ಕರ್ನಾಟಕ

karnataka

ETV Bharat / state

ಹೆಸರುವಾಸಿ ಘಟಾನುಘಟಿ ರಾಜಕಾರಣಿಗಳಿದ್ದರೂ ಮಧ್ಯ ಕರ್ನಾಟಕ ಅಭಿವೃದ್ಧಿ ಆಗಿದ್ದೆಷ್ಟು? - ಕಾಗೋಡು ತಿಮ್ಮಪ್ಪ

ಮಧ್ಯ ಕರ್ನಾಟಕದ ಜಿಲ್ಲೆಗಳಲ್ಲಿ ಹಲವಾರು ಸಮಸ್ಯೆಗಳಿದ್ದು, ಸರ್ಕಾರ ಗಮನ ಹರಿಸುತ್ತಿಲ್ಲ ಎಂಬ ಅಸಮಾಧಾನ ಜನರಲ್ಲಿ ಮನೆ ಮಾಡಿದೆ. ಪವನ ವಿದ್ಯುತ್ ಉತ್ಪಾದನೆ, ಕೈಗಾರಿಕೆ, ರೈಲು, ವಿಮಾನ, ರಸ್ತೆ ಸಂಪರ್ಕ, ವಾಣಿಜ್ಯ ಚಟುವಟಿಕೆಯಲ್ಲಿ ಪ್ರಗತಿ ಆಮೆಗತಿಯಲ್ಲಿ ಸಾಗುತ್ತಿದೆ. ಭದ್ರಾ ಮೇಲ್ದಂಡೆ ಇನ್ನೂ ಅಭದ್ರವಾಗಿದೆ. ಮಧ್ಯ ಕರ್ನಾಟಕದಲ್ಲಿ ಘಟಾನುಗಟಿ ರಾಜಕಾರಣಿಗಳಿದ್ದರೂ ಪ್ರದೇಶವಾರು ಅಭಿವೃದ್ಧಿಯಲ್ಲಿ ಅಸಮಾನತೆಯ ಕೂಗು ಕೇಳಿ ಬರುತ್ತಿದೆ.

Central Karnataka
Central Karnataka

By

Published : Apr 26, 2023, 4:30 PM IST

Updated : Apr 26, 2023, 5:53 PM IST

ಬೆಂಗಳೂರು:ಐತಿಹಾಸಿಕ ಪ್ರಸಿದ್ಧ ಕ್ಷೇತ್ರಗಳನ್ನು ಒಳಗೊಂಡಿರುವ ಮಧ್ಯ ಕರ್ನಾಟಕವು ಅಭಿವೃದ್ಧಿ ವಿಚಾರದಲ್ಲಿ ಎಲ್ಲ ಭಾಗಗಳಲ್ಲೂ ಉತ್ತಮವಾಗಿದೆ ಎನ್ನಲಾಗದು. ಸಾಕಷ್ಟು ಮೂಲ ಸೌಕರ್ಯ ಹೊಂದಿದ್ದರೂ ಹತ್ತು ಹಲವು ಸಮಸ್ಯೆಗಳನ್ನು ಇನ್ನೂ ಎದುರಿಸುತ್ತಿದೆ.

ಕರ್ನಾಟಕದಲ್ಲಿ ಅದರಲ್ಲೂ ಮಧ್ಯ ಕರ್ನಾಟಕದಲ್ಲಿ ರಾಜಕೀಯ ಚಿತ್ರಣ ತೀರಾ ವಿಭಿನ್ನವಾಗಿದೆ. ಬಿಜೆಪಿ, ಕಾಂಗ್ರೆಸ್ ಹಾಗೂ ಜೆಡಿಎಸ್​ ಸಮಬಲ ಹೊಂದಿವೆ. ಮಧ್ಯ ಕರ್ನಾಟಕವು ತುಮಕೂರು, ದಾವಣಗೆರೆ, ಚಿತ್ರದುರ್ಗ, ಶಿವಮೊಗ್ಗ ಜಿಲ್ಲೆಗಳನ್ನು ಒಳಗೊಂಡಿದೆ. ಬಹುತೇಕ ಬಯಲುಸೀಮೆ ಹೊಂದಿದ್ದರೂ, ರೈಲು, ವಿಮಾನ, ರಸ್ತೆ ಸಂಪರ್ಕದ ವಿಚಾರದಲ್ಲಿ ಉತ್ತಮ ಸೌಕರ್ಯ ಹೊಂದಿದ್ದು, ತಕ್ಕಮಟ್ಟಿನ ಪ್ರಗತಿ ಕಂಡಿದೆ.

