ಬೆಂಗಳೂರು: ನೂತನ ವರ್ಷಾಚರಣೆಗೆ ಕ್ಷಣಗಣನೆ ಆರಂಭವಾಗಿದೆ. ಜನರು ಹಳೆಯ ವರ್ಷಕ್ಕೆ ವಿದಾಯ ಹೇಳಿ ನೂತನ ಸಂವತ್ಸರವನ್ನು ಅದ್ಧೂರಿಯಾಗಿ ಬರಮಾಡಿಕೊಳ್ಳಲು ತುದಿಗಾಲಲ್ಲಿ ನಿಂತಿದ್ದಾರೆ. ಈ ಹಿನ್ನೆಲೆಯಲ್ಲಿ ಪಾರ್ಟಿ ಪ್ರಿಯರ ನೆಚ್ಚಿನ ತಾಣಗಳಾದ ಕೋರಮಂಗಲ, ಹೆಚ್ಎಸ್ಆರ್ ಲೇಔಟ್ ಹಾಗೂ ಎಲೆಕ್ಟ್ರಾನಿಕ್ ಸಿಟಿಯಲ್ಲಿ ಭದ್ರತೆ ಹೆಚ್ಚಿಸಲಾಗಿದೆ.
ಪಾರ್ಟಿಗಳು ಆಯೋಜನೆಯಾಗುವ ಸ್ಥಳಗಳಲ್ಲಿ ಒಳಾಂಗಣ ಹಾಗೂ ಹೊರಾಂಗಣ ಎಂದು ಎರಡು ವಿಭಾಗಗಳಲ್ಲಿ ಭದ್ರತೆಯ ಉಸ್ತುವಾರಿ ವಹಿಸಿಕೊಳ್ಳಲಾಗಿದ್ದು, ಒಳಾಂಗಣ ಭದ್ರತೆಯನ್ನು ಆಯೋಜಕರು ಹೆಚ್ಚಾಗಿ ನೋಡಿಕೊಳ್ಳಬೇಕು ಎಂದು ಆಗ್ನೇಯ ವಿಭಾಗದ ಡಿಸಿಪಿ ಸಿ ಕೆ ಬಾಬಾ ತಿಳಿಸಿದ್ದಾರೆ.
ಇನ್ನು, ಪಾರ್ಟಿ ಆಯೋಜನೆಯಾಗುವ ಸ್ಥಳಗಳ ಬಳಿ ಹೊರಾಂಗಣದಲ್ಲಿ ಮತ್ತು ರಸ್ತೆಯಲ್ಲಿ ಹೆಚ್ಚಿನ ಭದ್ರತೆಗೆ ಪೊಲೀಸರನ್ನು ನಿಯೋಜನೆ ಮಾಡಲಾಗಿದೆ. ಇದಕ್ಕಾಗಿ ಖಾಸಗಿ ಭದ್ರತಾ ಸಿಬ್ಬಂದಿಗಳನ್ನು ಸಹ ನಿಯೋಜಿಸಲಾಗಿದೆ. ಪಾರ್ಟಿಗೆ ಬರುವ ಪ್ರತಿಯೊಬ್ಬರ ಮಾಹಿತಿ ಹಾಗೂ ಫೋಟೋಗಳನ್ನು ಪೊಲೀಸ್ ಸಿಬ್ಬಂದಿ ಪಡೆಯಲಿದ್ದಾರೆ. ಜೊತೆಗೆ ಪಬ್, ಹೋಟೆಲ್, ರೆಸ್ಟೋರೆಂಟ್ಗಳ ಪ್ರವೇಶದ್ವಾರದಲ್ಲಿ ಸಿಸಿಟಿವಿಗಳನ್ನ ಅಳವಡಿಸಲಾಗಿದೆ. ಸಿಸಿಟಿವಿಯಲ್ಲಿ ಸೆರೆಯಾದ ದೃಶ್ಯಗಳು ಲೈವ್ ಎಲ್ಇಡಿ ಮೇಲೆ ಬಿತ್ತರವಾಗಲಿವೆ.