸವಾಗಿರುವ ಫೋನ್ ಟ್ಯಾಪಿಂಗ್ ಬಗ್ಗೆ ನಿಮಗೆಷ್ಟು ಗೊತ್ತು...! ಈ ಬಗ್ಗೆ ಮಾಹಿತಿ‌‌ ಇಲ್ಲಿದೆ - ಮಾಜಿ ಮುಖ್ಯಮಂತ್ರಿ ಹೆಚ್.ಡಿ. ಕುಮಾರಸ್ವಾಮಿ

ಬೆಂಗಳೂರು ನಗರ ಪೊಲೀಸ್​ ಆಯುಕ್ತ ಭಾಸ್ಕರ್​ ರಾವ್​ ಅವರ ಫೋನ್​ ಕದ್ದಾಲಿಕೆ ಬೆನ್ನಲೇ ಮಾಜಿ ಸಿಎಂ ಹೆಚ್​ಡಿಕೆ ಫೋನ್​ ಟ್ಯಾಪಿಂಗ್​ ಮಾಡಿ ಫೋನ್​ ಕದ್ದಾಲಿಕೆ ಮಾಡಿದ್ದಾರೆ ಎಂಬ ಆರೋಪ ಬಂದಿದೆ. ಈ ಕದ್ದಾಲಿಕೆ ಮಾಡುವ ಅಧಿಕಾರ ಯಾರಿಗಿದೆ ಹಾಗೂ ಕಾನೂನು ಏನು ಹೇಳಲಿದೆ ಎಂಬುದರ ಮಾಹಿತಿ ಇಲ್ಲಿದೆ.

ಫೋನ್​ ಕದ್ದಾಲಿಕೆ

By

Published : Aug 14, 2019, 11:37 PM IST

ಬೆಂಗಳೂರು: ನಗರ ಪೊಲೀಸ್ ಆಯುಕ್ತ ಭಾಸ್ಕರ್ ರಾವ್ ಅವರ ಫೋನ್ ಕದ್ದಾಲಿಕೆ ಆರೋಪ ಬೆನ್ನಲೇ ಮಾಜಿ ಮುಖ್ಯಮಂತ್ರಿ ಹೆಚ್.ಡಿ. ಕುಮಾರಸ್ವಾಮಿ ತಮ್ಮ ಅಧಿಕಾರವಧಿಯಲ್ಲಿ‌ ಫೋನ್ ಟ್ಯಾಪಿಂಗ್ ಮಾಡಿ ತಮ್ಮ ಅಧಿಕಾರ ದುರ್ಬಳಕೆ ಮಾಡಿಕೊಂಡಿದ್ದಾರೆ ಎಂಬ ಗಂಭೀರ ಆರೋಪ ಕೇಳಿ ಬಂದಿದೆ.

ತಮ್ಮ ಮೇಲೆ ಬಂದಿರುವ‌ ಆರೋಪಗಳಿಗೆ‌ ಈಗಾಗಲೇ ಸಮರ್ಥನೆ ನೀಡಿದರೂ ರಾಜಕೀಯ ಹಾಗೂ ಪೊಲೀಸ್ ವಲಯಗಳಲ್ಲಿ ಸಾಕಷ್ಟು ಚರ್ಚೆಯಾಗುತ್ತಿದೆ.ಅಸಲಿಗೆ ಫೋನ್‌ ಕದ್ದಾಲಿಕೆ ಅಂದರೆ ಏನು ? ಮಾಡೋದು ಹೇಗೆ? ಕದ್ದಾಲಿಕೆ ಮಾಡುವ ಅಧಿಕಾರ ಯಾರಿಗಿದೆ ಹಾಗೂ ಕಾನೂನು ಏನು ಹೇಳಲಿದೆ ಎಂಬುದರ ಮಾಹಿತಿ ಇಲ್ಲಿದೆ.

ಫೋನ್ ಕದ್ದಾಲಿಕೆ ಎಂದರೇನು?

ಇಬ್ಬರು ವ್ಯಕ್ತಿಗಳು ಪೋನ್​​ನಲ್ಲಿ ಮಾತನಾಡುವಾಗ ಅವರಿಗೆ ತಿಳಿಯದೆ ಮೂರನೇ ವ್ಯಕ್ತಿಯು ಕದ್ದು ಆಲಿಸುವುದೇ ಫೋನ್ ಕದ್ದಾಲಿಕೆ.‌ ಬದಲಾದ ಆಧುನಿಕ ತಂತ್ರಜ್ಞಾನದಲ್ಲಿ ಎಲ್ಲವೂ ಸಾಧ್ಯವಾಗಿದ್ದು, ಆತ್ಯಾಧುನಿಕ ತಾಂತ್ರಿಕ ಉಪಕರಣದಿಂದ ಫೋನ್ ಕದ್ದಾಲಿಸಬಹುದು. ಈ‌ ಉಪಕರಣಕ್ಕೆ ಭಾರಿ ಬೇಡಿಕೆಯಿದ್ದು ವಿದೇಶಗಳಿಂದ ಸಾಕಷ್ಟು ದೊಡ್ಡ ಮಟ್ಟದಲ್ಲಿ ನಮ್ಮ ದೇಶಕ್ಕೆ ರಫ್ತಾಗುತ್ತಿದೆ.