ಪವನ ವಿದ್ಯುತ್ ಉತ್ಪಾದನೆ, ಕೈಗಾರಿಕೆ ಪ್ರಗತಿ ಸಾಕಷ್ಟು ಆಗಿದೆ. ವಾಣಿಜ್ಯ ಚಟುವಟಿಕೆ ಸಹ ಉತ್ತಮ ಪ್ರಗತಿ ಕಾಣುತ್ತಿದೆ. ಬಯಲುಸೀಮೆ ಹೆಚ್ಚಾಗಿ ಹೊಂದಿದ್ದು ಮಲೆನಾಡು ಗಡಿಭಾಗವನ್ನೂ ಕೆಲ ಜಿಲ್ಲೆಗಳು ಸಂಪರ್ಕಿಸುತ್ತವೆ. ನೀರಿನ ಲಭ್ಯತೆ ಕಡಿಮೆ ಇದ್ದರೂ, ಉಳಿದೆಲ್ಲಾ ಅನುಕೂಲಗಳು ಚೆನ್ನಾಗಿವೆ. ರಾಜ್ಯ ರಾಜಧಾನಿ ಬೆಂಗಳೂರಿಗೆ ಉತ್ತಮ ಸಂಪರ್ಕ ವ್ಯವಸ್ಥೆ ಹೊಂದಿದೆ. ನದಿಗಳು ಈ ಭಾಗದಲ್ಲಿ ಹರಿದಿರುವುದು ಕಡಿಮೆ ಆದರೂ, ಕಾಲುವೆಗಳ ಮೂಲಕ ನೀರು ಹಾಯಿಸಿಕೊಂಡು ನೀರಾವರಿ ಮೂಲಕ ಕೃಷಿ ಚಟುವಟಿಕೆ, ಹೈನುಗಾರಿಕೆ, ಕುರಿ, ಕೋಳಿ ಸಾಕಣೆ ಮಾಡಿಕೊಂಡು ಉತ್ತಮ ಬದುಕು ಕಟ್ಟಿಕೊಂಡವರು ಹಲವರಿದ್ದಾರೆ.

ಸಮಸ್ಯೆ:ಇನ್ನೊಂದೆಡೆ ಮಧ್ಯ ಕರ್ನಾಟಕದ ಜಿಲ್ಲೆಗಳಾದ ದಾವಣಗೆರೆ, ಚಿತ್ರದುರ್ಗ ಸೇರಿ ನೆರೆಹೊರೆಯ ಜಿಲ್ಲೆಗಳಲ್ಲಿ ಸಾಕಷ್ಟು ಸಮಸ್ಯೆಗಳಿದ್ದು ಜನರ ದಶಕಗಳ ಕನಸು ನನಸಾಗಿಲ್ಲ. ಇಲ್ಲಿನ ಸಮಸ್ಯೆಗಳ ಬಗ್ಗೆ ಸರಕಾರ ಗಮನ ಹರಿಸುತ್ತಿಲ್ಲ ಎಂಬ ಅಸಮಾಧಾನ ಜನರಲ್ಲಿ ಮನೆ ಮಾಡಿದೆ. ದಾವಣಗೆರೆ ಈಗ ಸ್ಮಾರ್ಟ್‌ ಸಿಟಿಯೂ ಆಗುತ್ತಿದೆ. ಈಗಾಗಲೇ ಸ್ಮಾರ್ಟ್‌ ಅನುದಾನಕ್ಕಿಲ್ಲ ಕ್ರಿಯಾ ಯೋಜನೆ ರೂಪಿಸಿ ಕಾಮಗಾರಿ ನಡೆಸಲಾಗಿದೆ. ಆದರೂ ಸ್ಮಾರ್ಟ್‌ ಸಿಟಿಯಲ್ಲಿ ಮಣ್ಣಿನ ರಸ್ತೆಗಳಿದ್ದು ಈ ನಗರ ಸ್ಮಾರ್ಟ್‌ ಆಗೇ ಇಲ್ಲ ಎಂಬ ಬೇಸರದ ಮಾತುಗಳೂ ಇದೆ.

