ಬೆಂಗಳೂರು: ಕರ್ನಾಟಕ ಗೃಹ ಮಂಡಳಿ ವತಿಯಿಂದ ಅಭಿವೃದ್ಧಿಪಡಿಸಲು ಉದ್ದೇಶಿಸಲಾಗಿರುವ ಟೌನ್ಶಿಪ್ ಹಾಗೂ ವಿಲ್ಲಾ ಯೋಜನೆಗೆ ಅಗತ್ಯ ಜಮೀನು ಗುರುತಿಸುವ ಕಾರ್ಯ ತಕ್ಷಣವೇ ಆರಂಭಿಸುವಂತೆ ವಸತಿ ಸಚಿವ ಜಮೀರ್ ಅಹಮದ್ ಖಾನ್ ಸೂಚನೆ ನೀಡಿದ್ದಾರೆ. ಇಂದು ಗೃಹಮಂಡಳಿ ಪ್ರಗತಿ ಪರಿಶೀಲನೆ ಸಭೆಯಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ರಾಜಧಾನಿಯ ಐದು ಕಡೆ ತಲಾ ಎರಡು ಸಾವಿರ ಎಕರೆಯಲ್ಲಿ ಟೌನ್ಶಿಪ್ ಹಾಗೂ ತಲಾ 500 ಎಕರೆಯಲ್ಲಿ ನಾಲ್ಕು ಕಡೆ ವಿಲ್ಲಾ ಯೋಜನೆಗೆ ಜಮೀನು ಗುರುತಿಸಿ ಪ್ರಕ್ರಿಯೆ ಆರಂಭಿಸಿ. ಅದಕ್ಕಾಗಿ ಅಧಿಕಾರಿಗಳ ವಿಶೇಷ ತಂಡ ರಚಿಸಲು ನಿರ್ದೇಶನ ನೀಡಿದರು.
ಟೌನ್ಶಿಪ್ ಹಾಗೂ ವಿಲ್ಲಾ ಯೋಜನೆ ಕಾಲ ಮಿತಿಯಲ್ಲಿ ಪೂರ್ಣಗೊಳ್ಳಬೇಕಾಗಿದೆ. ಹೀಗಾಗಿ ರೂಪುರೇಷೆ ಹಾಕಿಕೊಂಡು ಪ್ರತ್ಯೇಕ ವಿಭಾಗ ರಚನೆ ಮಾಡಿ ಕಾರ್ಯಪ್ರವೃತ್ತರಾಗಿ ಎಂದು ಸೂಚನೆ ನೀಡಿದರು. ರಾಜಧಾನಿಯ ನಾಲ್ಕು ಕಡೆ ಮೆಟ್ರೋ ಸೇರಿ ಸಾರಿಗೆ ಹಾಗೂ ಇತರೆ ಮೂಲ ಸೌಕರ್ಯ ವ್ಯವಸ್ಥೆ ಲಭ್ಯ ಇರುವ ಕಡೆ ಜಮೀನು ಗುರುತಿಸಿ 50:50 ಆಧಾರದಲ್ಲಿ ಜಮೀನು ಮಾಲೀಕರ ಜೊತೆ ಒಪ್ಪಂದ ಮಾಡಿಕೊಂಡು ಬಡಾವಣೆ ನಿರ್ಮಾಣ ಕಾರ್ಯಕ್ಕೆ ವೇಗ ನೀಡಬೇಕು ಎಂದು ಸೂಚಿಸಿದರು. ಗೃಹ ಮಂಡಳಿ ವತಿಯಿಂದ ಬೆಂಗಳೂರು ನಗರ ಹೊರತುಪಡಿಸಿ ಇತರೆ ಕಡೆ ಬಿಪಿಲ್ ಕುಟುಂಬಗಳಿಗೆ ರಿಯಾಯಿತಿ ದರದಲ್ಲಿ ನಿವೇಶನ ಅಥವಾ ಮನೆ ನಿರ್ಮಿಸಿಕೊಡುವ ಯೋಜನೆ ರೂಪಿಸಬೇಕು ಎಂಬ ಚಿಂತನೆ ಇದೆ. ಈ ಬಗ್ಗೆ ಸಾಧಕ ಬಾಧಕ ಅಧ್ಯಯನ ಮಾಡಿ ವರದಿ ಕೊಡಿ ಎಂದು ಇದೇ ಸಂದರ್ಭದಲ್ಲಿ ನಿರ್ದೇಶನ ನೀಡಿದರು.
ಸರ್ಕಾರದಿಂದ ಜಮೀನು ಪಡೆದು ಬಡಾವಣೆ ಅಭಿವೃದ್ಧಿ ಅಥವಾ ನಾವೇ ಮಾಲೀಕರ ಜತೆ 50:50 ಒಪ್ಪಂದದಡಿ ಬಡಾವಣೆ ಅಭಿವೃದ್ಧಿ ಪಡಿಸಿ ಬಡ ಕುಟುಂಬಗಳಿಗೆ ಸೂರು ಕಲ್ಪಿಸಬಹುದೇ ಎಂಬ ಬಗ್ಗೆ ಪರಿಶೀಲಿಸಿ ಪ್ರಸ್ತಾವನೆ ಸಿದ್ದಪಡಿಸಿ, ಮುಖ್ಯಮಂತ್ರಿ ಅವರ ಜತೆ ಚರ್ಚಿಸುತ್ತೇನೆ ಎಂದು ಹೇಳಿದರು.
ಜಮೀನು ಸ್ವಾಧೀನ ಸೇರಿದಂತೆ ನ್ಯಾಯಲಯದಲ್ಲಿರುವ 122 ವ್ಯಾಜ್ಯ ಇತ್ಯರ್ಥಕ್ಕಾಗಿ ಅದಾಲತ್ ಮಾದರಿಯಲ್ಲಿ ಅರ್ಜಿದಾರರ ಜತೆ ಸಂಧಾನ ಸಭೆ ಏರ್ಪಡಿಸಲು ಸಚಿವರು ಇದೇ ವೇಳೆ ಅಧಿಕಾರಿಗಳಿಗೆ ಸೂಚಿಸಿದರು.