ಕ್ರಿಮಿನಲ್ ಚಾರಿತ್ರ್ಯವಿರುವ ವ್ಯಕ್ತಿಗಳ ವಿರುದ್ಧ, ರಾಷ್ಟ್ರೀಯ ಹಿತಾಸಕ್ತಿ ಹಾಗೂ ದೇಶದ ಭದ್ರತೆಗೆ ಧಕ್ಕೆ ಕಾರಣರಾಗುವವರ ವಿರುದ್ಧ ಗುಪ್ತಚರ ಸಂಸ್ಥೆಗಳು, ಸಿಬಿಐ, ಮಾದಕ ವಸ್ತು ನಿಯಂತ್ರಣ, ಆದಾಯ ತೆರಿಗೆ ಹಾಗೂ ಪೊಲೀಸ್ ಇಲಾಖೆಗಳು ಫೋನ್ ಟ್ಯಾಪಿಂಗ್ ಮಾಡಬಹುದಾಗಿದೆ.

ಫೋನ್ ಕದ್ದಾಲಿಕೆಗೆ ಕಾನೂನಿನಡಿ ಅವಕಾಶವೂ ಇದೆ. ಆದರೆ ಇದಕ್ಕೆ ನಿರ್ದಿಷ್ಟ ರೀತಿ ನೀತಿಗಳಿವೆ. ಅದು ಹೊರತಾಗಿ ಕದ್ದಾಲಿಸಿದರೆ ಅದು ಕಾನೂನಿನಡಿ ಅಪರಾಧವಾಗುತ್ತದೆ.‌‌‌ ಒಂದು ವೇಳೆ ಸಾಮಾನ್ಯ ಜನರ ಫೋನ್ ಕದ್ದಾಲಿಕೆ ಮಾಡಿದರೆ ಆತ ಕೋರ್ಟ್ ಅಥವಾ ರಾಜ್ಯ ಮಾನವ ಹಕ್ಕು ಆಯೋಗಕ್ಕೆ ಹೋಗಬಹುದು. ಒಂದು ವೇಳೆ‌ ಫೋನ್ ಟ್ಯಾಪಿಂಗ್ ಮಾಡಿರುವುದು ನ್ಯಾಯಾಲಯದಲ್ಲಿ ಸಾಬೀತಾದರೆ ಗರಿಷ್ಠ ‌ಮೂರು ವರ್ಷ ಜೈಲು ಶಿಕ್ಷೆ ವಿಧಿಸಲು ಕಾನೂನಿನಲ್ಲಿ ಅವಕಾಶವಿದೆ.

1885ರ ಇಂಡಿಯನ್ ಟೆಲಿಗ್ರಾಫ್ ಕಾಯ್ದೆ ಸೆಕ್ಷನ್ 5ರ (2) ರಲ್ಲಿ 419ನೇ ಮತ್ತು 419ಎ ನಿಬಂಧನೆಗಳಲ್ಲಿ ಫೋನ್ ಕರೆಗಳ ಮಾಹಿತಿ ಪಡೆಯುವ, ಕೇಳುವ ಬಗ್ಗೆ ಹೇಳಲಾಗಿದೆ. ರಾಷ್ಟ್ರೀಯತೆ ಹಾಗೂ ದೇಶದ ಭದ್ರತೆಗೆ ಧಕ್ಕೆ ತರುವವರ ವಿರುದ್ಧ ಫೋನ್ ಕದ್ದಾಲಿಸಬೇಕಾದರೆ ಕ್ಯಾಬಿನೆಟ್ ಕಾರ್ಯದರ್ಶಿ ಹಾಗೂ ಕಾನೂನು ಕಾರ್ಯದರ್ಶಿ ಈ ಬಗ್ಗೆ ತೀರ್ಮಾನಿಸಿ ಗೃಹ ಇಲಾಖೆಗೆ ಮಾಹಿತಿ ಕೊಡಬೇಕಾಗಿದೆ. ಈ‌ ಇಲಾಖೆಯ ಎರಡು ತಿಂಗಳೊಳಗೆ ಪರಿಶೀಲನೆ ನಡೆಸಿ ನಿರ್ಧಾರ ತೆಗೆದುಕೊಳ್ಳಬೇಕಿದೆ.

ಸ್ಥಳೀಯ ಕ್ರಿಮಿನಲ್ ವ್ಯಕ್ತಿಗಳ ಫೋನ್ ಕದ್ದಾಲಿಸಲು ಕನಿಷ್ಠ ರಾಜ್ಯದಲ್ಲಿ ಎಡಿಜಿಪಿ‌ ದರ್ಜೆಯ ಪೊಲೀಸ್ ಕಮೀಷನರ್ ಅನುಮತಿ ಅಗತ್ಯವಾಗಿದೆ.‌ ಒಮ್ಮೆ ಅನುಮತಿ ನೀಡಿದರೆ ಅದು 6 ತಿಂಗಳ ಅವಧಿಯಾಗಿರಲಿದ್ದು, ಕದ್ದಾಲಿಕೆ ವೇಳೆ ಪಡೆದ ಮಾಹಿತಿಗಳನ್ನು ಬಳಸಿ 2 ತಿಂಗಳೊಳಗೆ ಅವುಗಳನ್ನು ನಾಶಪಡಿಸಬೇಕು.ಇದರ ಹೊರತಾಗಿ ನ್ಯಾಯಾಲಯ ನಿರ್ದೇಶನದ ಮೇರೆಗೆ ಫೋನ್ ಕದ್ದಾಲಿಕೆಗೆ ಅವಕಾಶವಿದೆ.

ABOUT THE AUTHOR

...view details