ಬೆಂಗಳೂರು:ಪ್ರಧಾನಮಂತ್ರಿ ಆವಾಸ್ ಯೋಜನೆಯಡಿ ನಗರ ಹಾಗೂ ಗ್ರಾಮೀಣ ಪ್ರದೇಶಗಳ ವ್ಯಾಪ್ತಿಯಲ್ಲಿ ಕಳೆದೆರಡು ವರ್ಷದಲ್ಲಿ ಗ್ರಾಮೀಣ ಭಾಗಕ್ಕಿಂತಲೂ ನಗರ ಭಾಗದಲ್ಲಿ ಹೆಚ್ಚು ಮನೆಗಳ ನಿರ್ಮಾಣ ಆಗಿರುವುದು ಬೆಳಕಿಗೆ ಬಂದಿದೆ.
2019-20 ಹಾಗೂ 2020-21ನೇ ಸಾಲಿನಲ್ಲಿ ಪ್ರಧಾನಮಂತ್ರಿ ಆವಾಸ್ (ಪಿಎಂಎವೈ) ಯೋಜನೆಯಡಿ ನಗರ ಭಾಗಕ್ಕೆ ಹೆಚ್ಚು ಮನೆಗಳನ್ನು ನೀಡಲಾಗಿದೆ. ಅಂಕಿ-ಅಂಶಗಳ ಪ್ರಕಾರ 2019-20ನೇ ಸಾಲಿನಲ್ಲಿ ನಗರ ಭಾಗಗಳಿಗೆ ಸಹಭಾಗಿತ್ವದಲ್ಲಿ ಕೈಗೆಟುಕುವ ವಸತಿ ನಿರ್ಮಾಣ(ಎಎಚ್ಪಿ) ಯೋಜನೆಯಡಿ 279 ಮನೆಗಳನ್ನು ನೀಡಲಾಗಿದೆ. 40 ಮನೆಗಳು ಸಂಪೂರ್ಣ ನಿರ್ಮಾಣಗೊಂಡಿವೆ. ಇನ್ನು ಫಲಾನುಭವಿ ನೇತೃತ್ವದ ವೈಯಕ್ತಿಕ ಮನೆ ನಿರ್ಮಾಣ ಅಥವಾ ವರ್ಧನೆ(ಬಿಎಲ್ಸಿ) ಅಡಿ ಒಟ್ಟು 59,779 ಮನೆ ಮಂಜೂರು ಮಾಡಲಾಗಿದ್ದು, ಇದರಲ್ಲಿ 3,163 ಮನೆಗಳ ನಿರ್ಮಾಣ ಪೂರ್ಣಗೊಂಡಿದೆ.
ಅದೇ ಸಾಲಿನಲ್ಲಿ ಒಟ್ಟು 60,658 ಮನೆಗಳನ್ನು ಮಂಜೂರು ಮಾಡಲಾಗಿದ್ದು, ಅದರಲ್ಲಿ ಕೇವಲ 3,203 ಮನೆಗಳು ಮಾತ್ರ ನಿರ್ಮಾಣಗೊಂಡಿವೆ. ಇದೇ ವಿಭಾಗದಲ್ಲಿ 2020- 21ರಲ್ಲಿ ಗಮನಿಸಿದಾಗ ಎಎಚ್ಪಿ ಅಡಿ ಯಾವುದೇ ಮನೆ ಮಂಜೂರಾಗಿಲ್ಲ. ಬಿಎಲ್ಸಿ ಅಡಿ ಒಟ್ಟು 6,170 ಮನೆಗಳನ್ನು ನೀಡಿದ್ದರೆ, ಅದರಲ್ಲಿ ಒಂದು ಮನೆಯ ನಿರ್ಮಾಣ ಕೂಡ ಆಗಿಲ್ಲ. ಒಟ್ಟಾರೆ ಎರಡು ವರ್ಷಗಳ ನೀಡಿಕೆ ಹಾಗೂ ನಿರ್ಮಾಣವನ್ನು ಗಮನಿಸಿದಾಗ ಒಟ್ಟು 66,828 ಮನೆಗಳನ್ನು ಮಂಜೂರು ಮಾಡಿದ್ದು, ಕೇವಲ 3,203 ಮನೆಗಳು ಮಾತ್ರ ನಿರ್ಮಾಣವಾಗಿವೆ.
ಗ್ರಾಮೀಣ ಭಾಗದ ಸ್ಥಿತಿ:
ನಗರ ಪ್ರದೇಶದಲ್ಲಿ ಈ ಸ್ಥಿತಿ ಇದ್ದರೆ, ಗ್ರಾಮೀಣ ಭಾಗದಲ್ಲಿನ ಮನೆಗಳ ನೀಡಿಕೆ ಸಹ ಕಡಿಮೆಯಾಗಿದೆ. ನಿರ್ಮಾಣ ಅದಕ್ಕಿಂತಲೂ ಹೀನವಾಗಿದೆ. 2019-20ರಲ್ಲಿ ಬಿಎಲ್ಸಿ ಅಡಿ 39,513 ಮನೆಗಳ ನೀಡಿಕೆಯಾಗಿದ್ದು, ಕೇವಲ 394 ಮಾತ್ರ ನಿರ್ಮಾಣವಾಗಿವೆ. 2020-21ರಲ್ಲಿ 1,51,715 ಮನೆಗಳನ್ನು ನೀಡಲಾಗಿದ್ದು, ಕಳೆದ ವಾರದವರೆಗೂ ಯಾವುದೇ ಮನೆಗಳ ಹಂಚಿಕೆ ಆಗಿರಲಿಲ್ಲ. ಆದರೆ ಮಸ್ಕಿ ಹಾಗೂ ಬಸವಕಲ್ಯಾಣ ವಿಧಾನಸಭಾ ಕ್ಷೇತ್ರಗಳಿಗೆ ಉಪಚುನಾವಣೆ ಘೋಷಣೆಯಾದ ಹಿನ್ನೆಲೆಯಲ್ಲಿ ಎರಡು ಕ್ಷೇತ್ರಗಳಿಗೆ ತಲಾ 7,500 ಮನೆಗಳನ್ನು ಹಂಚಿಕೆ ಮಾಡಲಾಗಿದೆ.