ಭದ್ರಾ ಮೇಲ್ದಂಡೆ ಇನ್ನೂ ಅಭದ್ರ: ಜಿಲ್ಲೆಯ ಶೇ.40ಕ್ಕಿಂತ ಹೆಚ್ಚು ಭಾಗ ಎಂದರೆ ಸುಮಾರು 65ರಿಂದ 70 ಸಾವಿರ ಹೆಕ್ಟೇರ್‌ ಪ್ರದೇಶ ನೀರಾವರಿ ಹೊಂದಿದೆ. ಆದರೆ, ನಾಲೆಗಳ ಆಧುನೀಕರಣ ಆಗದ ಕಾರಣ ನೀರು ಪೋಲಾಗುತ್ತಿದೆ ಎಂಬ ಮಾತಿದೆ. ಮಧ್ಯ ಕರ್ನಾಟಕದ ಬಯಲು ಪ್ರದೇಶ ಚಿತ್ರದುರ್ಗ ಸೀಮೆಗೆ ನೀರುಣಿಸುವ ಜನರ ಬಹು ನಿರೀಕ್ಷೆಯ 22 ಸಾವಿರ ಕೋಟಿ ರೂ.ಗೂ ಹೆಚ್ಚು ವೆಚ್ಚದ ಬೃಹತ್ ನೀರಾವರಿ ಯೋಜನೆಯಾದ ಭದ್ರಾ ಮೇಲ್ದಂಡೆ ಇನ್ನೂ ಅಭದ್ರವಾಗೇ ಇದೆ.

ಪ್ರಸ್ತುತ ಪಕ್ಷಗಳ ಬಲಾಬಲ :ರಾಜಕೀಯವಾಗಿ ಮಧ್ಯ ಕರ್ನಾಟಕದ 4 ಜಿಲ್ಲೆಗಳ ಪೈಕಿ 25 ವಿಧಾನಸಭೆ ಕ್ಷೇತ್ರಗಳು ಬರುತ್ತವೆ. ಇಲ್ಲಿ ಬಿಜೆಪಿಯದ್ದೇ ಪ್ರಾಬಲ್ಯ ಸಾಧಿಸಿದೆ. ಕಾಂಗ್ರೆಸ್- ಜೆಡಿಎಸ್ ತುಮಕೂರು ಜಿಲ್ಲೆಯಲ್ಲಿ ಪ್ರಾಬಲ್ಯವನ್ನು ಹೊಂದಿವೆ.​​​

ಮಧ್ಯ ಕರ್ನಾಟಕ

ಮತದಾರರ ವಿವರ: ಕ್ಷೇತ್ರವಾರು ಜನಸಂಖ್ಯೆ ವಿವರ ಗಮನಿಸಿದರೆ ತುಮಕೂರಿನಲ್ಲಿ ಪುರುಷರು 11.11 ಲಕ್ಷ, ಮಹಿಳೆಯರು 11.16 ಲಕ್ಷ ಹಾಗೂ ಇತರರು 104 ಮಂದಿ ಸೇರಿದಂತೆ 22.27 ಲಕ್ಷ ಮತದಾರರಿದ್ದಾರೆ. ದಾವಣಗೆರೆ ಜಿಲ್ಲೆಯಲ್ಲಿ 7.05 ಲಕ್ಷ ಪುರುಷರು, 7 ಲಕ್ಷ ಮಹಿಳೆ, 120 ಮಂದಿ ಇತರ ಮತದಾರರು ಸೇರಿದಂತೆ ಒಟ್ಟು 14.05 ಲಕ್ಷ ಮಂದಿ ಮತದಾರರಿದ್ದಾರೆ. ಚಿತ್ರದುರ್ಗದಲ್ಲಿ 6.74 ಲಕ್ಷ ಪುರುಷ, 6.62 ಲಕ್ಷ ಮಹಿಳೆ, 99 ಇತರ ಸೇರಿದಂತೆ ಒಟ್ಟು 13.37 ಲಕ್ಷ ಮಂದಿ ಮತದಾರರಿದ್ದಾರೆ. ಶಿವಮೊಗ್ಗದಲ್ಲಿ 7.11 ಲಕ್ಷ ಪುರುಷ, 7.14 ಲಕ್ಷ ಮಹಿಳೆ, 61 ಮಂದಿ ಇತರರು ಸೇರಿದಂತೆ 14.26 ಲಕ್ಷ ಮಂದಿ ಮತದಾರರಿದ್ದಾರೆ.

