ಬೆಂಗಳೂರು:ಗರುಡಾಚಾರ್ ಪಾಳ್ಯದಲ್ಲಿ ರಾತ್ರಿ ನಡೆದ ಪಲ್ಲಕ್ಕಿ ಉತ್ಸವದಲ್ಲಿ ಸ್ಟೆಪ್ ಹಾಕುವ ಮೂಲಕ ವಸತಿ ಸಚಿವ ಎಂಟಿಬಿ ನಾಗರಾಜ್ ಸಖತ್ ಮನರಂಜನೆ ನೀಡಿದ್ದಾರೆ.
ನಿಂಬೆ ಹಣ್ಣು ಬಾಯಲ್ಲಿಟ್ಟುಕೊಂಡು ಕುಣಿದ ಸಚಿವ ಎಂಟಿಬಿ ನಾಗರಾಜ್ ಮೊದಲು ನಿಂಬೆ ಹಣ್ಣು ಬಾಯಲ್ಲಿಟ್ಟುಕೊಂಡು ಹೆಜ್ಜೆ ಹಾಕಿದ ಸಚಿವರು ನಂತರ ವೀರಗಾಸೆ ತಂಡತೊಂದಿಗೆ ಕುಣಿದು ಎಲ್ಲರನ್ನೂ ಖುಷಿಪಡಿಸಿದರು. ಈ ಹಿಂದೆಯೂ ಚುನಾವಣಾ ಪ್ರಚಾರಾದ ವೇಳೆ ನಾಗಿಣಿ ಡ್ಯಾನ್ಸ್ ಮಾಡಿ ಸುದ್ದಿಯಾಗಿದ್ದ ಸಚಿವರು, ನಿನ್ನೆ ನಿಂಬೆಹಣ್ಣನ್ನ ಬಾಯಲ್ಲಿಟ್ಟುಕೊಂಡು ಡ್ಯಾನ್ಸ್ ಮಾಡಿರೋ ವಿಡಿಯೋ ಜಾಲತಾಣದಲ್ಲಿ ಫುಲ್ ವೈರಲ್ ಆಗಿದೆ.
ಶ್ರೀರಾಮನವಮಿ ಅಂಗವಾಗಿ ಬೆಂಗಳೂರಿನ ಗರುಡಾಚಾರ್ ಪಾಳ್ಯದಲ್ಲಿ ಹತ್ತು ಸಾವಿರಕ್ಕೂ ಹೆಚ್ಚು ಜನ ಸೇರಿದ್ದರು. ಕಳೆದ 40 ವರ್ಷಗಳಿಂದ ಸಚಿವ ಎಂಟಿಬಿ ನಾಗರಾಜ್ ಕುಟುಂಬದವರು ಈ ಉತ್ಸವವನ್ನ ಅದ್ಧೂರಿಯಾಗಿ ನಡೆಸಿಕೊಂಡು ಬಂದಿದ್ದಾರೆ. ನಿನ್ನೆ ಅಂಬಾರಿಯಲ್ಲಿ ಶ್ರೀ ಮಂಜುನಾಥ ಸ್ವಾಮಿಯ ಮೆರವಣಿಗೆ ಮಾಡಲಾಯಿತು.
ಸಚಿವರ ಕುಟುಂಬದವರೆಲ್ಲಾ ಸೇರಿ ಶ್ರೀ ಮಂಜುನಾಥ ದೇವರ ಅಂಬಾರಿಗೆ ಪೂಜೆ ಸಲ್ಲಿಸಿದರು. ಈ ವೇಳೆ ನಾದಸ್ವರ, ತಮಟೆ ವಾದ್ಯ, ಕೀಲು ಕುದುರೆ, ನಾಯಂಡಿ ನೃತ್ಯ, ಗಾರಡಿ ಗೊಂಬೆಕುಣಿತ, ಮರಗಾಲು ಮನುಷ್ಯ ಮುಂತಾದ ಸಾಸ್ಕೃತಿಕ ಕಾರ್ಯಕ್ರಮಗಳು ಸಾರ್ವಜನಿಕರನ್ನು ಆಕರ್ಷಿಸಿದವು.