ಬೆಂಗಳೂರು :ಕೊರೊನಾ ಸೋಂಕಿನ ತೀವ್ರತೆ ಹಾಗೂ ಸಾವಿನಿಂದ ಪಾರಾಗಲು ಕೋವಿಡ್ ಲಸಿಕೆ ಪಡೆಯುವುದು ಅನಿವಾರ್ಯ. ಹೀಗಾಗಿ, ಕಳೆದ ವರ್ಷದಿಂದ(2021) ದೇಶಾದ್ಯಂತ ಲಸಿಕಾ ಅಭಿಯಾನ ನಡೆಸಲಾಗುತ್ತಿದೆ.
ಕಾಲಕ್ಕೆ ತಕ್ಕಂತೆ ಲಸಿಕಾಕರಣದಲ್ಲಿ ಬದಲಾವಣೆಗಳನ್ನ ತರಲಾಗುತ್ತಿದೆ. ಸದ್ಯ ಕೊರೊನಾ ಸೋಂಕು ಹೊಂದಿದ್ದ ವ್ಯಕ್ತಿಗಳು ಯಾವಾಗ ಬೂಸ್ಟರ್ ಲಸಿಕೆ ಪಡೆಯಬೇಕು? ಎಂಬುದಕ್ಕೆ ತಜ್ಞರು ಮಾಹಿತಿ ನೀಡಿದ್ದಾರೆ.
ವಿಶ್ವದಾದ್ಯಂತ ಈಗಾಗಲೇ 3ನೇ ಅಲೆ ಗಣನೀಯವಾಗಿ ಏರಿಕೆಯಾಗುತ್ತಿದೆ. ಈ ಹಿನ್ನೆಲೆ ತಜ್ಞರ ಸಲಹೆಯಂತೆ ಮೊದಲ ಹಾಗೂ 2ನೇ ಡೋಸ್ ಪಡೆದ ನಂತರ ಇದೀಗ ಮುನ್ನೆಚ್ಚರಿಕಾ ಲಸಿಕೆ ನೀಡಲಾಗುತ್ತಿದೆ. ಮೊದಲ ಹಂತದಲ್ಲಿ ಆರೋಗ್ಯ ಮತ್ತು ಮುಂಚೂಣಿ ಕಾರ್ಯಕರ್ತರಿಗೆ ಹಾಗೂ 60 ವರ್ಷ ಮೇಲ್ಪಟ್ಟವರಿಗೆ ಬೂಸ್ಟರ್ ಡೋಸ್ ನೀಡಲಾಗುತ್ತಿದೆ.
ಈ ಮಧ್ಯೆ ಹಲವರಿಗೆ ಸೋಂಕು ತಗುಲಿದೆ. ಯಾವಾಗ ಬೂಸ್ಟರ್ ಡೋಸ್ ಪಡೆಯಬೇಕು ಎಂಬ ಗೊಂದಲ ಉಂಟಾಗಿದೆ. ಕೋವಿಡ್-19 ಲಸಿಕೆ ನೀಡಿಕೆಗಾಗಿ ರಾಷ್ಟ್ರೀಯ ತಜ್ಞರ ಗುಂಪು (NEGVAC) ಅವರ ಶಿಫಾರಸ್ಸಿನ ಪ್ರಕಾರ ಕೊರೊನಾ ಸೋಂಕು ಹೊಂದಿದ್ದ ವ್ಯಕ್ತಿಗಳು ಗುಣಮುಖರಾದ 3 ತಿಂಗಳ ನಂತರವಷ್ಟೇ ಲಸಿಕೆ ಪಡೆಯಬಹುದು ಎಂದು ಕೇಂದ್ರ ಸರ್ಕಾರ ಸೂಚಿಸಿದೆ.