ಪ್ರಮುಖ ರಾಜಕೀಯ ನಾಯಕರು:ಮಧ್ಯ ಕರ್ನಾಟಕದ ಎಲ್ಲ ನಾಲ್ಕು ಜಿಲ್ಲೆಗಳನ್ನು ಗಮನಿಸಿದರೆ ಇಲ್ಲಿ ಜನಪ್ರಿಯರಾಗಿ ಮೆರೆದ ರಾಜಕಾರಣಿಗಳು ಸಹ ಕಡಿಮೆ ಇಲ್ಲ. ತುಮಕೂರು ಜಿಲ್ಲೆಯಲ್ಲಿ ಜಿ.ಪರಮೇಶ್ವರ್, ಟಿಬಿ ಜಯಚಂದ್ರ, ಜಿಎಸ್ ಬಸವರಾಜ್, ಎಸ್. ಮಲ್ಲಿಕಾರ್ಜುನಯ್ಯ, ಕೆ. ಲಕ್ಕಪ್ಪ, ದಾವಣಗೆರೆ ಜಿಲ್ಲೆಯಲ್ಲಿ ಮಾಜಿ ಮುಖ್ಯಮಂತ್ರಿ ಎಂ ಪಿ ಪ್ರಕಾಶ್, ಮಾಜಿ ಸಚಿವ ಶಾಮನೂರು ಶಿವಶಂಕರಪ್ಪ, ಎಂ.ಪಿ.ರೇಣುಕಾಚಾರ್ಯ ಮತ್ತು ಎಸ್.ಎ.ರವೀಂದ್ರನಾಥ್ ಜನಪ್ರಿಯರಾಗಿದ್ದಾರೆ. ಚಿತ್ರದುರ್ಗದಲ್ಲಿ ಎಸ್​. ನಿಜಲಿಂಗಪ್ಪ, ಬಿ. ಶ್ರೀರಾಮುಲು, ಗೂಳಿಹಟ್ಟಿ ಶೇಖರ್, ಎಚ್​. ಆಂಜನೇಯ, ಶಿವಮೊಗ್ಗ ಜಿಲ್ಲೆಯಲ್ಲಿ ಜೆ.ಎಚ್.ಪಟೇಲ್, ಬಿ ಎಸ್ ಯಡಿಯೂರಪ್ಪ, ಎಸ್​. ಬಂಗಾರಪ್ಪ, ಕೆ.ಎಸ್​. ಈಶ್ವರಪ್ಪ, ನ್ಯಾ. ಎಂ. ರಾಮಾಜೋಯಿಸ್, ಕಡಿದಾಳ್ ಮಂಜಪ್ಪ, ಕಿಮ್ಮನೇ ರತ್ನಾಕರ್, ಕಾಗೋಡು ತಿಮ್ಮಪ್ಪ, ಅಪ್ಪಾಜಿಗೌಡ ಮುಂತಾದವರು ಹೆಸರುವಾಸಿಯಾಗಿದ್ದಾರೆ.

ಇದನ್ನೂ ಓದಿ:ಠೇವಣಿ ಮುಟ್ಟುಗೋಲು ಟೆನ್ಷನ್: 3 ಚುನಾವಣೆಗಳಲ್ಲಿ ಠೇವಣಿ ಜಪ್ತಿಯ ಸ್ವಾರಸ್ಯಕರ ಅಂಕಿಅಂಶ

Last Updated : Apr 26, 2023, 5:53 PM IST

ABOUT THE AUTHOR

...view details