ಬೆಂಗಳೂರು: ವರದಕ್ಷಿಣೆ ಕಿರುಕುಳ ಹಿನ್ನೆಲೆ ಗೃಹಿಣಿಯೊಬ್ಬಳು ಅನುಮಾನಾಸ್ಪದ ರೀತಿಯಲ್ಲಿ ಸಾವನ್ನಪ್ಪಿರುವ ಘಟನೆ ರಾಮಮೂರ್ತಿನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಜರುಗಿದ್ದು, ಪ್ರಕರಣ ತಡವಾಗಿ ಬೆಳಕಿಗೆ ಬಂದಿದೆ.
ಶೃತಿ (31) ಮೃತ ಮಹಿಳೆ. ಪತಿ ಮಿಥುನ್ ರೆಡ್ಡಿಯನ್ನು ವಶಕ್ಕೆ ಪಡೆದಿರುವ ರಾಮಮೂರ್ತಿನಗರ ಪೊಲೀಸರು ಹೆಚ್ಚಿನ ತನಿಖೆ ನಡೆಸಿ ಇಂದು ಕೋರ್ಟ್ಗೆ ಹಾಜರುಪಡಿಸಿದ ಬಳಿಕ ಬಂಧನಕ್ಕೊಳಪಡಿಸಿದ್ದಾರೆ.
ಅನುಮಾನಾಸ್ಪದ ರೀತಿಯಲ್ಲಿ ಗೃಹಿಣಿ ಸಾವು ಪ್ರಕರಣದ ಹಿನ್ನೆಲೆ..
ಹೆಚ್.ಎಸ್.ಆರ್ ಲೇಔಟ್ ನಿವಾಸಿ ಶೃತಿ 2014ರಲ್ಲಿ ಹೊರಮಾವು ಮುಖ್ಯರಸ್ತೆ ಬಾಣಸವಾಡಿಯ ಮುನಿರೆಡ್ಡಿ ಬಡಾವಣೆ ನಿವಾಸಿ ಮಿಥುನ್ ರೆಡ್ಡಿ ಎಂಬುವರನ್ನು ವಿವಾಹವಾಗಿದ್ದರು. ಬ್ಯಾಡ್ಮಿಂಟನ್ ತರಬೇತುದಾರನಾಗಿದ್ದ ಮಿಥುನ್ ಕುಡಿತದ ಚಟಕ್ಕೆ ಅಂಟಿಸಿಕೊಂಡಿದ್ದ ಎನ್ನಲಾಗ್ತಿದೆ. ಅಲ್ಲದೆ, ಗಂಡ ಹಾಗೂ ಅತ್ತೆ ಭಾಗ್ಯಮ್ಮ ವರದಕ್ಷಿಣೆಗಾಗಿ ಕಾಡತೊಡಗಿದ್ದರು ಎಂದು ಹೇಳಲಾಗ್ತಿದೆ.
ಕಳೆದ ಶುಕ್ರವಾರ ವರಮಹಾಲಕ್ಷೀ ಹಬ್ಬದಂದು ಗಂಡ ಹಾಗೂ ಅತ್ತೆ ತವರು ಮನೆಯಿಂದ ಒಂದು ಲಕ್ಷ ರೂ. ಹಣ ತರುವಂತೆ ಶೃತಿಗೆ ಒತ್ತಾಯಿಸಿದ್ದಾರೆ. ಹಾಗಾಗಿ 35 ಸಾವಿರ ಹಣ ತಂದು ಕೊಟ್ಟು, 65 ಸಾವಿರ ಬಾಕಿ ಉಳಿಸಿಕೊಂಡಿದ್ದ ಶೃತಿಗೆ ಬಾಕಿ ಹಣ ತರುವಂತೆ ಸೋಮವಾರ ಸಂಜೆ ಗಂಡ ಹಾಗೂ ಅತ್ತೆ ಹಲ್ಲೆ ಮಾಡಿದ್ದಾರೆ. ಇದರಿಂದ ಮನನೊಂದ ಶೃತಿ ಆತ್ಮಹತ್ಯೆಗೆ ಶರಣಾಗಿದ್ದಾಳೆ ಎಂದು ಎಂದು ತಿಳಿದುಬಂದಿದೆ.
ಸದ್ಯ ಮಿಥುನ್ ಹಾಗೂ ಅವರ ಕುಟುಂಬದವರು ಕೊಲೆ ಮಾಡಿ ನೇಣು ಹಾಕಿದ್ದಾರೆಂದು ಆರೋಪಿಸುತ್ತಿರುವ ಶೃತಿ ಕುಟುಂಬಸ್ಥರು ಸೂಕ್ತ ಕ್ರಮ ಕೈಗೊಳ್ಳುವಂತೆ ಪೊಲೀಸರಿಗೆ ಒತ್ತಾಯಿಸಿದ್ದಾರೆ.